More

    ಕಾಂಗ್ರೆಸ್‌ನಿಂದ ಸ್ಟಾರ್ ಚಂದ್ರು ಕಣಕ್ಕೆ?: ಲೋಕಸಭೆ ಚುನಾವಣೆಗೆ ಸ್ಪರ್ಧೆ ಖಚಿತಪಡಿಸಿದ ಶಾಸಕ ಪುಟ್ಟಸ್ವಾಮಿಗೌಡ

    ಮಂಡ್ಯ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹೈವೋಲ್ಟೆಜ್ ಕ್ಷೇತ್ರ ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಅದರಲ್ಲಿಯೂ ಕಾಂಗ್ರೆಸ್‌ನಲ್ಲಿ ರಣತಂತ್ರ ಸದ್ದಿಲ್ಲದೆ ನಡೆಯುತ್ತಿದೆ. ಈ ನಡುವೆ, ಪಕ್ಷದ ಅಭ್ಯರ್ಥಿಯಾಗಿ ನಾಗಮಂಗಲ ಮೂಲದ ಉದ್ಯಮಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ಕಣಕ್ಕಿಳಿಯುತ್ತಾರೆ ಎನ್ನುವ ಮಾತು ಗಟ್ಟಿಯಾಗಿ ಕೇಳಿಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಚಂದ್ರು ಅವರ ಸಹೋದರ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಅವರ ಹೇಳಿಕೆ ಈ ಮಾತನ್ನು ಖಚಿತಪಡಿಸುತ್ತಿದೆ.
    ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿಯೂ ಯಶಸ್ಸನ್ನು ಮುಂದುವರಿಸುವ ತವಕದಲ್ಲಿದೆ. ಈ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಎಚ್ಚರಿಕೆ ವಹಿಸಿದೆ. ರೇಸ್‌ನಲ್ಲಿ ಹಲವು ನಾಯಕರಿದ್ದು, ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ವಕ್ಷೇತ್ರದ ಚಂದ್ರು ಅಖಾಡಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬೇಕಾದ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿರುವುದು ಗುಟ್ಟಿನ ವಿಷಯವೇನಲ್ಲ.
    ಮುನ್ನೆಲೆಗೆ: ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ಮಾಜಿ ಸಂಸದೆ ರಮ್ಯಾ, ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮೀ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು. ಈ ನಡುವೆಯೇ ಸ್ಟಾರ್ ಚಂದ್ರು ಅವರ ಹೆಸರು ಚಾಲ್ತಿಗೆ ಬಂದಿತು. ಇದೀಗ ಅದೇ ಹೆಸರು ಮುನ್ನೆಲೆಗೆ ಬಂದಿದ್ದು, ಇತ್ತೀಚೆಗೆ ಮಂಡ್ಯ ನಗರದಲ್ಲಿ ಫ್ಲೆಕ್ಸ್‌ಗಳು ಕೂಡ ರಾರಾಜಿಸುತ್ತಿವೆ. ಮಾತ್ರವಲ್ಲದೆ, ಕಳೆದ ವಾರ ನಡೆದ ಫಲಪುಷ್ಪ ಪ್ರದರ್ಶನದಲ್ಲಿಯೂ ಚಂದ್ರು ಅವರ ಹೆಸರಿನಲ್ಲಿ ವೇದಿಕೆ ಹಾಗೂ ಫ್ಲೆಕ್ಸ್ ಕಾಣಿಸಿಕೊಂಡಿದ್ದವು.
    ಈ ನಡುವೆಯೇ ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲಿರುವ ಪ್ರಮುಖ ಅಂಶಗಳೆಂದರೆ, ನಾನು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದೇನೆ. ಈಗಾಗಲೇ ಮಂಡ್ಯ ಕ್ಷೇತ್ರದ ಟಿಕೆಟ್ ನನ್ನ ಸಹೋದರನಿಗೆ ಖಚಿತವಾಗಿದೆ. ಆದ್ದರಿಂದ ಚಿಕ್ಕಬಳ್ಳಾಪುರ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಚುನಾವಣೆ ಮಾಡುವುದಾಗಿ ಹೇಳಿದ್ದಾರೆ.

    ಕಾಂಗ್ರೆಸ್‌ನಿಂದ ಸ್ಟಾರ್ ಚಂದ್ರು ಕಣಕ್ಕೆ?: ಲೋಕಸಭೆ ಚುನಾವಣೆಗೆ ಸ್ಪರ್ಧೆ ಖಚಿತಪಡಿಸಿದ ಶಾಸಕ ಪುಟ್ಟಸ್ವಾಮಿಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts