More

    ದಿಢೀರ್ ಬಸ್ ಸಂಚಾರ ಸ್ಥಗಿತ-ಪ್ರಯಾಣಿಕರ ಪರದಾಟ

    ಮುದ್ದೇಬಿಹಾಳ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಯ ಬಿಸಿ ಪಟ್ಟಣದ ಸಾರಿಗೆ ಘಟಕದ ಮೇಲೂ ತಟ್ಟಿದ್ದು, ಮನ್ಸೂಚನೆ ಇಲ್ಲದೆ ದಿಡೀರ್ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಯಿತು.

    ಪಟ್ಟಣದ ಸಾರಿಗೆ ಘಟಕದ ನೌಕರರು ಯಾವುದೇ ಮಾಹಿತಿ ಇಲ್ಲದೇ ದಿಢಿರ್ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬೆಳಗ್ಗೆಯಿಂದಲೇ ಆಸ್ಪತ್ರೆ, ಮದುವೆ, ವ್ಯವಹಾರ ಹಾಗೂ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ನೌಕರರು ತೀವ್ರ ಪರದಾಟ ಅನುಭವಿಸಿದರು. ಈ ವೇಳೆ ಬೆಳಗ್ಗೆಯೇ ಸೇವೆಗೆ ಹಾಜರಾಗಿದ್ದ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರು ಸಿಬ್ಬಂದಿಗೆ ಬಸ್ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದರು. ಸಮಯ ಕಳೆದಂತೆ ನೌಕರರು ಬಸ್ ಏರದೇ ಸೇವೆಯಿಂದ ದೂರ ಉಳಿದು ಪ್ರತಿಭಟನೆ ಆರಂಭಿಸಿದರು.

    ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ವಿವಿಧ ಕಡೆ ಬಸ್ ಸಂಚಾರ ಸ್ಥಗಿತಗೊಳಿಸಿರುವುದನ್ನು ಗಮನಿಸಿದ ನೌಕರರು ಸ್ವಯಂ ಪ್ರೇರಿತರಾಗಿ ಸೇವೆಗೆ ಹಾಜರಾಗದೆ ದೂರ ಉಳಿದರು. ಮುನ್ಸೂಚನೆ ಇಲ್ಲದೆ ಬಸ್ ಸಂಚಾರ ಬಂದ್ ಮಾಡಿದ್ದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಸಾರಿಗೆ ಸಂಚಾರ ಆರಂಭಗೊಂಡಿದ್ದು ದೂರದ ಊರುಗಳ ಬಸ್ ಸಂಚಾರ ಬಂದ್ ಆಗಿತ್ತು. ಮುಂಜಾಗ್ರತ ಕ್ರಮವಾಗಿ ಪಿಎಸ್‌ಐ ಮಲ್ಲಪ್ಪ ಮಡ್ಡಿ ಸಾರಿಗೆ ಘಟಕಕ್ಕೆ ಭೇಟಿ ನೀಡಿದ್ದು ಸೂಕ್ತ ಬಿಗಿ ಬಂದೋಬಸ್ತ್ ವಹಿಸಿದ್ದರು.

    ಚಾಲಕನ ಉದ್ಧಟತನ :
    ತಾಳಿಕೋಟೆ-ಕಡೂರು ಮಾರ್ಗದಲ್ಲಿ ಸಂಚರಿಸುವ ಬಸ್ ಚಾಲಕನೊಬ್ಬ ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರೊಂದಿಗೆ ಉದ್ಧಟತನದಿಂದ ವರ್ತಿಸಿದ ಘಟನೆ ನಡೆಯಿತು. ಬಸ್ ತೆಗೆದುಕೊಂಡು ನಿರ್ಗಮಿಸಲು ಸೂಚಿಸಲು ಘಟಕ ವ್ಯವಸ್ಥಾಪಕರು ಹೇಳಲು ಬಂದಾಗ ಏಕವಚನದಲ್ಲಿಯೇ ಮಾತನಾಡಿದ ಘಟನೆಯೂ ನಡೆಯಿತು. ಅಲ್ಲದೆ, ಸಾರಿಗೆ ಘಟಕದ ಓರ್ವ ಸಿಬ್ಬಂದಿಯೊಂದಿಗೆ ಕೆಲವು ನೌಕರರು ವಾಗ್ವಾದಕ್ಕಿಳಿದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts