More

    ಮುಂಡರಗಿಯಲ್ಲಿಲ್ಲ ಬಣ್ಣದಾಟದ ಸಂಭ್ರಮ!

    ಮುಂಡರಗಿ: ಹೋಳಿ ಹುಣ್ಣಿಮೆ ಬಂದರೆ ಸಾಕು ಎಲ್ಲೆಡೆ ಬಣ್ಣದಾಟದ ಸಂಭ್ರಮ. ಆದರೆ, ಪಟ್ಟಣ ಸೇರಿ ಸುತ್ತಮುತ್ತಲಿನ 7 ಗ್ರಾಮಗಳಲ್ಲಿ ಮಾತ್ರ ಬಣ್ಣದಾಟ ನಡೆಯುವುದಿಲ್ಲ. ಇದು ಹಲವು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

    ಪಟ್ಟಣದ ಕೋಟೆಗುಡ್ಡದ ಮೇಲೆ ಸುಪ್ರಸಿದ್ಧ ಶ್ರೀ ಲಕ್ಷ್ಮೀ, ಕನಕನರಸಿಂಹ ದೇವರು ಇರುವುದರಿಂದ ಈ ಭಾಗದಲ್ಲಿ ಬಣ್ಣದಾಟ ಆಡುವುದಿಲ್ಲ. 15ನೇ ಶತಮಾನದಲ್ಲಿ ದೇವಸ್ಥಾನ ಸ್ಥಾಪನೆಯಾದ ನಂತರ ಈ ಭಾಗದಲ್ಲಿ ಹೋಳಿ ಹಬ್ಬ ಆಚರಿಸುವುದನ್ನು ಕೈಬಿಡಲಾಗಿದೆ. ಹೋಳಿ ಹುಣ್ಣಿಮೆಯಿಂದ ಆರು ದಿನಗಳವರೆಗೆ ಶ್ರೀ ಲಕ್ಷ್ಮೀ ಮತ್ತು ಕನಕ ನರಸಿಂಹ ದೇವರ ವಿವಾಹ ಮಹೋತ್ಸವದ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗುತ್ತವೆ. ಈ ವಿವಾಹ ಮಹೋತ್ಸವ ಸಂದರ್ಭದಲ್ಲಿ ಕಾಮ ದಹನದಂಥ ಅಶುಭ ಕಾರ್ಯಗಳು ನಡೆಯಬಾರದೆನ್ನುವ ದೃಷ್ಟಿಯಿಂದ ಹೋಳಿ ಹಬ್ಬ ಆಚರಣೆ ನಿಷೇಧಿಸಲಾಗಿದೆ.

    ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರವೇ ಈ ಆದೇಶ ಹೊರಟಿಸಿತ್ತು ಎಂಬುದು ಮತ್ತೊಂದು ವಿಶೇಷ. ಶ್ರೀ ಲಕ್ಷ್ಮೀ ಮತ್ತು ಕನಕ ನರಸಿಂಹ ವಿವಾಹ ಮಹೋತ್ಸವವನ್ನೇ ಜಾತ್ರಾ ಮಹೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ಮುಂಡರಗಿ ಪಟ್ಟಣ, ಬರದೂರ, ಶಿರೋಳ, ಬ್ಯಾಲವಾಡಗಿ, ರಾಮೇನಹಳ್ಳಿ, ಮಕ್ತುಂಪುರ, ಬೆಣ್ಣಿಹಳ್ಳಿ, ತಾಮ್ರಗುಂಡಿ ಸೇರಿ 7 ಗ್ರಾಮದಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ.

    ಜಾತ್ರಾ ಮಹೋತ್ಸವ 28ರಿಂದ: ಶ್ರೀ ಲಕ್ಷ್ಮೀ ಕನಕನರಸಿಂಹ ದೇವಸ್ಥಾನ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಾ. 28ರಿಂದ ಏ.4ರ ವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಲಿವೆ. ಮಾ.28ರಂದು ಶ್ರೀ ಲಕ್ಷ್ಮೀ ಕನಕನರಸಿಂಹ ಮಂಗಲ ಸ್ನಾನ, ನಾಂದಿ ದೇವತಾ ಸ್ಥಾಪನೆ, ಶ್ರೀ ಲಕ್ಷ್ಮೀ ಕನಕನರಸಿಂಹ ಕಲ್ಯಾಣೋತ್ಸವ ನಡೆಯಲಿದೆ. ಮಾ.29ರಿಂದ 31ರ ವರೆಗೆ ವಿವಿಧ ಧಾರ್ವಿುಕ ಪೂಜೆಗಳೊಂದಿಗೆ ಪ್ರತಿದಿನ ಸಂಜೆ ಲಘು ರಥೋತ್ಸವ, ಪಲ್ಲಕ್ಕಿ ಸೇವೆ, ಏ.1ರಂದು ರಥೋತ್ಸವಕ್ಕೆ ಕಳಸಾರೋಹಣ, ಏ. 2ರಂದು ಬೆಳಗ್ಗೆ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಏ.3 ಮತ್ತು 4ರಂದು ಧಾರ್ವಿುಕ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

    ಬ್ರಿಟಿಷ್​ರ ಕಾಲದಲ್ಲಿಯೇ ಇಲ್ಲಿ ಹೋಳಿ ಆಚರಿಸದಂತೆ ಆದೇಶ ನೀಡಲಾಗಿತ್ತು. ಹುಣ್ಣಿಮೆಯಲ್ಲಿ ಕಲ್ಯಾಣ ಕಾರ್ಯ ನಡೆಯುವುದರಿಂದ ದಹನದಂತ ಅಶುಭ ಕಾರ್ಯಕ್ರಮ ಆಚರಣೆ ಮಾಡಬಾರದೆಂದು ಅಂದಿನ ಹಿರಿಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅದನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ.

    | ವಿ.ಎಲ್. ನಾಡಗೌಡ್ರ, ಶ್ರೀ ಲಕ್ಷ್ಮೀ ಕನಕನರಸಿಂಹ ದೇವಸ್ಥಾನ ಉಸ್ತುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts