More

    ಶಕ್ತಿಕೇಂದ್ರ ಕರಾವಳಿಗೆ ಬಿಜೆಪಿ ಮನ್ನಣೆ, ಶೋಭಾ ಕರಂದ್ಲಾಜೆ ಮೇಲೆ ಹೆಚ್ಚಿದ ನಿರೀಕ್ಷೆ

    ಮಂಗಳೂರು: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿಯ ಶಕ್ತಿ ಕೇಂದ್ರ ಎಂದೇ ಬಿಂಬಿತವಾದ ಕರಾವಳಿ ಜಿಲ್ಲೆಗಳಿಗೆ ಪಕ್ಷದ ವರಿಷ್ಠರು ವಿಶೇಷ ಪ್ರಾಶಸ್ತ್ಯ ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆಯಲ್ಲಿ ಹಲವು ಹೆಸರು ಪ್ರಸ್ತಾವನೆಯಲ್ಲಿದ್ದರೂ, ಅಂತಿಮವಾಗಿ ಶೋಭಾ ಅವರಿಗೆ ಅವಕಾಶ ಕಲ್ಪಿಸಿದ್ದು, ಡಿ.ವಿ.ಸದಾನಂದ ಗೌಡರಿಂದ ರಾಜೀನಾಮೆ ಪಡೆದದ್ದು ಕರಾವಳಿಯ ಮಟ್ಟಿಗೆ ಅಚ್ಚರಿಯ ಬೆಳವಣಿಗೆಯಾಗಿದೆ.

    ಕರಾವಳಿಯ ಬಿ.ಎಲ್.ಸಂತೋಷ್ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಹಿಂದೆ ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಕರಾವಳಿ ನಾಯಕರಿಗೆ ಮಣೆ ಹಾಕಿದ ಪಕ್ಷದ ವರಿಷ್ಠರು ಈಗ ಶೋಭಾ ಅವರ ಪಕ್ಷ ಸೇವೆಗೆ ಮನ್ನಣೆ ನೀಡಿದ್ದಾರೆ.

    ಹೋರಾಟಗಾರ್ತಿ ಶೋಭಾ ದಿಟ್ಟ ಮಹಿಳೆ ಎಂದೇ ರಾಜ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಯಶವಂತಪುರದ ಶಾಸಕಿಯಾಗಿ, ಸಚಿವೆಯಾಗಿ ಬೆಂಗಳೂರಿನಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ಅವರು 2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾದದ್ದು ಅಚ್ಚರಿಯ ಆಯ್ಕೆಯಾಗಿತ್ತು. ಸಂಸದೆಯಾಗಿ ರಾಷ್ಟ್ರ ರಾಜಕೀಯ ಪ್ರವೇಶಿಸಿದರೂ 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ರಾಜ್ಯ ರಾಜಕೀಯಕ್ಕೆ ಮರಳಲು ಬಯಸಿದ್ದರು. ಆದರೆ ಪಕ್ಷ ಅವಕಾಶ ನಿರಾಕರಿಸಿತು. 2019ರ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಶೋಭಾ ಅವರಿಗೆ ಈಗ ಸಚಿವೆ ಸ್ಥಾನ ಒಲಿದಿದೆ.

    ಜಾತಿ ಲೆಕ್ಕಾಚಾರ: ರಾಜ್ಯದ ಇಂಧನ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ ಶೋಭಾ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಇಂಧನ ಸಚಿವೆಯಾಗಿ ಮಂಗಳೂರಿನಲ್ಲಿ ಮೆಸ್ಕಾಂನ ಕಾರ್ಪೋರೇಟ್ ಕಚೇರಿ ಸಹಿತ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದರು. ರಾಜಕೀಯ ವಿರೋಧಿಗಳನ್ನು ಲೆಕ್ಕಿಸಿದೆ ಪಕ್ಷದ ಪರವಾಗಿ ಯಾವುದೇ ಸಂದರ್ಭ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಧೈರ್ಯ, ಸಾಮರ್ಥ್ಯ ಅವರಲ್ಲಿದೆ. ಇದರ ಜತೆಗೆ ಜಾತಿ ಲೆಕ್ಕಚಾರವೂ ಅವರಿಗೆ ಸಚಿವ ಸ್ಥಾನ ಒಲಿಯಲು ಕಾರಣ ಎನ್ನಲಾಗಿದೆ.

    ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಒಕ್ಕಲಿಗರಿದ್ದು, ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದಾರೆ. ಡಿ.ವಿ.ಸದಾನಂದ ಗೌಡರಿಗೆ ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಒಕ್ಕಲಿಗ ವೋಟ್ ಬ್ಯಾಂಕ್ ಇನ್ನಷ್ಟು ಗಟ್ಟಿಗೊಳಿಸಿತ್ತು. ಈಗ ಕರಾವಳಿ ಭಾಗದವರೇ ಆದ ಒಕ್ಕಲಿಗ ಮಹಿಳೆ ಶೋಭಾ ಅವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಜಾತಿ ಲೆಕ್ಕಾಚಾರವನ್ನು ಸಮಗೊಳಿಸಿದೆ ಎಂದು ವಿಶ್ಲೇಷಿಸಲಾಗಿದೆ.

    ಸಂಸದೆಯಾಗಿ ಸಾಧನೆ: ಶೋಭಾ ಕರಂದ್ಲಾಜೆ ಸಂಸದರಾಗಿ ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ, ನೊಂದ ಮಹಿಳೆಯರಿಗೆ 24*7 ಗಂಟೆ ನೆರವು ನೀಡುವ ನಿಟ್ಟಿನಲ್ಲಿ ನಿಟ್ಟೂರಿನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್, ಉಡುಪಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ, ಸರ್ಕಾರಿ ಪರಿಕರ ಕೊಠಡಿ ಮತ್ತು ತರಬೇತಿ ಕೇಂದ್ರ, ಕೇಂದ್ರೀಯ ವಿದ್ಯಾಲಯ, ಮಲ್ಪೆ-ತೀರ್ಥಹಳ್ಳಿ 169ಎ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆ ಮತ್ತಿತರ ಕಾರ್ಯಗಳ ಮೂಲಕ ಗಮನ ಸೆಳೆದವರು.

    ಮೂರನೆಯವರು: ಕೇಂದ್ರ ಸಚಿವ ಸ್ಥಾನ ಪಡೆದ ಅವಿಭಜಿತ ದ.ಕ. ಜಿಲ್ಲೆಯ ಬಿಜೆಪಿ ಸಂಸದರ ಪೈಕಿ ಶೋಭಾ ಮೂರನೆಯವರು. ಈ ಹಿಂದೆ ವಿ.ಧನಂಜಯ ಕುಮಾರ್ ಮತ್ತು ಡಿ.ವಿ.ಸದಾನಂದ ಗೌಡ ಕೇಂದ್ರ ಸಚಿವರಾಗಿದ್ದರು. ಮಂಗಳೂರು ಕ್ಷೇತ್ರದ ಸಂಸದರಾಗಿದ್ದ ಬಿಜೆಪಿಯ ವಿ.ಧನಂಜಯಕುಮಾರ್ 1998ರಲ್ಲಿ 13 ದಿನಗಳ ಅವಧಿಯ ವಾಜಪೇಯಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. 1999ರಲ್ಲಿ ಮತ್ತೆ ಅಧಿಕಾರ ಪಡೆದ ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಇಲಾಖೆಯ ರಾಜ್ಯ ಸಚಿವ, ಬಳಿಕ ಜವಳಿ ಖಾತೆ ಸಚಿವರಾಗಿದ್ದರು. ಆದರೆ ಅವಧಿ ಪೂರೈಸುವ ಮೊದಲೇ ರಾಜೀನಾಮೆ ನೀಡಲು ಸೂಚಿಸಲಾಗಿತ್ತು.

    ಕಾಂಗ್ರೆಸ್‌ನಿಂದ ಕೇಂದ್ರ ಸಚಿವರಾದ ಕರಾವಳಿಗರು: ಮಂಗಳೂರು ಕ್ಷೇತ್ರದ ಸಂಸದರಾಗಿದ್ದ ಕಾಂಗ್ರೆಸ್‌ನ ಸಿ.ಎಂ.ಪೂಣಚ್ಚ(ರೈಲ್ವೆ), ಬಿ.ಜನಾರ್ದನ ಪೂಜಾರಿ(ಹಣಕಾಸು, ಗ್ರಾಮೀಣಾಭಿವೃದ್ಧಿ), ರಾಜ್ಯಸಭಾ ಸದಸ್ಯರಾಗಿದ್ದ ಟಿ.ಎ.ಪೈ(ರೈಲ್ವೆ, ಬೃಹತ್ ಕೈಗಾರಿಕೆ, ಉಕ್ಕು ಮತ್ತು ಗಣಿ), ಆಸ್ಕರ್ ಫರ್ನಾಂಡಿಸ್(ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ, ಭೂ ಸಾರಿಗೆ ಮತ್ತು ಹೆದ್ದಾರಿ, ಕಾರ್ಮಿಕ ಹಾಗೂ ಉದ್ಯೋಗ), ಮಂಗಳೂರು ಮೂಲದ ಮಾರ್ಗರೆಟ್ ಆಳ್ವ(ಸಂಸದೀಯ ವ್ಯವಹಾರ, ಯುವಜನ ಮತ್ತು ಕ್ರೀಡೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ), ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾಗಿದ್ದ ವೀರಪ್ಪ ಮೊಯ್ಲಿ(ಪೆಟ್ರೋಲಿಯಂ, ಇಂಧನ, ಉದ್ಯಮ ವ್ಯವಹಾರ , ಕಾನೂನು) ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜನತಾ ಪರಿವಾರದ ನಾಯಕ ಮಂಗಳೂರು ಮೂಲದ ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ, ರೈಲ್ವೆ ಮತ್ತು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

    ಅವಧಿಗೆ ಮುನ್ನ ರಾಜೀನಾಮೆ: ಮಂಗಳೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡರು 2014ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಮೋದಿ ಸರ್ಕಾರದಲ್ಲಿ ರೈಲ್ವೆ ಸಚಿವರಾದ ಅವರು ಬಳಿಕ ಕಾನೂನು ಮತ್ತು ಸಾಂಖ್ಯಿಕ ಖಾತೆ ಸಚಿವರಾದರು. 2019ರಲ್ಲಿ ಮರು ಆಯ್ಕೆಗೊಂಡು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದರು. ಈಗ ಅವಧಿ ಪೂರೈಸುವ ಮುನ್ನ ರಾಜೀನಾಮೆ ನೀಡುವಂತಾಗಿದೆ.

    ಮೋದಿ ಸರ್ಕಾರದಲ್ಲಿ ಯಾವುದೇ ಖಾತೆ ನೀಡಿದರೂ ಸಹೋದರಿ ಶೋಭಾ ಸಮರ್ಥವಾಗಿ ನಿಭಾಯಿಸುತ್ತಾರೆ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಪರ್ಕವಾಗಿ ರಾಜ್ಯದ ಬೇಡಿಕೆ ಈಡೇರಿಸುವ ಶಕ್ತಿ ಇದೆ. ಹಿಂದುಳಿದ ಹಳ್ಳಿಯ ಯುವತಿಯೊಬ್ಬಳು ದೆಹಲಿ ತಲುಪಿ ಪರಿಶ್ರಮದ ಮೂಲಕ ರಾಜಕೀಯ ಸಾಧನೆ ಮಾಡಿರುವ ಸಹೋದರಿ ಬಗ್ಗೆ ಹೆಮ್ಮೆ ಇದೆ. ಈ ಹಿಂದೆ ರಾಜ್ಯ ಗ್ರಾಮಾಭಿವೃದ್ಧಿ ಸಚಿವೆಯಾಗಿದ್ದಾಗಿನ ಕಾರ್ಯವೈಖರಿಗಳನ್ನು ಈಗಲೂ ಜನರು ನೆನೆಪಿಸಿಕೊಳ್ಳುತ್ತಾರೆ.

    ಲಕ್ಷ್ಮಣ ಗೌಡ ಕರಂದ್ಲಾಜೆ, ಶೋಭಾ ಕರಂದ್ಲಾಜೆ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts