More

    ಕೋವಿಡ್ ಲಸಿಕೆಗಾಗಿ ಸಾರಿಗೆ ನೌಕರರ ನೂಕುನುಗ್ಗಲು

    ಮುದ್ದೇಬಿಹಾಳ: ಸಾರಿಗೆ ಘಟಕದ ನೌಕರರಿಗೆ ಪ್ರತ್ಯೇಕವಾಗಿ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಲಸಿಕೆ ನೀಡಲು ಮಂಗಳವಾರ ಕೆಎಸ್‌ಆರ್‌ಟಿಸಿ ಘಟಕದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಬೇರೆ ಘಟಕದ ನೌಕರರಿಗೂ ಹಾಗೂ ಸ್ಥಳೀಯ ಘಟಕದ ನೌಕರರಿಗೂ ಲಸಿಕೆ ಪಡೆದುಕೊಳ್ಳುವ ವಿಚಾರಕ್ಕೆ ತೀವ್ರ ಜಟಾಪಟಿ ನಡೆಯಿತು.

    ಅಂದಾಜು ಎರಡು ನೂರಕ್ಕೂ ಹೆಚ್ಚು ಜನ ಸಾರಿಗೆ ನೌಕರರು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ಆಗಮಿಸಿದ್ದರು. ಘಟಕ ವ್ಯವಸ್ಥಾಪಕ ರಾವಸಾಬ್ ಹೊನಸೂರೆ, ಸಾರಿಗೆ ನೌಕರರಿಗೆ ಪರಸ್ಪರ ಅಂತರ ಪಾಲಿಸುವಂತೆ ತಿಳಿಸುತ್ತಿದ್ದರೂ ಕೇಳದ ನೌಕರರು ಲಸಿಕೆಗಾಗಿ ಮುಗಿಬಿದ್ದಿದ್ದರು.

    ಈ ವೇಳೆ ಮುದ್ದೇಬಿಹಾಳ ತಾಲೂಕಿನಲ್ಲಿ ವಾಸಿಸುತ್ತಿದ್ದು ಬೇರೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಸರದಿಯಲ್ಲಿ ನಿಂತು ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದರಿಂದ ಸ್ಥಳೀಯ ಘಟಕದ ಸಾರಿಗೆ ನೌಕರರು ಆಕ್ಷೇಪ ವ್ಯಕ್ತಪಡಿಸಿದರು. ಬೇರೆ ವಿಭಾಗದ ಸಾರಿಗೆ ನೌಕರರು ಹಾಗೂ ಸ್ಥಳೀಯ ಘಟಕದ ಸಾರಿಗೆ ನೌಕರರ ಮಧ್ಯೆ ಕೆಲಕಾಲ ವಾಗ್ವಾದವೂ ನಡೆಯಿತು.

    ಈ ವೇಳೆ ಮಧ್ಯಪ್ರವೇಶಿಸಿದ ಘಟಕ ವ್ಯವಸ್ಥಾಪಕ ಹೊನಸೂರೆ ಅವರು, ಮೇಲಧಿಕಾರಿಗಳ ನಿರ್ದೇಶನದಂತೆ 200 ಜನಕ್ಕೆ ಆಗುವಷ್ಟು ಲಸಿಕೆ ಕೊಟ್ಟಿದ್ದು ಮೊದಲು ನಮ್ಮ ಘಟಕದ ಸಿಬ್ಬಂದಿಗೆ ಲಸಿಕೆ ಹಾಕಲಾಗುತ್ತದೆ. ಬಳಿಕ ಉಳಿದ ವಿಭಾಗದ ನೌಕರರಿಗೂ ಲಸಿಕೆ ಹಾಕಲಾಗುವುದೆಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೇರೆ ವಿಭಾಗದ ನೌಕರನೊಬ್ಬ ಈ ಬಗ್ಗೆ ಆದೇಶ ಎಲ್ಲಿದೆ ತೋರಿಸಿ ಎಂದು ಘಟಕದ ವ್ಯವಸ್ಥಾಪಕರನ್ನೇ ಪ್ರಶ್ನಿಸಿದಾಗ ಮೊಬೈಲ್‌ನಲ್ಲಿದ್ದ ಆದೇಶ ಪತ್ರವನ್ನು ಆ ನೌಕರನಿಗೆ ತೋರಿಸಿ, ಬೇರೆ ನಿಗಮಗಳ ನೌಕರರು ಇಲ್ಲಿಂದ ಹೊರ ಹೋಗುವಂತೆ ಸೂಚಿಸಿದರು.

    ಇದೇ ವೇಳೆ ಮಾತನಾಡಿದ ಅನ್ಯ ಘಟಕದ ಸಾರಿಗೆ ನೌಕರರು, ನಾವು ಸರದಿಯಲ್ಲಿ ನಿಂತ ವೇಳೆ ಈ ಮಾತು ಹೇಳಲಿಲ್ಲ. ಕೊನೆಗೆ ಲಸಿಕೆ ಪಡೆದುಕೊಳ್ಳುವ ಸರದಿ ಬರುತ್ತಲೇ ಇದನ್ನು ಎಬ್ಬಿಸಿದ್ದಾರೆ. ಇದಕ್ಕೂ ಮುಂಚೆ ಕೆಲವರು ಲಸಿಕೆ ಹಾಕಿಸಿಕೊಂಡು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಲಸಿಕಾ ಕಾರ್ಯಕ್ಕೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸತೀಶ ತಿವಾರಿ, ಶುಶ್ರೂಷಕ ಅಧಿಕಾರಿಗಳಾದ ಎಸ್.ಎಸ್. ಮಾಗಿ, ವೈ.ಎಸ್. ತೊನಶ್ಯಾಳ, ಮಹಮ್ಮದರಫೀಕ್ ಬಾಗವಾನ, ಕಾಶಿನಾಥ ವಗದುರ್ಗಿ(ತಂಗಡಗಿ), ಪ್ರಭು ಮಸೂತಿ, ಗಂಗಾಧರ್ ಅಂಚ್ಯಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts