More

    ಮುಂಡ್ಲಿ ಅಣೆಕಟ್ಟು ಹೂಳೆತ್ತಲು ಸಿದ್ಧತೆ, ಅನುಮತಿ ನೀಡಿದ ಜಿಲ್ಲಾಡಳಿತ

    ಕಾರ್ಕಳ: ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಪೂರೈಸುವ ಮುಂಡ್ಲಿ ಬಲ್ಮಗುಂಡಿಯ ಅಣೆಕಟ್ಟಿನಲ್ಲಿ ತುಂಬಿರುವ ಹೂಳೆತ್ತಲು ಉಡುಪಿ ಜಿಲ್ಲಾಡಳಿತ ಅನುಮತಿ ನೀಡಿದೆ. ಸರ್ಕಾರದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಈ ಬಗ್ಗೆ ಮುತುವರ್ಜಿ ವಹಿಸಿದ್ದು, ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಂಬಧಿತ ಅಧಿಕಾರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆದಿದೆ.

    ಸುರತ್ಕಲ್‌ನ ಎನ್‌ಐಟಿಕೆಯಿಂದ ಸಂಬಂಧಿತ ಅಧಿಕಾರಿಗಳು ಮುಂಡ್ಲಿಗೆ ಭೇಟಿ ನೀಡಿ ಹೂಳು ತುಂಬಿದ ಬಗ್ಗೆ ದೃಢೀಕರಣ ಪತ್ರ ನೀಡಿದ್ದಾರೆ. ಹೂಳೆತ್ತುವ ಕಾಮಗಾರಿಗೆ ಸದ್ಯದಲ್ಲೇ ಪುರಸಭೆ ಟೆಂಡರ್ ಕರೆಯಲಿದ್ದು ತೆಗೆದ ಹೂಳನ್ನು ನೇರವಾಗಿ ಗೊತ್ತುಪಡಿಸಿದ ಯಾರ್ಡ್‌ಗೆ ಸರಬರಾಜು ಮಾಡುವ ಹೊಣೆಗಾರಿಕೆ ಟೆಂಡರ್‌ದಾರದ್ದಾಗಿರುತ್ತದೆ.
    ಯಾರ್ಡ್‌ನಲ್ಲಿ ಸಂಗ್ರಹಿಸುವ ಹೂಳನ್ನು ಗಣಿಗಾರಿಕೆ ಇಲಾಖಾಧಿಕಾರಿಗಳು ಪರಿಶೀಲಿಸಿ ಬಳಿಕ ಮರಳು ಬೇರ್ಪಡಿಸಲಾಗುತ್ತದೆ. ಅನಂತರ ಮರಳಿನ ದಾಸ್ತಾನು ಮೇಲೆ ಗಣಿ ಇಲಾಖೆ ಟೆಂಡರ್ ನಡೆಸುತ್ತದೆ. ಇದರಿಂದ ಸಂಗ್ರಹವಾಗುವ ಹಣ ಹೂಳೆತ್ತುವ ಕಾರ್ಯಕ್ಕೆ ಬಳಸಲಾಗುತ್ತದೆ.

    ಎರಡು ಲಕ್ಷ ಲೀಟರ್ ನೀರು ಸಂಗ್ರಹ: 1994ರಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡ್ಲಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ತಲೆ ಎತ್ತಿದ್ದ ಜಲವಿದ್ಯುತ್ ಘಟಕದಿಂದಾಗಿ ಕಿರು ಅಣೆಕಟ್ಟಾಗಿ ಮಾರ್ಪಾಡು ಆಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ರಾಮ ಸಮುದ್ರ ಸಂಪಿಗೆ ಹಾಯಿಸಿ ಅಲ್ಲಿ ಶುದ್ಧೀಕರಿಸಿ ಕಾರ್ಕಳದ ವಿವಿಧೆಡೆಗೆ ಪೂರೈಸಲಾಗುತ್ತಿದೆ. ರಾಮ ಸಮುದ್ರದಲ್ಲಿ ನಿರ್ಮಿಸಿದ ಸಂಪು 2 ಲಕ್ಷ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ದಿನಂಪ್ರತಿ 4 ಟ್ಯಾಂಕ್‌ನಷ್ಟು ನೀರು ಮುಂಡ್ಲಿಯಿಂದ ಇಲ್ಲಿಗೆ ಸರಬರಾಜು ಆಗುತ್ತಿದೆ. ಜರಿಗುಡ್ಡೆ, ಬಂಗ್ಲೆಗುಡ್ಡೆ, ಪುಲ್ಕೇರಿ, ಕುಂಟಲ್ಪಾಡಿ ಮೊದಲಾದ ಪ್ರದೇಶಗಳು ಎತ್ತರವಾಗಿದ್ದು, ಅಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಪ್ರತ್ಯೇಕ ಟ್ಯಾಂಕ್‌ಗಳಿವೆ.

    ಕಾರ್ಕಳ ಪುರಸಭಾ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಮುಂಡ್ಲಿಯಲ್ಲಿ ಹೂಳೆತ್ತುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಎಲ್ಲ ಎಡರು-ತೊಡರುಗಳನ್ನು ಬಗೆಹರಿಸಿಕೊಂಡು ಕಾನೂನು ಸಮ್ಮತ ಹೂಳೆತ್ತುವ ಕಾರ್ಯ ನಡೆಯಲಿದೆ.
    -ವಿ.ಸುನೀಲ್ ಕುಮಾರ್, ಸರ್ಕಾರದ ಮುಖ್ಯ ಸಚೇತಕ 

    ಕುಡಿಯುವ ನೀರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಂಡ್ಲಿಯಲ್ಲಿ ತುಂಬಿಕೊಂಡಿರುವ ಹೂಳೆತ್ತುವ ಕಾಮಗಾರಿ ಜಿಲ್ಲಾಡಳಿತದಿಂದ ಮಂಜೂರಾತಿ ದೊರೆತಿದೆ. ಹೂಳೆತ್ತುವ ಪ್ರಕ್ರಿಯೆಗೆ ತಾಂತ್ರಿಕ ಪ್ರಕ್ರಿಯೆ ನಡೆಯುತ್ತಿದೆ.
    -ರೇಖಾ ಶೆಟ್ಟಿ, ಕಾರ್ಕಳ ಪುರಸಭಾ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts