More

    40 ಪಿಕೆಪಿಎಸ್‌ಗಳ ಮತದಾನದ ಹಕ್ಕಿಗೆ ಕತ್ತರಿ..!

    ಶಂಕರ ಈ. ಹೆಬ್ಬಾಳ, ಮುದ್ದೇಬಿಹಾಳ

    ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುದ್ದೇಬಿಹಾಳ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿ ಬಗ್ಗೆ ಹಲವು ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
    ಉದ್ದೇಶ ಪೂರ್ವಕವಾಗಿಯೇ ಪ್ರಭಾವಿಗಳ ಮಾತು ಕೇಳಿ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಚುನಾವಣೆ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
    ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಟಿಎಪಿಸಿಎಂಎಸ್‌ಗೆ ಒಟ್ಟು 12 ಸ್ಥಾನಗಳಿಗೆ ಆಯ್ಕೆ ಮಾಡಬೇಕಿದ್ದು, ಅದರಲ್ಲಿ ಅ-ವರ್ಗದಲ್ಲಿ ಪಿಕೆಪಿಎಸ್‌ಗಳ ವತಿಯಿಂದ ನಾಲ್ವರು ನಿರ್ದೇಶಕರು, ಬ-ವರ್ಗದಿಂದ ವ್ಯಕ್ತಿಗತ ಸದಸ್ಯರಿಂದ 8 ನಿರ್ದೇಶಕರ ಆಯ್ಕೆ ಮಾಡಬೇಕಾಗಿದೆ. ಅ.29 ರಿಂದ ನಾಮಪತ್ರ ಸ್ವೀಕಾರ ಪ್ರಕ್ರಿಯೆ ಶುರುವಾಗಿದೆ.

    40 ಪಿಕೆಪಿಎಸ್‌ಗಳಿಗೆ ಮತದಾನದ ಹಕ್ಕೇ ಇಲ್ಲ

    ನಾಲ್ವರು ನಿರ್ದೇಶಕರನ್ನು ಚುನಾಯಿಸಲು ತಾಲೂಕಿನ 40 ಪಿಕೆಪಿಎಸ್‌ಗಳಿಂದ ತಲಾ ಒಬ್ಬರಂತೆ ಸದಸ್ಯರು ಮತ ಚಲಾಯಿಸಬೇಕಿದ್ದು, ಈ ಸಲದ ಚುನಾವಣೆಯಲ್ಲಿ ಈ ಸಂಘದ ಒಬ್ಬನೇ ಒಬ್ಬ ಸದಸ್ಯ ಮತ ಚಲಾಯಿಸುವ ಹಕ್ಕು ಪಡೆದುಕೊಂಡಿಲ್ಲ. ಬೈಲಾ ಪ್ರಕಾರ ಟಿಎಪಿಸಿಎಂಎಸ್‌ನ ಜತೆಗೆ ಪಿಕೆಪಿಎಸ್‌ನವರು ವಾರ್ಷಿಕವಾಗಿ 50 ಸಾವಿರ ರೂ. ವ್ಯವಹಾರ ಮಾಡಿರಬೇಕು ಎಂಬುದಾಗಿದೆ. ಈ ಸಂಘಗಳಲ್ಲಿ ಯಾವುದೇ ಸಂಘದವರೂ ವ್ಯವಹರಿಸಿಲ್ಲ ಎಂಬ ಕಾರಣ ನೀಡಿ ಮತದಾನದ ಹಕ್ಕನ್ನು ಮೊಟಕುಗೊಳಿಸಲಾಗಿದೆ.

    ಪ್ರಮುಖರ ಮತದಾನ ಹಕ್ಕಿಗೂ ಕತ್ತರಿ

    ವಿಶೇಷ ಎಂದರೆ ಈ ಹಿಂದಿನ ಆಡಳಿತ ಮಂಡಳಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶಂಕರಗೌಡ ಹಿಪ್ಪರಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ನ್ಯಾಯವಾದಿ ಆರ್.ಬಿ. ಪಾಟೀಲ, ಬಿದರಕುಂದಿಯ ಮಲ್ಲಣ್ಣ ಹತ್ತಿ, ಬಸರಕೋಡ ಗ್ರಾಪಂ ಮಾಜಿ ಉಪಾಧ್ಯಕ್ಷ ಸೋಮನಗೌಡ ಮೇಟಿ, ಮಾಜಿ ಸಂಸದ ದಿ.ಎಸ್.ಎಂ. ಗುರಡ್ಡಿ ಅವರ ಪುತ್ರ ಶ್ರೀಕಾಂತ ಗುರಡ್ಡಿ, ಬಸರಕೋಡದ ಮುಖಂಡ ಮನೋಹರ ಮೇಟಿ ಅವರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಕನಿಷ್ಠ ಸಂಘದೊಂದಿಗೆ ವ್ಯವಹಾರ ನಡೆಸದ ಕಾರಣ ಇವರ ಮತದಾನದ ಹಕ್ಕನ್ನು ರದ್ದುಮಾಡಲಾಗಿದೆ ಎಂದು ತಿಳಿಸಲಾಗಿದೆ.

    1111 ಮತದಾರರ ಹಕ್ಕು ರದ್ದು

    ನ.13 ರಂದು ಚುನಾವಣೆ ಜರುಗುವ ಟಿಎಪಿಸಿಎಂಎಸ್‌ನ ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಅ.23ಕ್ಕೆ ಇದ್ದಂತೆ ಪ್ರಕಟಿಸಲಾಗಿದ್ದು ಸಂಘದಲ್ಲಿರುವ ಒಟ್ಟು 1297 ಸದಸ್ಯರ ಪೈಕಿ ಅಂತಿಮ ಮತದಾರರ ಪಟ್ಟಿ ನಿಗದಿಪಡಿಸುವ ದಿನಾಂಕ ನಿಕಟಪೂರ್ವದಲ್ಲಿ ಕಳೆದ ಐದು ವಾರ್ಷಿಕ ಸಾಮಾನ್ಯ ಸಭೆಗಳಿಗೆ ಹಾಜರಾಗಿ ಮತ್ತು ಸಂಘದ ಕನಿಷ್ಠ ಸೇವೆ ಸೌಲಭ್ಯಗಳನ್ನು ಬಳಸಿಕೊಳ್ಳಲು ಸಲರಾದ 186 ಅರ್ಹ ಮತದಾರರ ಪಟ್ಟಿಯನ್ನು ದೃಢೀಕರಿಸಲಾಗಿದೆ ಎಂದು ಸಂಘದ ವ್ಯವಸ್ಥಾಪಕ ಎಸ್.ಆರ್. ನಾಯಕ ಮಾಹಿತಿ ನೀಡಿದ್ದಾರೆ.

    ಅನುಮಾನಕ್ಕೆಡೆ ಮಾಡುವ ಮತದಾರರ ಪಟ್ಟಿ

    ಟಿಎಪಿಸಿಎಂಎಸ್ ಚುನಾವಣೆಗಾಗಿ ಅಂತಿಮ ಮತದಾರರ ಪಟ್ಟಿಯೇ ಅನುಮಾನಕ್ಕೆಡೆ ಮಾಡಿಕೊಡುತ್ತಿದೆ ಎಂದು ಮತದಾನದ ಹಕ್ಕಿನಿಂದ ವಂಚಿತರಾಗಿರುವ ಮಾಜಿ ಅಧ್ಯಕ್ಷ ಸಂಗನಗೌಡ ಪಾಟೀಲ (ಕವಡಿಮಟ್ಟಿ), ಬಸರಕೋಡದ ಸೋಮನಗೌಡ ಮೇಟಿ ಆರೋಪಿಸಿದ್ದಾರೆ. ಸದಸ್ಯತ್ವ ಪಡೆದುಕೊಂಡಿರುವುದನ್ನು ಗಮನಿಸಿದಾಗ 2019 ೆ.16ರಂದು 110 ಸದಸ್ಯರು ಮತ್ತು 2019 ಸೆ.28ರಂದು 76 ಸದಸ್ಯರು ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಪ್ರಕಟಿಸಲಾಗಿದೆ. ವಿಶೇಷವೆಂದರೆ ಈ ಸದಸ್ಯರ ಪೈಕಿ ಕೆಲವರು ಜಮೀನು ಹೊಂದಿಲ್ಲ. ಅಲ್ಲದೇ ಎರಡೇ ದಿನಗಳಲ್ಲಿ ಆಡಳಿತ ಮಂಡಳಿಗಳಲ್ಲಿ ಈ ಎಲ್ಲರಿಗೂ ಸದಸ್ಯತ್ವ ಹೇಗೆ ಅನುಮೋದಿಸಲಾಗುತ್ತದೆ. ಸದಸ್ಯತ್ವ ಪಡೆದಿರುವವರ ವಯಸ್ಸು ಹಾಗೂ ಜಾತಿ ಪ್ರಮಾಣಪತ್ರಗಳ ಬಗ್ಗೆ ದಾಖಲೆಗಳು ಲಭ್ಯವಿಲ್ಲ ಎಂದೂ ಅಂತಿಮ ಮತದಾರರಪಟ್ಟಿಯಲ್ಲಿ ಘೋಷಿಸಲಾಗಿದ್ದು, ಅಪೂರ್ಣ ಮತದಾರರ ಪಟ್ಟಿಯನ್ನು ಅಧಿಕಾರಿಗಳು ಆತುರದಿಂದ ಯಾರದ್ದೋ ಒತ್ತಡಕ್ಕೊಳಗಾಗಿ ಪ್ರಕಟಿಸಿದ್ದು ಉದ್ದೇಶಪೂರ್ವಕವಾಗಿ ಮತದಾನದ ಹಕ್ಕಿನಿಂದ 1111 ರೈತರನ್ನು ವಂಚಿತರನ್ನಾಗಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದು ಚುನಾವಣೆಗೆ ತಡೆಯಾಜ್ಞೆ ತರುವುದಾಗಿ ಹೇಳಿಕೊಂಡಿದ್ದಾರೆ.

    ನಾವು ಸಹಕಾರಿ ಸಂಘದ ಕಾನೂನು ಪ್ರಕಾರವೇ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದೇವೆ. ಸಂಘದಲ್ಲಿ ಕನಿಷ್ಠ ವ್ಯವಹಾರ ಮಾಡದೇ ಇರುವ ಸದಸ್ಯರ ಮತದಾನದ ಹಕ್ಕನ್ನು ರದ್ದುಗೊಳಿಸಲಾಗಿದೆ. ಸಂಘದ ಅಧಿಕಾರಿ ಕೊಟ್ಟಿರುವ ಮಾಹಿತಿಯಂತೆ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ನಮ್ಮಿಂದ ಯಾವುದೇ ಲೋಪವಾಗಿಲ್ಲ.
    ಎಸ್.ಆರ್. ನಾಯಕ, ವ್ಯವಸ್ಥಾಪಕರು, ಟಿಎಪಿಸಿಎಂಎಸ್ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ.

    ನಾನು ಚುನಾವಣೆ ಅಧಿಕಾರಿಯಷ್ಟೇ..!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾಧಿಕಾರಿ ಸಂತೋಷ ಇಲಕಲ್, ನನ್ನನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಮತದಾರರ ಪಟ್ಟಿ, ಸದಸ್ಯರು ಈ ಬಗ್ಗೆ ನನಗೆ ಸಂಬಂಧವಿಲ್ಲ. ನಾನು ಚುನಾವಣೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಕೊಡುವ ಜವಾಬ್ದಾರಿ ಹೊಂದಿದ್ದೇನೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts