More

    ಕೆರೆ ಮುಚ್ಚುವ ಕಾರ್ಯ ಸ್ಥಗಿತಗೊಳಿಸಿ

    ಮುಧೋಳ: ಮಹಾರಾಣಿ ಕೆರೆ ಎಂದು ಗುರುತಿಸಲ್ಪಡುವ ಸ್ಥಳೀಯ ಸಿದ್ಧರಾಮೇಶ್ವರ ನಗರದಲ್ಲಿರುವ ರಿ.ಸ.ನಂ.9, ಸಿಟಿಎಸ್ ನಂ.4034 ಮೂಲತಃ ಕೆರೆಯಾಗಿದೆ. ಅದನ್ನು ಕೆಲವು ಖಾಸಗಿ ವ್ಯಕ್ತಿಗಳು ಗರಸು, ಮಣ್ಣು ಇತ್ಯಾದಿ ಕಚ್ಚಾವಸ್ತುಗಳಿಂದ ಮುಚ್ಚಿ ಸಮತಟ್ಟಾಗಿಸಿ ಪ್ಲಾಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಲು ಮುಂದಾಗಿರುವುದನ್ನು ತಡೆ ಹಿಡಿಯುವಂತೆ ನಗರದ ಸಾಮಾಜಿಕ ಹೋರಾಟಗಾರ ಹನುಮಂತ ಶಿಂಧೆ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅವರಿಗೆ ಕೆರೆಯ ಕುರಿತು ಸಂಪೂರ್ಣವಾಗಿ ವಿವರಿಸಿ ಶುಕ್ರವಾರ ಮನವಿ ಸಲ್ಲಿಸಲಾಯಿತು.

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಮಾತನಾಡಿ, ಈ ಕೂಡಲೇ ಕೆರೆ ಒತ್ತುವರಿ ಹಾಗೂ ಮುಚ್ಚುವ ಕಾರ್ಯವನ್ನು ತಡೆದು ಆ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕೆಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಸಂಗಮೇಶ ಬಾಡಗಿ ಅವರಿಗೆ ಸೂಚನೆ ನೀಡಿದರು.

    ನಗರಸಭೆ ಸದಸ್ಯರಾದ ಸಂತೋಷ ಪಾಲೋಜಿ, ಸತೀಶ ಗಾಡಿ, ಭೀಮಶಿ ಮೇತ್ರಿ ಹಾಗೂ ಪರಿಸರ ಪ್ರೇಮಿ ಯಲ್ಲಪ್ಪ ಶಿಂಧೆ, ಆನಂದ ಶಿಂಧೆ ಇತರರು ಮಾತನಾಡಿ, ಎರಡು ದಶಕಗಳ ಹಿಂದೆ ಜಮಖಂಡಿಯ ಕೆಲ ಖಾಸಗಿ ವ್ಯಕ್ತಿಗಳು ಈ ಕೆರೆಯ 5 ಎಕರೆ 2 ಗುಂಟೆಯ ಪೈಕಿ 2 ಎಕರೆ 4 ಗುಂಟೆ ಕೆರೆಯ ಜಾಗವನ್ನು ಅನಧಿಕೃತವಾಗಿ ಖರೀದಿಸಿದ್ದಾರೆ. ಈಗ ಈ ಕೆರೆಯನ್ನು ಗರಸು, ಖಡಿ, ಉಸುಕು, ಮಣ್ಣು ಇತ್ಯಾದಿ ಗಟ್ಟಿ ವಸ್ತುಗಳಿಂದ ಮುಚ್ಚಿ ಹಾಕಿ ಮೇಲೆ ಬುಲ್ಡೋಜರ್ ಮೂಲಕ ಗಟ್ಟಿಗೊಳಿಸಿ ಸೈಟ್‌ಗಳನ್ನಾಗಿಸಿ ಮಾರಾಟ ಮಾಡಲು ಕ್ಷಿಪ್ರವಾಗಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಂತೆ ಕೆರೆ ಸಂರಕ್ಷಣೆ ಮಾಡಲು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ, ಸಿಟಿ ಮುನ್ಸಿಪಲ್ ಕಾರ್ಪೋರೇಷನ್ ಹಾಗೂ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ ಇವರನ್ನೊಳಗೊಂಡ ಸಮಿತಿ ರಚಿಸಿ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕೆರೆ ಪ್ರದೇಶದಿಂದ 30 ಮೀ. ಅಂತರದೊಳಗಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಕೆರೆಗಳ ಸಂರಕ್ಷಣೆಗೆ ಸೂಕ್ತ ಮಾರ್ಗದರ್ಶ ನೀಡಲಾಗಿದ್ದರೂ ಈ ಕಾರ್ಯ ನಡೆದಿರುವುದು ದುರದೃಷ್ಟಕರ ಎಂದು ಹೇಳಿದರು.

    ಮುಧೋಳ ಮಹಾರಾಣಿ ಕೆರೆಯನ್ನು ತರಾತುರಿಯಲ್ಲಿ ಮುಚ್ಚಿ ಪ್ಲಾಟ್‌ಗಳನ್ನು ನಿರ್ಮಿಸಲಾಗುತ್ತಿದ್ದು ಈ ಕುರಿತು ನಗರಸಭೆಯ ಪೌರಾಯುಕ್ತ ಸುನೀಲ ಪಾಟೀಲ ಅವರ ಗಮನಕ್ಕೆ ತಂದರೂ ಸಹ ಅವರು ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸೂಚನೀಯ. ಕೆರೆ ಮುಚ್ಚುತ್ತಿರುವ ಕಾರ್ಯವನ್ನು ಈ ಕೂಡಲೇ ಬಂದ್ ಮಾಡಿಸಿ ಅಂತರ್ಜಲ ಹೆಚ್ಚಳಕ್ಕಾಗಿ ಕೆರೆಯನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts