More

    ಮುಳ್ಳುಗುಡ್ಡೆ ಶಾಲೆ ಮುಚ್ಚುವ ಭೀತಿ

    ಹೆಬ್ರಿ: ಕೋವಿಡ್ ಆತಂಕದ ದಿನಗಳ ಬಳಿಕ ಶಾಲೆಗಳು ಆರಂಭವಾಗಿ ವಿದ್ಯಾರ್ಥಿಗಳು ನಿತ್ಯ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಹೆಬ್ರಿ ಸಮೀಪದ ಮುಳ್ಳುಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಾನ್ಯತೆ ನವೀಕರಣಗೊಳ್ಳದೆ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯ ಡೋಲಾಯಮಾನವಾಗಿದೆ.

    1951ರಲ್ಲಿ ಊರಿನ ಪಟೇಲರು, ಶಾನುಭೋಗರು ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಆರಂಭವಾದ ಶಾಲೆಯಲ್ಲಿ ಪ್ರಸ್ತುತ ಸುಮಾರು 48 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಈ ಶಾಲೆ ಮುಚ್ಚಿದರೆ ಕೂಲಿನಾಲಿ ಹಾಗೂ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುವ ಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದೆ.

    ಶಾಲೆಯ ಮಾನ್ಯತೆ 2020ಕ್ಕೆ ಮುಗಿದಿದ್ದು, 5,000 ರೂ. ಶುಲ್ಕ ಪಾವತಿಸಿದ್ದರೂ ನವೀಕರಣಗೊಂಡಿಲ್ಲ. ಮುಳ್ಳು ುಡ್ಡೆ ಶಾಲೆಯ ವ್ಯವಸ್ಥಿತ ಶಿಕ್ಷಣ ಇಲ್ಲಿನ ಬಡವರಿಗೆ ವರವಾಗಿತ್ತು. ಶಿಕ್ಷಣ ಇಲಾಖೆ ಸೃಷ್ಟಿಸಿದ ಗೊಂದಲದಿಂದ ಇಲ್ಲಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಊರಿನ ಜನ. ಆದ್ದರಿಂದ ಶಿಕ್ಷಣ ಇಲಾಖೆ ಆದಷ್ಟು ಬೇಗ ಶಾಲೆಯ ಮಾನ್ಯತೆ ನವೀಕರಣಗೊಳಿಸಿ ಊರಿನ ಜನತೆಗೆ ನ್ಯಾಯವನ್ನು ದೊರಕಿಸಿ ಕೊಡಬೇಕಾಗಿದೆ.

    ನಿರ್ವಹಣೆ ಕಷ್ಟ: ಅನುದಾನಿತ ಶಾಲೆಗಳು ಸರ್ಕಾರದ ಒಂದು ಭಾಗವಾಗಿದ್ದರೂ ಬಿಸಿಯೂಟಕ್ಕೆ ಅಕ್ಕಿ ಹೊರತುಪಡಿಸಿ 4.70 ರೂ. ನೀಡುತ್ತದೆ. ಉಳಿದೆಲ್ಲ ಖರ್ಚನ್ನು ದಾನಿಗಳ ನೆರವಿನಿಂದ ಭರಿಸಬೇಕು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಬೇಕು ಇವೆಲ್ಲವೂ ಚಾಲೆಂಜ್ ಆಗಿದೆ. ಮಾನ್ಯತೆ ನವೀಕರಣಗೊಳ್ಳದ ಕಾರಣ ಮುಖ್ಯಶಿಕ್ಷಕರಿಗೆ ಮುಂಬಡ್ತಿ ಸಿಗುತ್ತಿಲ್ಲ. ಮೂರು ಜನ ಗೌರವ ಶಿಕ್ಷಕರನ್ನು ನಿಯೋಜಿಸಿ 18,000 ರೂ. ತಿಂಗಳಿಗೆ ನೀಡಲಾಗುತ್ತದೆ. ಸುಮಾರು ಹತ್ತು ಸಾವಿರ ನಿರ್ವಹಣಾ ವೆಚ್ಚ ತಗಲುತ್ತದೆ. ಇವೆಲ್ಲವೂ ಆಡಳಿತ ಮಂಡಳಿಗೆ ಹೊರೆಯಾಗಿದೆ.

    ಸರ್ಕಾರವೇ ಮುನ್ನಡೆಸಲಿ: ಶಾಲೆಯು ಸುಸಜ್ಜಿತ ಕಟ್ಟಡ ಹೊಂದಿದ್ದು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಪ್ರೋತ್ಸಾಹ ನೀಡಲಾಗುತ್ತಿದೆ. ಒಂದು ವೇಳೆ ಸರ್ಕಾರವೇ ಶಾಲೆ ಮುನ್ನಡೆಸುವುದಾದರೆ ಆಡಳಿತ ಮಂಡಳಿ ಯಾವುದೇ ತಕರಾರುಗಳಿಲ್ಲದೆ ಒಪ್ಪಿಸಲು ಸಿದ್ಧವಿದೆ. ಆದರೇ ಶಾಲೆ ಎಂದಿಗೂ ಮುಚ್ಚಬಾರದು. ಒಂದು ವೇಳೆ ಶಿಕ್ಷಣ ಇಲಾಖೆಯು ಶಾಲೆಯನ್ನು ಮುಚ್ಚಲು ಪ್ರಯತ್ನಿಸಿದರೆ ಕಠಿಣ ಹೋರಾಟ ಮಾಡಲಾಗುವುದು ಎನ್ನುತ್ತಾರೆ ಊರಿನ ಜನತೆ.

    ಶಾಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಶಿಕ್ಷಣ ಇಲಾಖೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುಲ್ಕವನ್ನು ಪಾವತಿಸಿಕೊಂಡು ನವೀಕರಣ ಮಾಡಿಲ್ಲ. ದಯವಿಟ್ಟು ಇಲಾಖೆಯ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಪರಿಸ್ಥಿತಿಯ ಬಗ್ಗೆ ಗಮನಹರಿಸಿ ಶಾಲೆಯನ್ನು ಉಳಿಸಿಕೊಡಬೇಕಾಗಿದೆ.
    _ಮೋಹನ್‌ದಾಸ್ ನಾಯಕ್
    ಅಧ್ಯಕ್ಷ, ಮುಳ್ಳುಗುಡ್ಡೆ ಅನುದಾನಿತ ಶಾಲೆ

    ನಮ್ಮ ಸಮುದಾಯದ ಅನೇಕ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು, ಒಂದು ವೇಳೆ ಕನ್ನಡ ಶಾಲೆ ಮುಚ್ಚಿದರೆ ವಿದ್ಯಾರ್ಥಿಗಳ ಭವಿಷ್ಯ ಕತ್ತಲಾಗಲಿದೆ. ನಮ್ಮ ಏಳಿಗೆಯೇ ಶಿಕ್ಷಣದ ಮೇಲೆ ನಿಂತಿದೆ ದಯವಿಟ್ಟು ಸಂಬಂಧಪಟ್ಟ ಇಲಾಖೆಯವರು ಕ್ರಮವಹಿಸಿ, ಶಾಲೆ ಉಳಿಸಿ.
    _ ಕೃಷ್ಣ ಎಸ್.
    ಸಂಚಾಲಕರು, ದಸಂಸ ಶಿವಪುರ

    ಶಾಲೆಯ ಮಾನ್ಯತೆ ನವೀಕರಣದ ಬಗ್ಗೆ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮವಹಿಸಲಾಗುವುದು.
    _ ನವೀನ್ ಭಟ್,
    ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts