More

    ಶಿಕ್ಷಣ ಇಲಾಖೆಯಿಂದ ಶಾಲೆಗಳಿಗೆ ಪಠ್ಯಪುಸ್ತಕ ರವಾನೆ

    ಶಂಕರ ಈ.ಹೆಬ್ಬಾಳ
    ಮುದ್ದೇಬಿಹಾಳ:
    ಕೋವಿಡ್‌ನಿಂದಾಗಿ ಬಂದ್ ಆಗಿದ್ದ ಶಾಲೆಗಳು ಆರಂಭಗೊಂಡರೂ ವಿದ್ಯಾರ್ಥಿಗಳ ಕೈಗೆ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ಇದರಿಂದಾಗಿ ಶಿಕ್ಷಕರು ಕೂಡ ನಿಗದಿತ ಪಾಠಗಳನ್ನು ಯಾವಾಗ, ಹೇಗೆ ಮಾಡಿ ಮುಗಿಸಬೇಕು ಎಂದು ಚಿಂತಾಕ್ರಾಂತರಾಗಿದ್ದಾರೆ.

    ಆದರೂ ಮುದ್ದೇಬಿಹಾಳ ಶೈಕ್ಷಣಿಕ ತಾಲೂಕಿನ ಮಟ್ಟಿಗೆ ಸಮಾಧಾನದ ಸುದ್ದಿಯೊಂದನ್ನು ಪಾಲಕರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. ಸದ್ಯಕ್ಕೆ ಪೂರೈಕೆಯಾಗಿರುವ ಪಠ್ಯಪುಸ್ತಕಗಳ ಪೈಕಿ ಶೇ.70ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಶಃ ಜಿಲ್ಲೆಯಲ್ಲಿಯೇ ಪಠ್ಯಪುಸ್ತಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳಿಗೆ ತಲುಪಿಸಿದ ಕೀರ್ತಿ ಮುದ್ದೇಬಿಹಾಳ ತಾಲೂಕಿಗೆ ಸಲ್ಲುತ್ತದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

    ಪಠ್ಯಪುಸ್ತಕದ ಅಂಕಿ-ಅಂಶ
    ಮುದ್ದೇಬಿಹಾಳ ಶೈಕ್ಷಣಿಕ ತಾಲೂಕಿಗೆ 1 ರಿಂದ 10ನೇ ತರಗತಿಯವರೆಗಿನ ಪಠ್ಯಪುಸ್ತಕಗಳು 2,59,372 ಉಚಿತ ವಿತರಣೆಗಾಗಿ ಪೂರೈಕೆಯಾಗಿದ್ದು, ಖಾಸಗಿಯಾಗಿ 31,425 ಪುಸ್ತಕಗಳು ಮಾರಾಟಕ್ಕೆಂದು ಪೂರೈಕೆಯಾಗಿವೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಪೂರೈಕೆಯಾದ ಪುಸ್ತಕಗಳನ್ನು ಖಾಸಗಿ ಶಾಲೆಯವರು ಖರೀದಿಸದೆ ಹಾಗೆ ಬಿಟ್ಟಿದ್ದರಿಂದ ಮಾರಾಟಕ್ಕೆಂದು ಪೂರೈಸುವ ಪುಸ್ತಕಗಳನ್ನು ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಪೂರೈಕೆಯಾಗಿರುವ ಪುಸ್ತಕಗಳ ಪೈಕಿ 1.86 ಲಕ್ಷ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ. ಪುಸ್ತಕಗಳು ಪೂರೈಕೆಯಾದಂತೆ ಅವುಗಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಪಠ್ಯಪುಸ್ತಕ ಪೂರೈಕೆ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ ತಿಳಿಸುತ್ತಾರೆ.

    ಯಾವ ತರಗತಿ,ಎಷ್ಟು ಭಾಷೆಯ ಪುಸ್ತಕ ಲಭ್ಯ
    ಒಂದನೇ ತರಗತಿಯಲ್ಲಿ ಮೂರು, ಎರಡನೇ ತರಗತಿಯಲ್ಲಿ ಎರಡು, ಮೂರನೇ ತರಗತಿಯಲ್ಲಿ ಎರಡು, ನಾಲ್ಕನೇ ತರಗತಿಯಲ್ಲಿ ಎರಡು, ಐದನೇ ತರಗತಿಯಲ್ಲಿ ಮೂರು, ಆರನೇ ತರಗತಿಯಲ್ಲಿ ಐದು, ಏಳನೇ ತರಗತಿಯಲ್ಲಿ ನಾಲ್ಕು, ಎಂಟನೇ ತರಗತಿಯಲ್ಲಿ ಒಂಬತ್ತು, ಒಂಬತ್ತನೇ ತರಗತಿಯಲ್ಲಿ ಎಂಟು ವಿಷಯಗಳ ಪುಸ್ತಕಗಳು ಪೂರೈಕೆಯಾಗಿವೆ. ಹತ್ತನೇ ತರಗತಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಪೂರೈಕೆಯಾಗಿವೆ.

    ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳ ತರಗತಿ ಆರಂಭವಾಗದಿದ್ದರೂ ಅವರಿಗೆ ಪಠ್ಯಪುಸ್ತಕಗಳು ಶಾಲೆಯಲ್ಲಿದ್ದರೆ ಶಾಲಾರಂಭದ ದಿನವೇ ಅವರಿಗೆ ಎಲ್ಲ ವಿಷಯದ ಪುಸ್ತಕಗಳನ್ನು ಕೊಟ್ಟರೆ ಅಧ್ಯಯನಕ್ಕೆ ಸುಲಭವಾಗುತ್ತದೆ ಎಂಬುದು ಪಾಲಕರ ಅಭಿಪ್ರಾಯವಾಗಿದೆ.

    ಉಚಿತ ಪಠ್ಯಪುಸ್ತಕಕ್ಕೆ ಹಣ ವಸೂಲಿ
    ಆರ್‌ಟಿಇ ಅಡಿ ಸೀಟು ಪಡೆದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರವೇ ಆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಪೂರೈಸುತ್ತಿದೆ. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಯವರು ಆರ್‌ಟಿಇ ಅಡಿ ಸೀಟು ಪಡೆದ ವಿದ್ಯಾರ್ಥಿಗಳಿಗೂ ಸರ್ಕಾರ ಕೊಟ್ಟಿರುವ ಪುಸ್ತಕಗಳನ್ನು ಕೊಡಲು ಹಣ ಪಡೆದುಕೊಂಡಿರುವ ಕುರಿತಾದ ದೂರುಗಳು ಪಾಲಕರಿಂದ ಕೇಳಿ ಬಂದಿವೆ.

    ನಮ್ಮ ತಾಲೂಕಿನ ವಿದ್ಯಾರ್ಥಿಗಳ ಓದಿಗೆ ಪಠ್ಯಪುಸ್ತಕಗಳ ಕೊರತೆ ಆಗಬಾರದು ಎಂದು ಇಲಾಖೆಯ ಸೂಚನೆಯನ್ವಯ ಬುಕ್ ಬ್ಯಾಂಕ್ ತೆರೆದಿದ್ದು, ಸದ್ಯಕ್ಕೆ ತೊಂದರೆಯಾಗದಂತೆ ಪುಸ್ತಕಗಳನ್ನು ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಸರ್ಕಾರ ಪುಸ್ತಕಗಳನ್ನು ಪೂರೈಸಿದಂತೆ ಶಾಲೆಗಳಿಗೆ ತ್ವರಿತವಾಗಿ ಪಠ್ಯಪುಸ್ತಕಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತೇವೆ.
    ವೀರೇಶ ಜೇವರಗಿ, ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts