More

    ಮುಳ್ಳೂರಮ್ಮ ಜಾತ್ರಾ ಮಹೋತ್ಸವ ಸಂಭ್ರಮ

    ಸರಗೂರು: ಪಟ್ಟಣದ 11ನೇ ವಾರ್ಡ್‌ನ ಬಿಡಗಲಿನಲ್ಲಿ ಶ್ರೀ ಮುಳ್ಳೂರಮ್ಮ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.


    ಪ್ರತಿ ವರ್ಷದಂತೆ ಈ ಬಾರಿಯೂ ಪಡವಲು ವಿರಕ್ತ ಮಠದ ಪೀಠಾಧ್ಯಕ್ಷರಾದ ಮಹಾದೇವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಜಾತ್ರೆ ಅಂಗವಾಗಿ ನೂತವಾಗಿ ನಿರ್ಮಿಸಿದ್ದ ರಥವನ್ನು ಉದ್ಘಾಟಿಸಲಾಯಿತು. ದೇವಸ್ಥಾನವನ್ನು ತಳಿರು, ತೋರಣ, ರಂಗೋಲಿ ಬಿಡಿಸಿ ಸೀಂಗರಿಸಲಾಗಿತ್ತು. ಬೀದಿಗಳನ್ನು ವಿದ್ಯುತ್ ದೀಪಗಳಿಂದ, ಹೂಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಮೇ 6 ರಂದು ರಾತ್ರಿಯಿಂದಲೇ, ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ದುರ್ಗಾ ಹೋಮ, ಕುಂಕುಮಾರ್ಚನೆ ಜರುಗಿದವು.


    ಮಂಗಳವಾರ ಬೆಳಗ್ಗೆ ಕಪಿಲಾ ನದಿಗೆ ತೆರಳಿ ರಥಕ್ಕೆ ಗಂಗೆ ಪೂಜೆ ಸಲ್ಲಿಸಿ ರಥವನ್ನು ಉದ್ಘಾಟಿಸಲಾಯಿತು. ರಥವನ್ನು ಹೂವಿನಿಂದ ಅಲಂಕಾರ ಮಾಡಿ, ನಂತರ ತಾಯಿ ಮುಳ್ಳೂರಮ್ಮನ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು. ಉತ್ಸವದ ಮೆರವಣಿಗೆಯನ್ನು ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಹಾಗೂ ಕಲಾತಂಡಗಳೊಂದಿಗೆ ದೇವಾಲಯಕ್ಕೆ ಬಂದು ತಲುಪಿದ ನಂತರ ದೇವಾಲಯದ ಸುತ್ತ ಮೆರವಣಿಗೆ ಮಾಡಿ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕೊಂಡೋತ್ಸವನ್ನು ಭಕ್ತರು ಕಣ್ತುಂಬಿಕೊಂಡರು.


    ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮುಖಂಡರಾದ ನಾಗರಾಜು, ಕುಳ್ಳಯ್ಯ,ಗಣೇಶ, ಯೋಗೇಶ್, ಶಿವಕುಮಾರ್, ಬಿ.ಸಿ. ಶಿವಣ್ಣ, ಶಿವಣ್ಣ, ಪಪಂ ಸದಸ್ಯ ಚಲುವಕೃಷ್ಣ, ವಿನಾಯಕ ಪ್ರಸಾದ್, ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts