More

    ಘಟಕದಲ್ಲಿ ತಾಂತ್ರಿಕ ದೋಷದಿಂದ ಹಟ್ಟಿ ಸುತ್ತಮುತ್ತ ಜೀವಜಲಕ್ಕೆ ತತ್ವಾರ

    ಬಲಭೀಮರಾವ ಕುಲಕರ್ಣಿ ಹಟ್ಟಿಚಿನ್ನದಗಣಿ
    ಪಟ್ಟಣದಲ್ಲಿ ಜನ-ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣಕ್ಕೆ ಪೂರೈಸುವ ಘಟಕದ ಮೋಟಾರಿನಲ್ಲಿ ನಿರಂತರ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಮೋಟಾರ್ ಕೆಟ್ಟರೆ ಸರಿಪಡಿಸುವವರು ದಿಕ್ಕಿಲ್ಲದಂತಾಗಿದೆ.

    ಕೋಠಾ, ಗುರುಗುಂಟಾ, ಪೈದೊಡ್ಡಿ, ಹಟ್ಟಿ ಪಂಚಾಯಿತಿಗಳ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಒಂದು ವಾರದಿಂದ 15ದಿನಕ್ಕೊಮ್ಮೆ ನೀರು ಹರಿಸಲಾಗುತ್ತದೆ. ಇತ್ತೀಚಿಗೆ ಮೋಟಾರ್ ಕೆಟ್ಟಾಗ 2 ತಿಂಗಳು ನೀರು ಸರಬರಾಜು ಇರಲಿಲ್ಲ. ಬಹುಗ್ರಾಮ ಯೋಜನೆಯಡಿ ಪ್ರತಿದಿನ ನೀರು ಪೂರೈಸಬೇಕೆಂಬ ನಿಯಮವಿದ್ದರೂ ನಿರ್ಲಕ್ಷೃ ವಹಿಸಲಾಗಿದೆ. ಹೀಗಾಗಿ 15ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

    ಘಟಕದಲ್ಲಿ ತಾಂತ್ರಿಕ ದೋಷದಿಂದ ಹಟ್ಟಿ ಸುತ್ತಮುತ್ತ ಜೀವಜಲಕ್ಕೆ ತತ್ವಾರ
    ಟಣಮನಕಲ್ ನೀರು ಶುದ್ಧೀಕರಣ ಯಂತ್ರ.

    ಪಟ್ಟಣದ ಜನರು ನೀರಿಗಾಗಿ ಕೊಡಗಳನ್ನು ಹಿಡಿದು ತಿರುಗಾಡುವಂತಾಗಿದೆ. ಘಟಕದ ದುರಸ್ತಿ ನಡೆಯುತ್ತಲೇ ಇದ್ದರೂ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ನೀರಿನ ಸಮಸ್ಯೆ ಇತ್ಯರ್ಥವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹಟ್ಟಿ ಪಪಂ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆ ಕೊನೆಗಾಣಿಸಲು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದ್ದು, ಟಣಮನಕಲ್ ಗ್ರಾಮದ ಹತ್ತಿರವಿರುವ ಕೃಷ್ಣಾ ನದಿಯಿಂದ ನೀರು ಶುದ್ಧಿಕರಿಸಿ ಪೂರೈಕೆ ಮಾಡಲಾಗುತ್ತಿದೆ.

    ನೀರು ಪೂರೈಸಲು ಘಟಕದಲ್ಲಿ 180 ಎಚ್‌ಪಿ ಸಾಮರ್ಥ್ಯದ 3 ಮೋಟಾರುಗಳನ್ನು ನದಿಯಲ್ಲಿ ಅವೈಜ್ಞಾನಿಕವಾಗಿ ಅಳವಡಸಲಾಗಿದೆ. ನಿರ್ವಹಣೆ ಕೊರತೆಯಿಂದ ಈ ಮೋಟಾರಗಳು ಮೇಲಿಂದ ಮೇಲೆ ರಿಪೇರಿಗೆ ಬರುತ್ತಿವೆ. ಮೋಟಾರಿಗೆ ಕಳಪೆ ವೈಂಡಿಂಗ್ ಮಾಡಿದ್ದರಿಂದ ಕನಿಷ್ಠ 6 ತಾಸು ನಡೆಯಬೇಕಾದ ಮೋಟಾರು ಕೇವಲ ಎರಡು ಗಂಟೆಯಲ್ಲಿ ಬಿಸಿಯಾಗಿ ನಿಲ್ಲುತ್ತದೆ. ಇದರಿಂದ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ.

    ಘಟಕದಲ್ಲಿ ತಾಂತ್ರಿಕ ದೋಷದಿಂದ ಹಟ್ಟಿ ಸುತ್ತಮುತ್ತ ಜೀವಜಲಕ್ಕೆ ತತ್ವಾರ
    ಹಟ್ಟಿ ಪೊಲೀಸ್ ಠಾಣೆ ಮುಂದೆ ನೀರು ತುಂಬಿಕೊಳ್ಳುತ್ತಿರುವ ಜನರು.

    ಪೈಪ್‌ಲೈನ್ ವ್ಯವಸ್ಥೆ ಅವೈಜ್ಞಾನಿಕ

    ನೀರು ಸಂಗ್ರಹಗಾರ ಮೇಲ್ತೊಟ್ಟಿಯಿಂದ 2 ಇಂಚಿನ ಪೈಪ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 4 ಇಂಚು ಮುಖ್ಯ ಪೈಪ್‌ಗಳು, ಕಾಲನಿಗಳಿಗೆ ಬರುವ ಪೈಪ್‌ಗಳು 3 ಇಂಚು, ನಲ್ಲಿಯವರೆಗೆ ಸಂಪರ್ಕ ಕಲ್ಪಿಸಲು 2 ಇಂಚು ಹಾಗೂ ಮನೆಗಳಿಗೆ ಅರ್ಧ ಇಂಚು ಅಳತೆಯಂತೆ ವೈಜ್ಞಾನಿಕವಾಗಿ ವ್ಯವಸ್ಥೆ ಕಲ್ಪಿಸಿದರೆ ನೀರು ವ್ಯವಸ್ಥಿತವಾಗಿ ಪೂರೈಕೆಯಾಗುತ್ತದೆ. ಆದರೆ, ಮೇಲ್ತೊಟ್ಟಿಯಿಂದ ಮನೆಗೆ ಪೂರೈಸುವ ನಲ್ಲಿಯವರೆಗೂ 2ಇಂಚಿನ ಪೈಪ್‌ಗಳನ್ನು ಅಳವಡಿಸಿರುವುದರಿಂದ, ನೀರು ಪೂರೈಕೆಯಾದರೂ ಕೊನೆಯ ಭಾಗದ ಮನೆಗಳಿಗೆ ನೀರು ಸಿಗುತ್ತಿಲ್ಲ. ಆರಂಭದ ಮನೆಯವರು ನಲ್ಲಿ ಬಂದ್ ಮಾಡಿದರೆ ಇಲ್ಲವೇ ಮುಂದಿನ ಮನೆಯವರು ಮೋಟಾರ್ ಹಚ್ಚಿದರೆ ಮಾತ್ರ ನೀರು ಪಡೆಯುವಂತಾಗಿದೆ. ಈ ಗೊಂದಲವನ್ನು ಪರಿಹರಿಸಲು ಸಮರ್ಪಕ ಪೈಪ್‌ಲೈನ್ ಅಳವಡಿಸಬೇಕಿದೆ.

    ಘಟಕದಲ್ಲಿ ತಾಂತ್ರಿಕ ದೋಷದಿಂದ ಹಟ್ಟಿ ಸುತ್ತಮುತ್ತ ಜೀವಜಲಕ್ಕೆ ತತ್ವಾರ
    ಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿ ಹೊರನೋಟ.

    ಪೂರ್ಣಗೊಳ್ಳದ ಪ್ರತ್ಯೇಕ ಜಾಕ್‌ವೆಲ್ ಕಾಮಗಾರಿ

    ಪ್ರತ್ಯೇಕ ಜಾಕವೆಲ್ ನಿರ್ಮಿಸಲು ಹಟ್ಟಿಚಿನ್ನದ ಗಣಿ ಕಂಪನಿಯ 2 ಕೋಟಿ ರೂ. ಅನುದಾನದಲ್ಲಿ ಕಳೆದ 2 ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. 6 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಪ್ರತಿ ಸಾರಿಯೂ 1 ತಿಂಗಳ ಕಾಲಾವಕಾಶ ತೆಗೆದುಕೊಳ್ಳುವ ಅಧಿಕಾರಿಗಳ ಧೋರಣೆಯಿಂದ ಪಟ್ಟಣದ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಹಟ್ಟಿ ಪಟ್ಟಣಕ್ಕೆ 2023ರ ಜ.25ರೊಳಗೆ ಕುಡಿವ ನೀರು ಪೂರೈಸದಿದ್ದರೆ ಅಧಿಕಾರಿಗಳನ್ನು ಸಾರ್ವಜನಿಕರ ಮಧ್ಯೆ ನಿಲ್ಲಿಸಿ ಛೀಮಾರಿ ಹಾಕಿಸಲಾಗುವುದೆಂದು ಕಳೆದ ಡಿಸೆಂಬರ್‌ನಲ್ಲಿ ಜಾಕವೆಲ್ ಕಾಮಗಾರಿ ವೀಕ್ಷಿಸಿದ ಸಂಸದ ರಾಜಾ ಅಮರೇಶ್ವರ ನಾಯಕ ಎಚ್ಚರಿಕೆ ನೀಡಿ 4 ತಿಂಗಳಾದರೂ ಏನೂ ಪ್ರಗತಿ ಕಂಡಿಲ್ಲ.

    ಆಡಳಿತ ವೈಫಲ್ಯವೇ ಇದಕ್ಕೆಲ್ಲ ಕಾರಣ

    ಬಹುಗ್ರಾಮ ಯೋಜನೆ ಘಟಕದ ಬಳಿಯೇ ಹಟ್ಟಿಚಿನ್ನದಗಣಿ ಕಂಪನಿಯ ಜಾಕ್‌ವೆಲ್ ಇದೆ. ಕಂಪನಿಯ ಚಿನ್ನ ಉತ್ಪಾದನೆಗೆ ಹಾಗೂ ಕಾಲನಿಗಳಿಗೆ ನಿರ್ವಿಘ್ನವಾಗಿ ನೀರು ಪೂರೈಸಲಾಗುತ್ತಿದೆ. ಮೋಟಾರ್ ಕೆಟ್ಟರೆ 4ರಿಂದ 5 ಗಂಟೆಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಆದರೆ ಬಹುಗ್ರಾಮ ಕುಡಿವ ನೀರಿನ ಯೋಜನೆಯ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ತಿಂಗಳುಗಟ್ಟಲೆ ನಿರ್ಲಕ್ಷ ವಹಿಸಲಾಗುತ್ತದೆ.

    ಘಟಕದಲ್ಲಿ ತಾಂತ್ರಿಕ ದೋಷದಿಂದ ಹಟ್ಟಿ ಸುತ್ತಮುತ್ತ ಜೀವಜಲಕ್ಕೆ ತತ್ವಾರ
    ಕೋಠಾ ರಸ್ತೆ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ನಿರುಪಯುಕ್ತವಾಗಿರುವುದು.

    ಸದ್ಯದ ಪರಿಸ್ಥಿತಿ ಹೀಗಿದೆ…

    ಕೋಠಾ ಗ್ರಾಮದ ಬಳಿಯಿರುವ ಕೆನಾಲ್ ನೀರನ್ನೆ ಅಸಮರ್ಪಕವಾಗಿ ಪೂರೈಸಲಾಗುತ್ತಿದೆ. ಅಶುದ್ಧವಾಗಿರುವ ಈ ನೀರನ್ನು ಕುಡಿದು ಜನರು ರೋಗ-ರುಜಿನಗಳಿಗೆ ಈಡಾಗುತ್ತಿದ್ದಾರೆ. ಕುಡಿವ ನೀರಿಗಾಗಿ ಪಟ್ಟಣದ ಜನತೆ 2 ಕಿ.ಮೀ ದೂರದಲ್ಲಿರುವ ಹಟ್ಟಿಚಿನ್ನದಗಣಿ ಪ್ರದೇಶದ ಪೊಲೀಸ್ ಠಾಣೆ ಮುಂಭಾಗ, ಸರ್ಕಾರಿ ಪ್ರೌಢಶಾಲೆ, ಲಿಂಗಾವಧೂತ ದೇವಸ್ಥಾನದ ಆವರಣದಲ್ಲಿರುವ ನಲ್ಲಿ ಬಳಿ ಸಾಲಿನಲ್ಲಿ ನಿಂತು ನೀರು ತರುತ್ತಿದ್ದಾರೆ. ಗೃಹಬಳಕೆಗೆ ಬೋರವೆಲ್ ಅವಲಂಬಿಸಿದ್ದಾರೆ. ಕೆಲ ವಾರ್ಡಗಳಲ್ಲಿ ಗೃಹಬಳಕೆ ನೀರಿಗೂ ತತ್ವಾರ ಇದೆ.

    ಹಟ್ಟಿ ಪಪಂಗೆ ಅಗತ್ಯ ಸಂಖ್ಯೆಯ ಜೆಇಗಳನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಗ್ರಾಮ ಯೋಜನೆಯ ಮೋಟಾರ್ ದುರಸ್ತಿ ಮಾಡಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಜಾಕ್‌ವೆಲ್ ಕಾಮಗಾರಿ ಪ್ರಗತಿಯಲ್ಲಿದೆ. ಸಮರ್ಪಕ ಪೈಪ್‌ಲೈನ್ ಅಳವಡಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು.
    ಶಂಭುಲಿಂಗ ದೇಸಾಯಿ
    ಪಪಂ ಮುಖ್ಯಾಧಿಕಾರಿ, ಹಟ್ಟಿ

    ಕಾಮಗಾರಿ ಆರಂಭದಲ್ಲಿಯೇ ಸುಟ್ಟ ಮೋಟಾರ್‌ಅಳವಡಿಸಿದ್ದು ಸಮಸ್ಯೆಗೆ ಕಾರಣವಾಗಿದೆ. ಇದೀಗ ದುರಸ್ತಿಯಲ್ಲೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು, ತಿಂಗಳಿಗೊಂದು ಸಲ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಪರಿಜ್ಞಾನವಿಲ್ಲದೆ ಜನತೆಗೆ ಸಮಸ್ಯೆ ತಂದೊಡ್ಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.
    ರಮೇಶ್ ಉಳಿಮೇಶ್ವರ
    ಸ್ಥಳೀಯ ನಿವಾಸಿ, ಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts