More

    ಸಕ್ಕರೆ ಬೊಂಬೆ ಉದ್ಯಮಕ್ಕೂ ಬೇಕು ಆತ್ಮನಿರ್ಭರ ಉತ್ತೇಜನ

    ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ

    ಮದುವೆ ನಿಶ್ಚಿತಾರ್ಥವಾದ ಬಳಿಕ ವರನ ಮನೆಯವರು ವಧುವಿನ ಮನೆಯವರೆಗೆ ತೆರಳಿ ಸಕ್ಕರೆ ಆರತಿ ಬೊಂಬೆ ಹಾಗೂ ಹೊಸ ಸೀರೆ ಉಡಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಆದರೆ, ಈ ಆಚರಣೆ ಇದೀಗ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಸಾಗಿದೆ.
    ಗ್ರಾಮೀಣ ಪ್ರದೇಶದಲ್ಲಿ ಈ ಆಚರಣೆಗೆ ತನ್ನದೆ ಆದ ಮಹತ್ವ ಇದ್ದು, ಇಂದಿಗೂ ಹಳ್ಳಿಯ ಜನರು ಈ ಸಂಪ್ರದಾಯ ಪಾಲಿಸುತ್ತಿದ್ದಾರೆ. ಆದರೆ, ಪಟ್ಟಣ, ದೊಡ್ಡ ದೊಡ್ಡ ನಗರಗಳಲ್ಲಿ ಈ ಸಂಪ್ರದಾಯ ಮರೆಯಾಗುತ್ತಾ ಸಾಗಿರುವುದು ಈ ಉದ್ಯಮದಾರರಿಗೆ ಸಂಕಷ್ಟವನ್ನುಂಟು ಮಾಡಿದೆ. ಗೌರಿ ಹುಣ್ಣಿಮೆ, ಶೀಗಿ ಹುಣ್ಣಿಮೆ ದಿನದಂದು ವಿಶೇಷವಾಗಿ ವರನ ಮನೆಯವರು ಸಕ್ಕರೆ ಬೊಂಬೆಯ ಆರತಿಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಾರೆ.
    ಮುದ್ದೇಬಿಹಾಳ ತಾಲೂಕಿನ ಕೋಳೂರು ಗ್ರಾಮದ ಶಾಂತಪ್ಪ ನಾಗರಾಳ, ಬಸವರಾಜ ನಾಗರಾಳ ಅವರು ಸಕ್ಕರೆ ಬೊಂಬೆಯ ಉದ್ದಿಮೆಯನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯಕ್ಕೆ ವ್ಯಾಪಾರ ಕಡಿಮೆ ಆಗಿದೆ. ಕರೊನಾ ಹಾವಳಿಯ ಮಧ್ಯೆ ನಷ್ಟವಾಗುತ್ತಿದೆ ಎನ್ನುತ್ತಾರೆ ಈ ಉದ್ದಿಮೆ ನಡೆಸುವ ನಾಗರಾಳ ಕುಟುಂಬದವರು.
    ಕಾರ್ಮಿಕ ಮಹೇಶ ಬಿರಾದಾರ ಮಾತನಾಡಿ, ಪ್ರತಿ ದಿನ 2.50 ಕ್ವಿಂಟಾಲ್ ಸಕ್ಕರೆಯ ಬೊಂಬೆ ಮಾರಾಟ ಮಾಡಲಾಗುತ್ತಿದ್ದು, 80 ರೂಗಳಂತೆ ಕೆಜಿಯೊಂದಕ್ಕೆ ಮಾರುತ್ತಿದ್ದೇವೆ. ಕೂಲಿ ಕಾರ್ಮಿಕರಿಗೆ 600-1200 ರೂ.ಗಳವರೆಗೆ ಕೂಲಿ ಕೊಡುತ್ತಾರೆ. ಇಲ್ಲಿ ತಯಾರಾದ ಸಕ್ಕರೆ ಬೊಂಬೆಯನ್ನು ನಿಡಗುಂದಿ, ಮುದ್ದೇಬಿಹಾಳ, ಬ. ಬಾಗೇವಾಡಿ, ತಾಳಿಕೋಟಿ ಕಡೆಗಳಲ್ಲಿ ಮಾರಾಟಕ್ಕೆ ಕಳಿಸುತ್ತೇವೆ ಎಂದು ಹೇಳಿದರು.

    ಋತುಮಾನ ವಾರು ಉದ್ಯೋಗ

    ಸಕ್ಕರೆ ಬೊಂಬೆ ಉದ್ಯಮ ವರ್ಷಪೂರ್ತಿ ನಡೆಯುವಂತಹದ್ದಲ್ಲ. ಕಾರಣ ಮದುವೆಗಳು ನಡೆಯುವ ತಿಂಗಳಲ್ಲಿ ಹಾಗೂ ಶೀಗಿ ಹುಣ್ಣಿಮೆ, ಗೌರಿ ಹುಣ್ಣಿಮೆಯ ಅವಧಿಯಲ್ಲಿ ಈ ಸಕ್ಕರೆ ಬೊಂಬೆಗೆ ಬೇಡಿಕೆ ಹೆಚ್ಚಾಗಿರುತ್ತದೆ. ತಾಲೂಕು ಮಟ್ಟದಲ್ಲಿ ಕೆಜಿಗೆ 80 ರೂ.ಗಳಂತೆ ಮಾರಾಟವಾಗುವ ಸಕ್ಕರೆ ಬೊಂಬೆ ಜಿಲ್ಲಾ ಕೇಂದ್ರಗಳಲ್ಲಿ 100-120ರ ವರೆಗೂ ಮಾರಾಟವಾಗಿರುವ ಉದಾಹರಣೆಗಳಿವೆ. ಏನೇ ಆಗಲಿ ಸಕ್ಕರೆ ಬೊಂಬೆ ಉದ್ದಿಮೆಗೆ ಗ್ರಾಮೀಣ ಗುಡಿ ಕೈಗಾರಿಕೆ ಅಡಿ ಆದ್ಯತೆ ಸಿಕ್ಕರೆ ಅಸಂಘಟಿತ ವಲಯದಲ್ಲಿ ಬರುವ ಈ ಕಾರ್ಮಿಕರಿಗೂ ಸರ್ಕಾರದ ನೆರವು ಸಿಗಬಹುದೆಂಬ ಆಶಾ ಭಾವನೆಯನ್ನು ಈ ವರ್ಗದ ಕಾರ್ಮಿಕರು ಕಾಯ್ದು ನೋಡುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಬೇಕಷ್ಟೇ.

    ತಂತ್ರಜ್ಞಾನ, ವಿಜ್ಞಾನಗಳ ಪ್ರಗತಿಯಲ್ಲಿ ನಾವು ನಮ್ಮ ಮೂಲ ಸಂಪ್ರದಾಯವನ್ನೇ ಮರೆಯುತ್ತಾ ಸಾಗುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಯೋಜನೆಯಡಿ ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಸಣ್ಣ ಸಣ್ಣ ಉದ್ದಿಮೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಂತಹ ಉದ್ದಿಮೆಗಳಲ್ಲಿ ಸಕ್ಕರೆ ಬೊಂಬೆಯ ಉದ್ದಿಮೆಯನ್ನೂ ಸೇರಿಸಿದರೆ ಇದಕ್ಕೆ ದೇಶೀಯ ಮಾರುಕಟ್ಟೆ ದೊರೆತು ಕೂಲಿಕಾರ್ಮಿಕರು, ಇದನ್ನೇ ನಂಬಿಕೊಂಡು ಜೀವನ ಸಾಗಿಸುವವರಿಗೆ ಅನುಕೂಲವಾಗಲಿದೆ.
    ಉದಯ ರಾಯಚೂರ, ಯುವ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts