ಮುಧೋಳ : ಸಾರ್ವಜನಿಕರಿಗೆ ಉಪಯೋಗವಾಗುವಂತೆ ವಿವಿಧ ಇಲಾಖೆಗಳ ಕಾರ್ಯಾಲಯಗಳನ್ನು ಒಂದೇ ಸ್ಥಳದಲ್ಲಿ ತರುವ ನಿಟ್ಟಿನಲ್ಲಿ ಮಿನಿ ವಿಧಾನಸೌಧ ಕಟ್ಟಡಕ್ಕೆ ಬರುವ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಲೋಕೋಪಯೋಗಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಭರವಸೆ ನೀಡಿದರು.
ನಗರದ ದಾನಮ್ಮದೇವಿ ಕಲ್ಯಾಣಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಯ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
40 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ನಗರದಲ್ಲಿ ಹಳೆಯ ಪೈಪ್‌ಲೈನ್‌ಗಳನ್ನು ತೆಗೆದು ಎರಡು ನೂರು ಕೋಟಿ ರೂ. ವೆಚ್ಚದಲ್ಲಿ ಹೊಸ ಪೈಪ್‌ಲೈನ್ ನಿರ್ಮಿಸುವ ಯೋಜನೆಯ ಅಡಿಗಲ್ಲು ಸಹ ಡಿಸೆಂಬರ್‌ದಲ್ಲಿ ನಡೆಯುವುದು ಎಂದು ಹೇಳಿದರು.
ಕರೊನಾದಿಂದ ವಿಶ್ವವೇ ತತ್ತರಿಸಿದ್ದು, ಡಿಸೆಂಬರ್ ಅಥವಾ ಜನವರಿ ವೇಳೆಗೆ ಅದರ ಹಾವಳಿ ಕಡಿಮೆಯಾಗಬಹುದು. ವಿಶ್ವದ ನಾನಾ ಕಡೆ ಹಾಗೂ ದೇಶದಲ್ಲಿ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿದ್ದು, ಈಗಾಗಲೇ ಭಾರತ ಸರ್ಕಾರ 30 ಕೋಟಿ ಜನರಿಗೆ ಲಸಿಕೆ ಹಾಕುವ ಯೋಜನೆಯನ್ನು ಸಿದ್ಧಗೊಂಡಿದೆ ಎಂದರು.
ತಹಸೀಲ್ದಾರ್ ಸಂಗಮೇಶ ಬಾಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಎಚ್.ಪಂಚಗಾವಿ, ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಗುರುರಾಜ ಕಟ್ಟಿ, ಕಲ್ಲಪ್ಪ ಸಬರದ, ತಾಲೂಕು ಬಿಜೆಪಿ ಅಧ್ಯಕ್ಷ ಡಾ.ರವಿ ನಂದಗಾವ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತ ತುಳಸಿಗೇರಿ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ಆರ್.ಟಿ. ಪಾಟೀಲ, ನ್ಯಾಯವಾದಿ ಪ್ರಕಾಶ ವಸ್ತ್ರದ, ಕೆ.ಆರ್. ಮಾಚಪ್ಪನವರು, ಸೋಮಶೇಖರ ಸಾವಹಾನ, ಎಂ.ಕೆ. ಕೊರಡ್ಡಿ, ಲಕ್ಷ್ಮಣ ಚಿನ್ನಣ್ಣವರ ಇದ್ದರು.