More

    ಆರು ತಿಂಗಳ ವೇತನ ಪಾವತಿಗೆ ಹೊರಗುತ್ತಿಗೆ ನೌಕರರ ಒತ್ತಾಯ

    ಮುದ್ದೇಬಿಹಾಳ: ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡುವುದು ಹಾಗೂ ಕರೊನಾ ವೈರಸ್ ಕಾರಣದಿಂದ ಹಾಸ್ಟೇಲ್ ಮುಚ್ಚಿದ್ದ ಅವಧಿಯಲ್ಲಿ ಹಾಗೂ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ತಹಸೀಲ್ದಾರ್ ಕಚೇರಿ ಎದುರಿಗೆ ದಿಢೀರ್ ಪ್ರತಿಭಟನೆ ನಡೆಸಿದರು.
    ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಪದಾಧಿಕಾರಿಗಳು, ತಹಸೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಸಲ್ಲಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಮಾರ್ಚ್-2020ರಿಂದ ಇಲ್ಲಿಯವರೆಗೆ ಹಾಸ್ಟೆಲ್‌ಗಳು ಮುಚ್ಚಿರುವ ಕಾರಣದಿಂದಾಗಿ ಇದ್ದ ಕೆಲಸವೆ ಇಲ್ಲದಂತಾಗಿ ಮನೆಯಲ್ಲೇ ಕೂತಿರುವ ಪರಿಸ್ಥಿತಿ ಉಂಟಾಗಿದೆ. ಅನೇಕ ವರ್ಷಗಳಿಂದ ಬದುಕಿಗೆ ಆಧಾರವಾಗಿದ್ದ ಕೆಲಸವೂ ಇಲ್ಲದ್ದರಿಂದ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಂತ ಮನೆಯಿಲ್ಲದೆ, ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಲು ಹಣ ಇಲ್ಲದಂತಾಗಿದೆ. ದೈನಂದಿನ ಬದುಕು ದುರ್ಭರವಾಗಿದೆ ಎಂದು ಹೇಳಿದರು.
    ಕರೊನಾ ವೈರಸ್‌ನಿಂದಾಗಿ ಗುತ್ತಿಗೆ, ಹೊರಗುತ್ತಿಗೆ ದಿನಗೂಲಿ ನೌಕರರಿಗೆ ವೇತನ ಪಾವತಿಸುವಂತೆ ನಿರ್ದೇಶನ ಇದ್ದರೂ ಜಾರಿಗೆ ಬರುತ್ತಿಲ್ಲ. ಪ್ರತಿ ದಿನವೂ ಸಂಕಷ್ಟದಲ್ಲಿ ಕಣ್ಣೀರು ಹಾಕುತ್ತಿರುವ ಕುಟುಂಬಗಳಿಗೆ ಕನಿಷ್ಠ ಸಹಾಯ ಸಿಗುತ್ತಿಲ್ಲ ಎಂದು ಹೇಳಿದರು.
    ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಳಗಿಯವರು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
    ಆದರೆ ಹೊರಗುತ್ತಿಗೆ ನೌಕರರು ಮಾತ್ರ ತಮಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವೇತನ ಪಾವತಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ತಹಸೀಲ್ದಾರ್ ಕಚೇರಿ ಆವರಣದಲ್ಲೇ ಪ್ರತಿಭಟನೆ ನಡೆಸಲು ಆರಂಭಿಸಿದರು.
    ಅರ್ಧ ಗಂಟೆಗೂ ಹೆಚ್ಚು ಕಾಲ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.
    ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಚಲವಾದಿ, ಸಾಬವ್ವ ದೊಡಮನಿ, ಮಹಾದೇವಿ ಜಾವಡಗಿ, ಲಕ್ಷ್ಮೀಬಾಯಿ ಹಡಪದ, ಶಾಂತಮ್ಮ ಮಠಪತಿ, ಮಲ್ಲಮ್ಮ ಮಾದರ, ಯಲ್ಲಮ್ಮ ಚಲವಾದಿ, ನಾಜಮಿನ್ ಚೋರಗಸ್ತಿ, ಗೌರವ್ವ ಕೋಳೂರ, ಚಂದ್ರು ಕಟ್ಟಿಮನಿ, ಸುಜಾತಾ ವಡ್ಡರ, ನಜೀರ್ ಕಸಾಬ, ರೇಷ್ಮಾ ನಾಗರಾಳ, ಪವಾಡೆಪ್ಪ ಚಲವಾದಿ ಮತ್ತಿತರರಿದ್ದರು.

    ರೈತ ಸಂಘದ ಬೆಂಬಲ

    ಧರಣಿ ನಿರತ ಹೊರಗುತ್ತಿಗೆ ನೌಕರರಿಗೆ ಬೆಂಬಲ ಸೂಚಿಸಿದ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ ನ್ಯಾಯಯುತ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆಯವರು ಈಡೇರಿಸುವಂತೆ ಒತ್ತಾಯಿಸಿದರು.
    ಬಳಿಕ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಿಬ್ಬಂದಿ ಎಸ್.ಎಸ್. ಪೂಜಾರಿ ತಹಸೀಲ್ದಾರ್ ಎದುರಿಗೆ ಸೋಮವಾರದವರೆಗೆ ಕಾಲಾವಕಾಶ ಪಡೆದುಕೊಂಡು ವೇತನ ಪಾವತಿಸುವ ಭರವಸೆ ನೀಡಿದ ಬಳಿಕ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.

    ಆರು ತಿಂಗಳ ವೇತನ ಪಾವತಿಗೆ ಹೊರಗುತ್ತಿಗೆ ನೌಕರರ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts