More

    ಮೂಲ ಸೌಲಭ್ಯ ವಂಚಿತ ಅಂಕನಾಳ, ಉಪನಾಳ

    ಮುದಗಲ್: ಪಕ್ಕದಲ್ಲಿ ನದಿ ಇದ್ದರೂ ಕುಡಿಯಲು ಯೋಗ್ಯವಾದ ನೀರಿಲ್ಲ, ಊರ ಮುಂದೆ ಕಾಲುವೆ ಹಾದು ಹೋದರೂ ಹೊಲಗಳಿಗೆ ನೀರಿನ ಬರ. ಇನ್ನು ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸಾ ಸೌಲಭ್ಯ ದೂರದ ಮಾತು ಆಗಿದೆ.

    ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ: ಕಳವಳ ವ್ಯಕ್ತಪಡಿಸಿದ ಹೈಕೋರ್ಟ್

    ಪಡಿತರ ಪಡೆಯಲು ಪ್ರತಿ ತಿಂಗಳು ಮೂರ‌್ನಾಲ್ಕು ಕಿಮೀ. ಸುತ್ತಾಡಬೇಕಾದ ಪರಿಸ್ಥಿತಿ ಇದೆ. ಇದು ಕಳೆದ ನಲವತ್ತು ವರ್ಷಗಳಿಂದ ಸರ್ಕಾರದ ನಿರ್ಲಕ್ಷೃಕ್ಕೆ ಗುರಿಯಾಗಿ ಬದುಕುತ್ತಿರುವ ಕೃಷ್ಣಾ ನದಿ ದಡದ ಅಂಕನಾಳ, ಉಪನಾಳ ಗ್ರಾಮಗಳ ಜನರ ಗೋಳು ಆಗಿದೆ.

    ಕೃಷ್ಣಾ ಮೇಲ್ದಂಡೆ ಯೋಜನೆಯಡಿ (ಯುಕೆಪಿ) 1984 ರಲ್ಲಿ ಪುನರ್ವಸತಿ ಗ್ರಾಮಗಳಾಗಿ ಸ್ಥಳಾಂತರಗೊಂಡಿರುವ ಮುದಗಲ್ ಭಾಗದ ಸುಮಾರು 12 ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನರು ತೊಂದರೆ ಅನುಭವಿಸುತಿದ್ದಾರೆ.

    ನೀರಾವರಿ ಯೋಜನೆಗಾಗಿ ಹೊಲ, ಮನೆಗಳನ್ನು ಬಿಟ್ಟುಕೊಟ್ಟು ಹೊಸ ಜಾಗದಲ್ಲಿ ಬದುಕು ಕಟ್ಟಿಕೊಂಡವರಿಗೆ ನಿವೇಶನ ನೀಡಲಾಗಿದೆ. ಆದರೆ, ಜಿಲ್ಲಾಡಳಿತ ಶುದ್ಧ ಕುಡಿವ ನೀರು, ರಸ್ತೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ ಸೇರಿ ಇತರ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷೃ ವಹಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

    ರಾಯಚೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಅಂಕನಾಳ, ಉಪನಾಳ, ತೊಂಡಿಹಾಳ, ಹಲಕಾವಟಗಿ, ಪಲಗಲದಿನ್ನಿ, ತುಂಬಲಗಡ್ಡಿ, ರಾಂಪೂರು, ನವಲೆ, ಕಮಲದಿನ್ನಿ, ಚಿತ್ತಾಪುರ, ಜಾವೂರು, ಹಾಗೂ ಗುಡಿಜಾವೂರು ಸ್ಥಳಾಂತರವಾಗಿವೆ. ಈ ಪೈಕಿ ಗಡಿ ಭಾಗದ ಅಂಕನಾಳ, ಉಪನಾಳ, ಪಲಗಲದಿನ್ನಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ತೀವ್ರವಾಗಿದೆ.

    ಹಿಂದುಳಿದ ವರ್ಗದವರು ಹಾಗೂ ದಲಿತರು ಹೆಚ್ಚಾಗಿ ವಾಸವಾಗಿರುವ ಈ ಗ್ರಾಮಗಳಲ್ಲಿ ಕೃಷಿ ಹಾಗೂ ಪಶುಪಾಲನೆ ಜನರ ಮೂಲ ಕಸುಬಾಗಿದೆ. ಕೃಷ್ಣಾ ನದಿ ನೀರಾವರಿ ಯೋಜನೆಗಳಾದ ರಾಂಪೂರು ಏತ ನೀರಾವರಿ, ನಂದವಾಡಗಿ ಏತ ನೀರಾವರಿ ಯೋಜನೆಗಳು ಊರಿನ ಪಕ್ಕದಲ್ಲಿಯೇ ಇದೆ. ಆದರೂ, ಈ ಗ್ರಾಮಸ್ಥರಿಗೆ ಕೃಷ್ಣಾ ನದಿ ನೀರು ಬಳಸಿಕೊಳ್ಳುವ ಭಾಗ್ಯ ಇಲ್ಲ.

    ನಿರುಪಯುಕ್ತವಾದ ಶುದ್ಧೀಕರಣ ಘಟಕ

    ಅಂಕನಾಳದಲ್ಲಿ ಜಿಪಂನಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ನೀರಿನ ಶುದ್ಧೀಕರಣ ಘಟಕ ನಿರುಪಯುಕ್ತವಾಗಿದೆ. ಈ ಯೋಜನೆಯಿಂದ ಒಂದು ಹನಿ ನೀರು ಸರಬರಾಜು ಆಗಿಲ್ಲ. ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ಒಂದು ವರ್ಷವಾಗಿದ್ದರೂ ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ.

    ಗ್ರಾಮದ ಪಕ್ಕದಿಂದಲೇ ಕೃಷ್ಣಾ ನದಿ ನೀರನ್ನು ಮುದಗಲ್, ನಾಗರಹಾಳ, ಜಿಂದಾಲ್ ಉಕ್ಕಿನ ಕಾರ್ಖಾನೆಗೆ ಪೈಪ್‌ಲೈನ್ ಮೂಲಕ ಪೂರೈಸಲಾಗುತ್ತಿದ್ದರೂ ಅಂಕನಾಳ, ಉಪನಾಳ ಗ್ರಾಮಸ್ಥರಿಗೆ ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ. ನದಿ ಮತ್ತು ಕೊಳವೆಬಾವಿಯ ನೀರು ಕುಡಿವ ಅಂಕನಾಳ, ಉಪನಾಳ ಗ್ರಾಮದ ಜನರು ಕೀಲು, ಮಂಡಿ ನೋವಿನಿಂದ ಬಳಲುತ್ತಿದ್ದಾರೆ.

    ಬಸ್ ಸೌಲಭ್ಯವಿಲ್ಲದೆ ಕಾಲ್ನಡಿಗೇ ಗತಿ

    ಅಂಕನಾಳ, ಉಪನಾಳ ಗ್ರಾಮಗಳ ಕೂಗಳತೆ ದೂರದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗಡಿ ಇದ್ದು, ಅಲ್ಲಿನ ಹಳ್ಳಿಗಳಲ್ಲಿ ಸಕಲ ಸೌಕರ್ಯಗಳಿವೆ. ಪುನರ್ವಸತಿಗೊಂಡಿರುವ 12 ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು, ಸಾರಿಗೆ, ಚಿಕಿತ್ಸೆ, ಶಿಕ್ಷಣ, ಪಡಿತರ ಸೇರಿ ಹಲವು ಸೌಕರ್ಯಗಳಿಲ್ಲದೆ ಜನರು ಸಂಕಷ್ಟ ಎದುರಿಸುವಂತಾಗಿದೆ.

    ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳು ಸರ್ಕಸ್ ಮಾಡುತ್ತಾ ಸಾಗಬೇಕಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಹಲವರು ಸಾವಿಗೀಡಾಗಿದ್ದಾರೆ ಎಂದು ಅಂಕನಾಳ ಗ್ರಾಮಸ್ಥರು ಹೇಳುತ್ತಾರೆ.

    ಪ್ರೌಢಶಾಲೆ ಮತ್ತು ಕಾಲೇಜ್‌ಗೆ ವಿದ್ಯಾರ್ಥಿಗಳು ಬಸ್ ಸೌಲಭ್ಯವಿಲ್ಲದೆ ನಡೆದುಕೊಂಡು ಹೋಗಬೇಕಿದೆ. ನಾಗರಹಾಳದಿಂದ ಹಲ್ಕಾವಟಗಿ ಸಂಪರ್ಕಿಸುವ ಹಾಗೂ ಪಲಗಲದಿನ್ನಿಯಿಂದ ಹಲ್ಕಾವಟಗಿ ಕ್ರಾಸ್ ಸಂಪರ್ಕಿಸುವ ರಸ್ತೆ ದುರಸ್ತಿಯಾಗಿಲ್ಲ. ರಸ್ತೆ ಮೇಲೆ ಜೆಲ್ಲಿಕಲ್ಲು ಹಾಕಿದ್ದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ.

    ತಾಲೂಕು ಕೇಂದ್ರ ಲಿಂಗಸುಗೂರು 40 ಕಿ.ಮೀ. ಅಂತರದಲ್ಲಿದ್ದು, ಸೌಕರ್ಯ ಕಲ್ಪಿಸುವಂತೆ ಮನವಿ ಸಲ್ಲಿಸಲು ತೆರಳಲಾಗದ ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

    ಅಂಕನಾಳ,ಉಪನಾಳದಲ್ಲಿ ಬಳಕೆಗೆ ನೀರು ಲಭ್ಯ ಇದೆ. ಆದರೆ, ಶುದ್ಧ ಕುಡಿವ ನೀರಿನ ಕೊರತೆ ಇದೆ. ಜಿಪಂನಿಂದ ನಿರ್ಮಿಸಲಾಗುತ್ತಿರುವ ನೀರಿನ ಶುದ್ಧೀಕರಣ ಘಟಕದ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಕಾಮಗಾರಿ ಬೇಗ ಪೂರ್ಣಗೊಳಿಸಿ ಕುಡಿವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    | ಅಮರೇಶ ಯಾದವ್, ತಾಪಂ ಇಒ, ಲಿಂಗಸುಗೂರು

    ಮೂಲ ಸೌಕರ್ಯಗಳಿಲ್ಲದೆ ಈಗಾಗಲೇ ಅರ್ಧ ಆಯುಷ್ಯ ಕಳೆದಿದ್ದೇವೆ. ಊರಿನ ಪಕ್ಕದಲ್ಲೇ ನೀರು ಕಾಣುತಿದ್ದರೂ ಕುಡಿಯಲು ಶುದ್ಧ ನೀರಿಲ್ಲ. ಗ್ರಾಮಕ್ಕೆ ಸರಿಯಾದ ರಸ್ತೆಯೂ ಇಲ್ಲ. ಚುನಾವಣೆ ಇದ್ದಾಗ ರಾಜಕೀಯದವರು ಊರಿಗೆ ಬರುತ್ತಾರೆ. ಆ ಬಳಿಕ ಬರುವುದಿಲ್ಲ. ಅಶುದ್ಧ ನೀರು ಕುಡಿದು ಕೈ, ಕಾಲು ನೋವುಗಳನ್ನು ಅನುಭವಿಸುತ್ತಿದ್ದೇವೆ.
    | ಲಕ್ಷ್ಮಣ ಮೋಟಗಿ, ಗ್ರಾಮಸ್ಥ, ಅಂಕನಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts