More

    ತೆಂಗಿನ ಮರಕ್ಕೆ ಸೀಮಂತ…!

    ಮುದ್ದೇಬಿಹಾಳ: ಮೊದಲ ಬಾರಿಗೆ ಲ ಬಿಟ್ಟಿರುವ ತೆಂಗಿನ ಮರಕ್ಕೆ ಸೀಮಂತ ಕಾರ್ಯ ನೆರವೇರಿಸುವ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಾಧಿಕಾರಿಗಳೆ ಮುಂದೆ ನಿಂತು ಗಿಡಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ವಿಶೇಷ ಪರಿಸರ ಪ್ರೀತಿ ತೋರಿದ್ದಾರೆ.
    ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೆಳೆಸಿದ ಕಲ್ಪವೃಕ್ಷಕ್ಕೆ (ತೆಂಗಿನಮರಕ್ಕೆ) ಬುಧವಾರ ಸೀಮಂತ ಕಾರ್ಯಕ್ರಮ ಮಾಡಿ ಶಿಕ್ಷಕರು, ಸಿಬ್ಬಂದಿ ಸಂಭ್ರಮಿಸಿದರು.

    ಮರಕ್ಕೆ ಸೀಮಂತ- ಹಿನ್ನೆಲೆ ಏನು

    2013-14ನೇ ಸಾಲಿನಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದ ಎಚ್.ಬಿ. ಪಾಟೀಲ ತೆಂಗಿನ ಮರವೊಂದನ್ನು ತಂದು ಕಚೇರಿ ಆವರಣದಲ್ಲಿ ನೆಟ್ಟಿದ್ದರು. ಆಗಿನಿಂದ ಕಚೇರಿಯ ಡಿ ದರ್ಜೆ ನೌಕರ ಬಿ.ವೈ. ಸಿಂದಗಿ ಇತರ ಗಿಡಮರಗಳನ್ನು ಬೆಳೆಸುತ್ತ ವಿಶೇಷ ಅಕ್ಕರೆಯಿಂದ ತೆಂಗಿನ ಮರವನ್ನು ಪೋಷಿಸುತ್ತಾ ಬಂದಿದ್ದರು. ಈ ವರ್ಷ ಆ ತೆಂಗಿನ ಮರವು ಮೊದಲ ಬಾರಿಗೆ ಸಮೃದ್ಧವಾಗಿ ಕಾಯಿಗಳನ್ನು ಬಿಟ್ಟಿದೆ.
    ಇತರ ಗಿಡಮರಗಳಿಗಿಂತ ತೆಂಗಿನ ಮರಕ್ಕೆ ವಿಶೇಷ ಸ್ಥಾನಮಾನ ಇರುವುದನ್ನು ಮನಗಂಡ ಕಚೇರಿ ಅಧಿಕಾರಿ ವರ್ಗದವರು ಕಚೇರಿಯ ಮಗಳ ಚೊಚ್ಚಲ ಹೆರಿಗೆ ಎಂದೇ ಭಾವಿಸಿ ಸಂಪ್ರದಾಯದಂತೆ ತೆಂಗಿನ ಮರಕ್ಕೆ ಶಿಕ್ಷಣ ಸಂಯೋಜಕಿ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ, ಶಿಕ್ಷಕಿ ಸರೋಜಾ ಕೋರಿ ನೇತೃತ್ವದಲ್ಲಿ ಮರಕ್ಕೆ ಆರತಿ ಮಾಡಿದರು. ಮಹಿಳೆಯರಿಗೆ ಉಡಿ ತುಂಬಿದರು. ಒಡಪಿಟ್ಟು ದಂಪತಿ ಹೆಸರು ಹೇಳುವ ಮೂಲಕ ಸಂಭ್ರಮದಿಂದ ತೆಂಗಿನ ಗಿಡಕ್ಕೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಮಧ್ಯಾಹ್ನ ಹೋಳಿಗೆ ಊಟವನ್ನೂ ಮಾಡಿಸಿದರು. ಒಟ್ಟಾಗಿ ಸಂಭ್ರಮಿಸಿ ಪರಿಸರಕ್ಕೆ ದೈವತ್ವದ ಕಳೆ ನೀಡಿದರು.

    ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೇಶ ಜೇವರಗಿ, ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್. ಕರಡ್ಡಿ, ಟಿ.ಡಿ. ಲಮಾಣಿ, ಎ.ಎಸ್. ಬಾಗವಾನ, ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ, ಎಸ್.ಎಸ್. ರಾಮಥಾಳ, ಎಚ್.ಎ. ಮೇಟಿ, ಸಿದ್ದನಗೌಡ ಬಿಜ್ಜೂರ, ಎರಡೂ ಕಾರ್ಯಾಲಯದ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ, ತರಬೇತಿಯಲ್ಲಿದ್ದ 50 ಜನ ಶಿಕ್ಷಕರು, ಸಂಪನ್ಮೂಲ ಶಿಕ್ಷಕರು ಇದ್ದರು.

    ಎಲ್ಲೆಡೆ ಹಸಿರು ಕಡಿಮೆಯಾಗುತ್ತಿದೆ. ನಾವು ಪರಿಸರದ ಉಳಿವಿಗಾಗಿ ಶ್ರಮಿಸಬೇಕು. ಜೀವಕ್ಕೆ ಅಗತ್ಯವಾದ ಆಮ್ಲಜನಕ ಕೊಡುವ ಗಿಡಮರಗಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಇಂದು ನಮ್ಮ ಕಚೇರಿ ಅಧಿಕಾರಿಗಳ ಜತೆಗೆ ತೆಂಗಿನ ಮರಕ್ಕೆ ಸೀಮಂತ ಕಾರ್ಯ ಮಾಡಿ ಪೂಜಿಸಿದ್ದೇವೆ.
    ವೀರೇಶ ಜೇವರಗಿ, ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts