More

    ಮುಳಗುಂದದಲ್ಲಿ ಮುಂಗಾರು ಮಳೆ ಮರೀಚಿಕೆ

    ಮುಳಗುಂದ: ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಮಳೆ ಬಾರದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ದಿನ ಬೆಳಗಾದರೆ ಮಳೆಯದ್ದೇ ಚರ್ಚೆ. ಮಳೆಯದ್ದೇ ಮಾತು. ಮುಂಗಾರು ಕೈಕೊಟ್ಟಿದ್ದರಿಂದ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಾದ ಚಿಂಚಲಿ, ನೀಲಗುಂದ, ಕಲ್ಲೂರು, ಸೊರಟೂರು ಶಿರುಂಜ ಗ್ರಾಮಗಳಲ್ಲಿ ಕರಿ ಭೂಮಿ ರಾರಾಜಿಸುತ್ತವೆ.
    ಈ ಭಾಗದಲ್ಲಿ ಶೇ. 90ರಷ್ಟು ಮುಂಗಾರು ಬೆಳೆಗಳಿಗೆ ಆದ್ಯತೆ. ಹೆಸರು, ಗೆಜ್ಜೆ ಶೇಂಗಾ, ಹಬ್ಬು ಶೇಂಗಾ, ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಜೋಳದ ಬೆಳೆಗಳಿಗೆ ಮಳೆ ಕೈಕೊಟ್ಟು ಬಿತ್ತನೆಗೂ ಸಂಚಕಾರ ಬಂದಿದೆ. ರೈತರು ಆಕಾಶದ ಕಡೆಗೆ ಮುಖ ಮಾಡುವಂತಾಗಿದೆ.
    ರೈತರು ಕುಟುಂಬ ಸದಸ್ಯರಿಗೆ ಕಾಳು, ದನಗಳಿಗೆ ಹೊಟ್ಟು-ಮೇವು ತರುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಕಳೆದೆರಡು ವರ್ಷ ಪ್ರವಾಹದಿಂದ ತೊಂದರೆ ಅನುಭವಿಸಿದ ರೈತರಿಗೆ ಈಗ ಬರ ಗಾಯದ ಮೇಲೆ ಬರೆ ಎಳೆದಿದೆ. ದನುಕರುಗಳ ಉಳಿವಿಗಾಗಿ ಹೋರಾಟಕ್ಕಿಳಿದಿದ್ದಾನೆ. ಮಳೆ ದೂರಾಗಬಹುದು ಎಂಬ ನಂಬಿಕೆಯೇ ಇರಲಿಲ್ಲ. ಏಕಾಏಕಿ ಮರೆಯಾದ ಮಳೆ ಮತ್ತೆ ಬರುವ ಸೂಚನೆಗಳೇ ಕಾಣದಾಗಿವೆ.
    ಸಾಲದ ಮೊರೆ: ಬಿತ್ತನೆ ಮಾಡಲು ಹಲವಾರು ರೀತಿಯ ಸಾಲಕ್ಕೆ ಶರಣಾದ ರೈತರು ಮಳೆ ದೂರಾದರೆ ಸಂಕಷ್ಟ ಎದುರಿಸಬೇಕಾಗಬಹುದು. ದಲಾಲರು, ಬ್ಯಾಂಕ್ ಹೀಗೆ ಹಲವಾರು ಕಡೆ ಸಾಲ ಮಾಡಿರುವ ರೈತರಿಗೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿವೆ. ಅದು ರೈತನ ಪಾಲಿಗೆ ಉರುಳಾಗಲಿದೆ. ಇಂತಹ ಸ್ಥಿತಿಯಲ್ಲಿ ರೈತರ ಮೊಗದಲ್ಲಿ ನಗು ಮಾಯವಾಗಿದೆ.
    ದೇವರಿಗೆ ಮೊರೆ: ಮಳೆಗಾಗಿ ದೇವರುಗಳಿಗೆ ಮೊರೆ ಹೋಗುತ್ತಿರುವ ರೈತರು ಅನ್ನಸಂತರ್ಪಣೆ, ಕಪ್ಪೆ ಮದುವೆ, ಕತ್ತೆ ಮದುವೆ ಸೇರಿದಂತೆ ವಿಶೇಷ ಪೂಜೆ ಕೈಗೊಳ್ಳುತ್ತಿದ್ದಾರೆ. ಇದರಿಂದಲಾದರೂ ಮಳೆ ಬಂದರೆ ರೈತರ ಸಂಕಷ್ಟ ದೂರಾಗುವ ಆಸೆಯಿದೆ.
    ಕುರಿಗಳಿಗೆ ನೀರಿಲ್ಲ: ಪ್ರತಿವರ್ಷ ಮೇ ತಿಂಗಳು ಕೊನೆಯಲ್ಲಿ ಮಳೆಯಾಗಿ ಭೂಮಿಯಲ್ಲಿ ನೀರಿರುತ್ತಿತ್ತು. ಆದರೆ ಈ ವರ್ಷ ಇಲ್ಲಿಯವರೆಗೂ ಮಳೆಯಾಗದೇ ದನಕರು, ಕುರಿಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಪ್ರತಿ ದಿನವೂ ನೀರಿಗಾಗಿ ಪರಿತಪಿಸುವಂತಾಗಿದೆ. ಕುರಿಗಾರರು ಜಲಮೂಲ ಹುಡುಕಿಕೊಂಡು ಊರಿಂದ ಊರಿಗೆ ಅಲೆದಾಡಬೇಕಾಗಿದೆ. ಹಸಿರುಭೂಮಿ ಎಲ್ಲಿಯೂ ಕಾಣದಾಗಿದೆ.


    ಮುಂಗಾರು ಬಿತ್ತನೆ ಸಮಯದಲ್ಲಿ ಮಳೆ ಇಷ್ಟು ವಿಳಂಬ ಮಾಡಿದ್ದು ಇದೇ ಮೊದಲು. ರೈತರಿಗೆ ವರ್ಷಪೂರ್ತಿ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ದನಕರುಗಳ ಮಾರಾಟಕ್ಕೆ ರೈತರು ಸಿದ್ಧತೆ ನಡೆಸಿದ್ದಾರೆ. ಮಳೆ ಬಾರದಿದ್ದರೆ ಕೆಲಸ ಅರಸಿ ನಗರಗಳ ಕಡೆ ಮುಖ ಮಾಡುವಂತಾಗಿದೆ.
    ಸೋಮಣ್ಣ ಸುಂಕದ ರೈತ

    ಮಳೆ ವಿಳಂಬದಿಂದಾಗಿ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. 66,675 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 13,025 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗ ಮಳೆಯಾದರೆ ಹಬ್ಬು ಶೇಂಗಾ, ಮೆಣಸಿನಕಾಯಿ ಹಾಗೂ ಸೂರ್ಯಕಾಂತಿ ಬಿತ್ತನೆಗೆ ಅವಕಾಶವಿದೆ.
    ಪಿ.ಆರ್. ರವಿ
    ಕೃಷಿ ಸಹಾಯಕ ನಿರ್ದೇಶಕ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts