More

    ಪಟ್ಟಣ ಕೆಟ್ಟು ಹಳ್ಳಿ ಸೇರು ಗಾದೆ ಸೃಷ್ಟಿಸುವಿರಾ?

    ಯಾರು ಎಣಿಸಿದ್ದರು? ಗಾದೆಯೊಂದು ಉಲ್ಟಾ ಹೊಡೆಯುವ ಕಾಲ ಬರುತ್ತದೆ ಎಂದು? ಮಾರ್ಚ್ ಮೊದಲವಾರ. ನನ್ನ ಬಂಧುವೊಬ್ಬರ ಮಗಳ ಮದುವೆ ಇತ್ತು. ಹುಡುಗಿಯ ತಂದೆ ‘ಕೆಟ್ಟು ಪಟ್ಟಣ ಸೇರಿದವ’. ಹೆಸರಿಗೆ ಅಡಕೆ ತೋಟ. ಮನೆ ತುಂಬ ಮಕ್ಕಳು. ಕೂಡು ಕುಟುಂಬ. ಹಾಸಿ ಹೊದೆಯಲು ಬಡತನ ಮಾತ್ರ. ನೆಂಟರು ಇಷ್ಟರು ಸದಾ ಊಟಕ್ಕೆ ಹಾಜರು. ಮನೆಯ ಗೃಹಿಣಿ ಮರ್ಯಾದೆ ಉಳಿಸಿಕೊಂಡು ಎಲ್ಲರಿಗೂ ಆದರ ಆತಿಥ್ಯ ನೀಡುತ್ತ ತಾನು ಎಷ್ಟೋ ದಿನ ಮಜ್ಜಿಗೆ ಕುಡಿದು ಮಲಗಿದ್ದನ್ನು ಹಿರಿಯ ಮಗ ನೋಡುತ್ತಿದ್ದ. ಎಸ್ಸೆಸ್ಸೆಲ್ಸಿ ಮುಗಿಸಿದ್ದ. ‘ಅಮ್ಮ ನಾನಿಲ್ಲಿ ಇದ್ದು ನಿನ್ನ ಬಡತನದ ನಿವಾರಣೆಗೆ ಏನೂ ಸಹಾಯ ಮಾಡಲಾರೆ. ತಮ್ಮಂದಿರು ಜಮೀನು ನೋಡಿಕೊಳ್ಳಲಿ. ನಾನು ಬೆಂಗಳೂರಿಗೆ ಹೋಗುತ್ತೇನೆ’ ಎಂದು ತಾಯಿಗೆ ನಮಸ್ಕರಿಸಿ ಪುಡಿಗಾಸು ಇಸ್ಗೊಂಡು ಬರಿಗೈಯಲ್ಲಿ ಬೆಂಗಳೂರು ಬಸ್ಸು ಹತ್ತಿದ ಹತಾಶ ಹುಡುಗ.

    ಪಟ್ಟಣ ಕೆಟ್ಟು ಹಳ್ಳಿ ಸೇರು ಗಾದೆ ಸೃಷ್ಟಿಸುವಿರಾ?ಬೆಂಗಳೂರು ಮಹಾನಗರಕ್ಕೆ ಬಂದಿಳಿದಾಗಲೇ ಆತನಿಗೆ ಅರಿವಾದದ್ದು ತನ್ನಂತೆ ಹತಾಶ ಬಡಯುವಕರಿಗೆ ನೆಲೆ ನೀಡುವ ಕಾರುಣ್ಯಮಯಿ ಬೆಂಗಳೂರಿಗೂ ತನಗೆ ಊಟವಿಲ್ಲದಿದ್ದರೂ ಬಂದವರಿಗೆ ಊಟ ನೀಡುವ ತನ್ನ ಬಡತಾಯಿಗೂ ತುಂಬ ಸಾದೃಶ್ಯವಿದೆ. ಇದನ್ನು ಅರಿತ ಹುಡುಗ ಹಮಾಲಿ ಮಾಡಿದ, ಕೆಲಸಕ್ಕಾಗಿ ಅಲೆದಾಡಿದ. ಬ್ರೆಡ್ಡು ಬನ್ನು ತಿಂದು ಮೈಲಿಗಟ್ಟಲೆ ನಡೆದುಕೊಂಡೇ ಓಡಾಡಿದ. ಎಲ್ಲ ಕಡೆ ಕೆೇಳಿದ್ದು, ‘ಡಿಗ್ರಿ ಸರ್ಟಿಫಿಕೇಟ್ ಇದೆಯಾ? ‘ಕೆಲಸದ ಅನುಭವ ಇದೆಯಾ?’ ಎರಡೂ ಇರಲಿಲ್ಲ. ಕೊನೆಗೆ ಸರ್ವಿರ್ಸ್ ಸರ್ಟಿಫಿಕೇಟ್ ಕೇಳದ ಗೃಹನಿರ್ವಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ. ತನಗೆ ನೀಡಿದ ಯಾವುದೇ ಕೆಲಸವನ್ನು ಕೀಳೆಂದು ಭಾವಿಸದೆ ಪ್ರಾಮಾಣಿಕವಾಗಿ ದುಡಿಯುತ್ತಲೇ ಐದಾರು ವರ್ಷ ಕಳೆದಾಗ ಕಂಪನಿಯ ಒಡೆಯನಿಗೆ ಅಚ್ಚುಮೆಚ್ಚಿನವನಾಗಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವ ಸ್ಥಾನ ಪಡೆದ. ಕಷ್ಟವೆನಿಸಿದಾಗೆಲ್ಲ ತನ್ನ ಅಮ್ಮ ಅನುಭವಿಸಿದ ಕಷ್ಟವನ್ನು ನೆನಪಿಸಿಕೊಂಡು ಹಲ್ಲು ಕಚ್ಚಿ ಕರ್ತವ್ಯ ನಿಭಾಯಿಸುತ್ತಿದ್ದೆ ಎನ್ನುವ ಈ ಹುಡುಗ ನನಗೆ ತುಂಬ ವರ್ಷಗಳಿಂದ ಅಚ್ಚುಮೆಚ್ಚಿನವ. ತನ್ನಂತಹದ್ದೇ ಬಡಕುಟುಂಬವೊಂದರಿಂದ ಹುಡುಗಿಯನ್ನು ಆರಿಸಿ ಮದುವೆಯಾದ. ಮನೆ ಕಟ್ಟಿದ. ಹಬ್ಬ ಹರಿದಿನಗಳನ್ನು ಮನೆಗೆ ಹೋಗಿ ಆಚರಿಸುತ್ತಿದ್ದ. ತಾಯಿ, ತಂದೆಯ ಆರೋಗ್ಯ ಚಿಕಿತ್ಸೆ ವೆಚ್ಚ ನೋಡಿಕೊಂಡ. ಊರಲ್ಲಿ ಕೈಲಾದಷ್ಟು ಹಣಸಹಾಯ ಮಾಡಿ ಮನೆ, ತೋಟ ಅಭಿವೃದ್ಧಿಪಡಿಸಿದ. ಇದೊಂದು ಮಾದರಿ. ಬಡತನವನ್ನು ಎದುರಿಸಲಾಗದೆ ಮಹಾನಗರಕ್ಕೆ ಬಂದು (ಕೆಟ್ಟು ಪಟ್ಟಣ ಸೆೆೇರಿದವರು) ಬದುಕು ಕಟ್ಟಿಕೊಂಡವರು ಇವರು.

    ಇತ್ತೀಚಿನ ವರ್ಷಗಳಲ್ಲಿ ತಯಾರಾದ ಇನ್ನೊಂದು ಬುದ್ಧಿವಂತ ತಲೆಮಾರಿನ ಕಥೆಯೇ ಬೇರೆ. ಹಳ್ಳಿಗಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಉತ್ತಮ ಶಿಕ್ಷಕರ ತರಬೇತಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಿದ್ದ ಈ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಒಳ್ಳೆಯ ಅಂಕ ತೆಗೆದು ಸಿಇಟಿ ಬರೆದು ಇಂಜಿನಿಯರಿಂಗ್ ಕಾಲೇಜುಗಳಿಗೆ ನುಗ್ಗಿ ಐಟಿ ಎಂಬ ಬ್ಯಾಂಕ್ ಅಕೌಂಟ್ ತೆರೆದು ಇಪ್ಪತ್ಮೂರು ವರ್ಷಕ್ಕೆ ಕೈತುಂಬ ಸಂಬಳ ಪಡೆಯುವ ಅದೃಷ್ಟವಂತ ಎನಿಸಿಕೊಂಡ ತಲೆಮಾರು. ಹಳ್ಳಿಗಳನ್ನು ತೊರೆದು ನಗರಗಳಿಗೆ ಬಂದು ನೆಲೆಸಿ ತಮ್ಮದಲ್ಲದ ಜೀವನಶೈಲಿಯನ್ನು ತಮ್ಮದೆಂಬಂತೆ ಅಳವಡಿಸಿಕೊಂಡು ತಂದೆ-ತಾಯಿಗಳ ಮನಸ್ಸಿಗೆ ನೋವಾದರೂ ಅದು ತಮಗೆ ಸಂಬಂಧವಿಲ್ಲ ಎಂಬಂತೆ ಕಂಪ್ಯೂಟರ್​ಗಳ ಮುಂದೆ ಕುಳಿತ ಒಂದು ತಲೆಮಾರು. ‘ಅಪ್ಪಿ ಹಬ್ಬಕ್ಕೆ ಬರ್ರಾ’ ಎಂದು ಕರೆದರೆ ‘ಹಾಗೆಲ್ಲ ಆಗಾಗ ಕರೆಯಬೇಡಿ. ಬರಲಾಗುವುದಿಲ್ಲ’ ಎಂದು ಒರಟಾಗಿ ಉತ್ತರ ಕೊಡುವ ಪುತ್ರರತ್ನರು. ಹಳ್ಳಿಗೆ ಹೋಗಬೇಕೆಂದರೆ ಮುಖ ಸಿಂಡರಿಸುವ ಅಲ್ಟ್ರಾ ಮಾಡರ್ನ್ ಸೊಸೆಯಂದಿರು. ಅದೆಲ್ಲಿಂದ ಹುಟ್ಟಿಕೊಂಡರೋ, ಕಳೆದ ಎರಡು ದಶಕಗಳಿಂದ ಹಳ್ಳಿಗಳು ವೃದ್ಧಾಶ್ರಮಗಳಾದವು ಎಂಬ ಮಟ್ಟಕ್ಕೆ ಯುವಕರು ಹಳ್ಳಿಗಳನ್ನು ತೊರೆದು ನಗರಗಳಿಗೆ ಬರತೊಡಗಿದರು. ಹಳ್ಳಿಗಳಲ್ಲಿರುವ ದೈಹಿಕ ಶ್ರಮವನ್ನು ಒಲ್ಲದ ಯುವತಿಯರು ಹಳ್ಳಿಗಳ ವರಗಳನ್ನು ತಿರಸ್ಕರಿಸ ತೊಡಗಿ ಗ್ರಾಮೀಣ ಇತಿಹಾಸವನ್ನೇ ಬದಲಾಯಿಸತೊಡಗಿದರು. ವರ್ಷಕ್ಕೊಮ್ಮೆ ಹಳ್ಳಿಗಳಿಗೆ ಹೋದರೂ ತಾವು ಹುಟ್ಟಿ ಬೆಳೆದ ಸ್ಥಳ ಇದು, ಹಾಗಾಗಿ, ತಮ್ಮ ಕರ್ತವ್ಯದ ಪಾತ್ರ ಏನೆಂಬುದನ್ನು ಅರಿತುಕೊಳ್ಳದೆ ರೆಸಾರ್ಟ್​ಗೆ ಬಂದ ಟೂರಿಸ್ಟ್​ಗಳ ಹಾಗೆ ಬಮುಡಾ ಧರಿಸಿ, ತೋಟ, ಬೆಟ್ಟ, ಹೊಳೆ ಸುತ್ತಿಕೊಂಡು ಮಕ್ಕಳಿಗೆ ಜಲಪಾತ ತೋರಿಸಿಕೊಂಡು ವೃದ್ಧ ತಂದೆ-ತಾಯಿಗಳ ಕಷ್ಟ-ಸುಖವನ್ನೂ ವಿಚಾರಿಸದೆ ಒಂದಿಷ್ಟು ದಿನ ರಜೆ ಕಳೆದು ಮರಳಿ ತಮ್ಮ ನಗರಗಳ ಗೂಡುಗಳಿಗೆ ತೆರಳುವ ಸಂವೇದನಾರಹಿತ ಮಕ್ಕಳಾಗಿ ಬೆಳೆದುಬಿಟ್ಟರು.

    ತಾವು ಹುಟ್ಟಿ ಬೆಳೆದ ಸಮೃದ್ಧವಾದ ತೋಟ, ಗದ್ದೆ, ಬೆಟ್ಟಗಳನ್ನು ಕಣ್ಣೆತ್ತಿಯೂ ನೋಡಲಾರದ ಶ್ರೀಮಂತ ವರ್ಗದ ಮಕ್ಕಳು ಮತ್ತೊಂದೆಡೆ. ಕೈತುಂಬ ಸಂಬಳ, ವಿಲಾಸಿ ಕಾರು, ವಿದೇಶಿ ವಸ್ತುಗಳಿಂದ ಗಿಟುಕರಿದ ಮನೆಗಳು ಹಳ್ಳಿಯನ್ನು ಮರೆಯುವಂತೆ ಮಾಡಿದವು. ಹಳ್ಳಿಯ ಶ್ರಮಸಂಸ್ಕೃತಿಯನ್ನು, ಸಮೃದ್ಧ ಮನಸ್ಕತೆಯನ್ನು ಅನುಭವಿಸಿದ ವೃದ್ಧಜೀವಿಗಳು ಅಸಹಾಯಕರಾಗಿ ದೊಡ್ಡ ದೊಡ್ಡ ಮನೆಗಳಲ್ಲಿ ಬದುಕಿಡೀ ಬೆಸೆದುಕೊಂಡ ಕೃಷಿ ಚಟುವಟಿಕೆಗಳನ್ನು ಮಾಡಲೂ ಆಗದೇ ಬಿಡಲೂ ಆಗದೆ ಒದ್ದಾಡುತ್ತ ಏಕಾಂಗಿ ಬದುಕನ್ನು ಸವೆಸುತ್ತಿರುವ ದೃಶ್ಯ ಅವರ ಮಕ್ಕಳ ಕಣ್ಣಿಗೆ ಮಾತ್ರ ಬೀಳದೆ ಉಳಿದೆಲ್ಲರ ಕಣ್ಣಿಗೂ ಬೀಳತೊಡಗಿ ಕೆಲ ವರ್ಷಗಳೇ ಕಳೆದಿವೆ.

    ಇಂಥವರನ್ನೆಲ್ಲ ಕರೊನಾ ಎಂಬ ಸೂಕ್ಷ್ಮ ವೈರಾಣು ನಿರ್ಣಾಯಕ ಘಟ್ಟವೊಂದಕ್ಕೆ ತಂದು ನಿಲ್ಲಿಸಿದೆ. ‘ತಂದೆ ತೀರಿಕೊಂಡಿದ್ದಾನೆ, ಬಾ’ ಎಂದು ಫೋನ್ ಮಾಡಿದಾಗ ಪಕ್ಕದ ಮನೆಯವರಿಗೆ ಹಣ ಕಳುಹಿಸಿ, ‘ನನಗೆ ಬರಲಾಗುವುದಿಲ್ಲ. ನೀವೇ ಶವಸಂಸ್ಕಾರ ಮಾಡಿ’ ಎಂದು ಹೇಳಿದ ಪುತ್ರರತ್ನವೊಂದು ಕರೊನಾಕ್ಕೆ ಹೆದರಿ ಹೆಂಡತಿ-ಮಕ್ಕಳೊಂದಿಗೆ ವಿಧವೆ ತಾಯಿಯ ಮನೆ ಸೇರಿದ್ದಾನೆ. ಇಂಥ ನಿದರ್ಶನಗಳನ್ನು ಎಷ್ಟೋ ಹಳ್ಳಿಗಳಲ್ಲಿ ಕಾಣಬಹುದು. ಅಲ್ಲದೆ, ಅನೇಕ ಹಳ್ಳಿಗಳಲ್ಲಿ ‘ನಮ್ಮ ಹಳ್ಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡಗಳು ಇವರನ್ನು ಸ್ವಾಗತಿಸಿವೆ. ಬೆಂಗಳೂರು ನಗರವೊಂದರಿಂದಲೇ ಒಂದೇ ದಿನ ಮೂವತ್ತು ಸಾವಿರ ದಂಪತಿಗಳು ಬೆಂಗಳೂರು ತೊರೆದು ಹಳ್ಳಿಗೆ ಮರಳಿದರೆಂದರೆ ಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ಊಹಿಸಬಹುದು.

    ಪ್ರತಿ ವರ್ಷದ ಹಾಗೆ ಈ ಮಾರ್ಚ್ ಪ್ರಥಮವಾರದಲ್ಲಿ ಉದ್ಯೋಗಸ್ಥ ದಂಪತಿಗಳು ಮಕ್ಕಳ ಪರೀಕ್ಷೆಗಳು ಮುಗಿದ ಬಳಿಕ ಹಳ್ಳಿಯ ಅಜ್ಜನ ಮನೆಗೆ ರೆಸಾರ್ಟ್​ಗಳಿಗೆ ಹೋಗುವಂತೆ ಹೋಗಿ ರಜೆ ಕಳೆದು ಬರುವ ಪ್ಲಾನ್​ಗಳನ್ನು ಹಾಕತೊಡಗಿದ್ದರು. ಆಗಲೇ ಬಂದೆರಗಿದ್ದು ಕರೊನಾ ಎಂಬ ಕಣ್ಣಿಗೆ ಕಾಣದ ವೈರಾಣುವಿನ ಭಯ. ವಿದೇಶಗಳಲ್ಲಿ ನೆಲೆಸಿರುವ ನಮ್ಮವರು ಪ್ರಾಣಭಯದಿಂದ ಅಂತಾರಾಷ್ಟ್ರೀಯ ವಿಮಾನಗಳನ್ನು ಹತ್ತಿ ಇಲ್ಲಿ ಬಂದಿಳಿಯತೊಡಗಿದಂತೆ ನಮ್ಮವರಿಗೆ ಹಳ್ಳಿಯ ನೆನಪಾಗತೊಡಗಿತು. ಊರಿಗೆ ಫೋನ್ ಹಚ್ಚತೊಡಗಿದರು. ‘ನಾವು ಊರಿಗೆ ಬರುತ್ತೇವೆ ಪಪ್ಪಾ… ಯಾಕೋ ಅಮ್ಮನ ನೆನಪಾಗುತ್ತಿದೆ(!). ನಿಮ್ಮ ಸೊಸೆ ಊರನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಮೊಮ್ಮಕ್ಕಳಿಗೆ ಹೇಗೂ ಪರೀಕ್ಷೆ ಇಲ್ಲ. ಅಜ್ಜಿಯ ಮನೆಗೆ ಹೋಗೋಣ ಎನ್ನುತ್ತಿದ್ದಾರೆ. ನನಗೂ ಮನೆಯಿಂದಲೇ ಕೆಲಸ ಮಾಡುವ ರಿಯಾಯಿತಿ ಸಿಕ್ಕಿದೆ. ಅಲ್ಲೇ ಬಂದು ಮಾಡಿಕೊಂಡಿರುತ್ತೇನೆ ಆಗದೆ?’

    ಪಾಪ ಹೆತ್ತಮಗನನ್ನು, ಕರೆದಾಗ ಒಮ್ಮೆಯೂ ಬರದ ಸೊಸೆಯನ್ನು ಕಾಯುತ್ತ ಕುಳಿತರು ಅತ್ತೆ-ಮಾವ. ಮಗ, ಸೊಸೆ ಮೊಮ್ಮಕ್ಕಳು ಬಂದಿಳಿದಾಗ ಮುಗ್ಧ ಗ್ರಾಮೀಣ ಪ್ರೀತಿಯ ಮಳೆಗರೆದಿದ್ದಾರೆ ತಂದೆ-ತಾಯಂದಿರು. ಇದೀಗ ಕ್ವಾರಂಟೈನ್ ಮುಗಿಸಿದ ಮಕ್ಕಳು ಬೈಕ್ ಹತ್ತಿ ಆಚೀಚೆ ಸ್ನೇಹಿತರನ್ನು ನೆನಪಿಸಿಕೊಳ್ಳೋಣವೆಂದರೆ ಪೊಲೀಸರ ಭಯ. ತಂದೆ-ತಾಯಂದಿರ ಬಳಿ ಕುಳಿತು ಎಲೆ-ಅಡಿಕೆ ತಿನ್ನುತ್ತ ಮಾತನಾಡುವ ಮಕ್ಕಳು ಇಲ್ಲವೆಂದಲ್ಲ. ಪ್ರಾಣಭಯಕ್ಕಿಂತ ಇನ್ನೊಂದು ಭಯವಿಲ್ಲ. ಎಲ್ಲರೂ ಹಳ್ಳಿಗಳಲ್ಲಿ ನಿರಾತಂಕವಾಗಿ ದಿನಕಳೆಯುತ್ತಿದ್ದಾರೆ. ಆದರೆ, ಈಗ ಮೂಡಿರುವುದು ಹಲವು ಪ್ರಶ್ನೆಗಳು. ಈಗ ‘ಕೆಟ್ಟು ಹಳ್ಳಿ ಸೇರಿದ’ ಈ ಯುವಕರು ಎಲ್ಲ ಮಾಮೂಲು ಆದಾಗ ಪುನಃ ಪೇಟೆಗೆ ಹೊರಟು ನಿಲ್ಲುವರೇ? ಲಕ್ಷ-ಲಕ್ಷ ಉದ್ಯೋಗಗಳನ್ನು ಕಳಚಿಕೊಂಡಿರುವ ನಗರ ಪುನಃ ಅವರೆಲ್ಲರಿಗೆ ಆಶ್ರಯ ನೀಡಬಲ್ಲದೇ? ವರ್ಕ್ ಫ್ರಮ್ ಹೋಮ್ ಸಾಧ್ಯವಿದ್ದವರು ಹಳ್ಳಿಗಳಲ್ಲಿಯೇ ಕುಳಿತು ಕೆಲಸ ಮಾಡಿಕೊಡಬಹುದಲ್ಲವೇ? ತಾವು ಓದಿದ ಹಳ್ಳಿಯ ಶಾಲೆಗಳನ್ನು ಅಭಿವೃದ್ಧಿಪಡಿಸಿ ತಮ್ಮ ಮಕ್ಕಳನ್ನು ಅಲ್ಲಿಯೇ ಉಳಿಸಬಹುದಲ್ಲವೇ? ಯಾರ್ಯಾರದ್ದೋ ಕಾಲು ಹಿಡಿದು ಬದುಕುವ ಬದಲು ತಮ್ಮದೇ ಭೂಮಿಯಲ್ಲಿ ನೇಗಿಲು ಹಿಡಿದರೆ ಒಳ್ಳೆಯದೆಂಬ ಜ್ಞಾನೋದಯವಾದೀತೇ? ಶಾಶ್ವತ ಸುಖ ನೀಡುವ ಹಳ್ಳಿಗಳನ್ನು ತಮ್ಮ ಕರ್ಮಭೂಮಿಯನ್ನಾಗಿ ಮರು ಸ್ಥಾಪಿಸಿಕೊಳ್ಳುವ ಅಪೇಕ್ಷೆ ಕೆಲವರಲ್ಲಾದರೂ ಹುಟ್ಟಬಹುದೇ? ಈ ಪ್ರಶ್ನೆಗಳನ್ನು ನಾನು ಕೇಳುತ್ತಿಲ್ಲ. ಕಳೆದ ಎರಡು ದಶಕಗಳಿಂದ ನಿರ್ವಣವಾಗುತ್ತಿರುವ ಹಳ್ಳಿಗಳೆಂಬ ವೃದ್ಧಾಶ್ರಮಗಳು ಕೇಳುತ್ತಿವೆ. ಭಾರತದ ಜೀವನಾಡಿಗಳಾಗಿರುವ ಹಳ್ಳಿಗಳು ಕೇಳುತ್ತಿವೆ…

    ಆರ್ಥಿಕವಾಗಿ ಸಬಲರಾಗಿರುವ ಯುವಕರೇ, ಇನ್ನು ಎರಡು ವಾರ ಅಲ್ಲೇ ಕುಳಿತು ತೀರ್ವನಗಳನ್ನು ರೂಪಿಸುವ ಸಮಯ ನಿಮಗಿದೆ. ಯೋಚಿಸಿ. ನಿಮ್ಮ ಬುದ್ಧಿವಂತಿಕೆ, ಪ್ರಾಮಾಣಿಕತೆ, ಸಂಪನ್ಮೂಲಗಳ ಲಭ್ಯತೆ… ಇವೆಲ್ಲವನ್ನೂ ಬಳಸಿಕೊಂಡು ನಿಮ್ಮ ನಿಮ್ಮ ಹಳ್ಳಿಗಳಲ್ಲಿಯೇ ಸಹಕಾರಿ ತತ್ತ್ವದಿಂದ ಕಿರು ಯೋಜನೆಗಳನ್ನು, ಉದ್ದಿಮೆಗಳನ್ನು ಸ್ಥಾಪಿಸಿ ನಿಮ್ಮ ಹಳ್ಳಿಯ ಸುತ್ತಮುತ್ತಲಿನವರಿಗೆ ಉದ್ಯೋಗ ನೀಡುವ ಕಾರ್ಯದಲ್ಲೂ ಯಶಸ್ವಿಯಾಗುವ ಅರ್ಹತೆ ನಿಮಗಿದೆ ಎಂಬುದನ್ನು ನಮ್ರವಾಗಿ ಗಮನಕ್ಕೆ ತರಲು ಬಯಸಿದ್ದೇನೆ.

    ಮಗನ ಔಷಧಕ್ಕಾಗಿ ತಾಯಿಯ ಗೋಳಾಟ: ವಿಡಿಯೋಗೆ ಒಂದೇ ಗಂಟೆಯಲ್ಲಿ ಸಿಕ್ಕಿತು ಸ್ಪಂದನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts