More

    ತಾಯಿ-ಮಗು ರಕ್ಷಿಸಿದ ರೈಲ್ವೆ ಸಿಬ್ಬಂದಿ

    ಬೆಳಗಾವಿ: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ತನ್ನ ಮಗಳೊಂದಿಗೆ ರೈಲು ಹತ್ತಿ ದೇಶಾಂತರ ಹೊರಟಿದ್ದ ಮಹಿಳೆಯನ್ನು ರೈಲ್ವೆ ಇಲಾಖೆ ಸಿಬ್ಬಂದಿ ಕೇವಲ ಒಂದೇ ಗಂಟೆ ಅವಧಿಯಲ್ಲಿ ಪತ್ತೆ ಹಚ್ಚಿ, ಇಬ್ಬರನ್ನೂ ಸುರಕ್ಷಿತವಾಗಿ ಅವರ ಮನೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿಯ ಸುಷ್ಮಾ ಜಗತಾಪ್(32) ಹಾಗೂ ನಾಲ್ಕು ವರ್ಷದ ಮಗಳು ಸ್ವರಾ ಎಂಬವರನ್ನು ದೆಹಲಿಯಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ರಕ್ಷಿಸಿ, ಮನೆ ತಲುಪಿಸಿದ್ದಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಮೆಚ್ಚುಗೆ ಪಡೆದಿದ್ದಾರೆ.

    ಘಟನೆಯ ವಿವರ: ಸುಷ್ಮಾ ಜಗತಾಪ್ ಅವರನ್ನು ಮಹಾರಾಷ್ಟ್ರದ ಹಾತಕಣಂಗಲೆಯ ನಿವಾಸಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ತವರು ಮನೆ ಬೆಳಗಾವಿಗೆ ಬಂದಾಗ ಲಾಕ್‌ಡೌನ್ ಜಾರಿಯಾದ ಕಾರಣಕ್ಕೆ ಇಲ್ಲಿಯೇ ಉಳಿದುಕೊಂಡಿದ್ದರು. ಆದರೆ, ಗಂಡನ ಮನೆಯವರ ಮಾನಸಿಕ ಕಿರುಕುಳದಿಂದಾಗಿ ಸುಷ್ಮಾ ಖಿನ್ನತೆಗೆ ಒಳಗಾಗಿ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

    ನಿಲ್ದಾಣದಲ್ಲಿ ಮಲಗಿದ್ದ ತಾಯಿ-ಮಗಳು: ನಾಲ್ಕೈದು ದಿನಗಳ ಕಾಲ ರೈಲಿನಲ್ಲಿ ಪ್ರಯಾಣ ಮಾಡಿದ್ದ ಸುಷ್ಮಾ ಜಾರ್ಖಂಡಗೆ ತೆರಳಿದ್ದರು. ಅಲ್ಲಿಂದ ರೈಲ್ವೆ ನಿಲ್ದಾಣಾಧಿಕಾರಿಯೊಬ್ಬರು ಮಹಿಳೆಯನ್ನು ದೆಹಲಿ ರೈಲ್‌ಗೆ ಹತ್ತಿಸಿದ್ದರು. ಸುಷ್ಮಾ ನಾಪತ್ತೆಯಾದ ಬಗ್ಗೆ ಸೆ. 6ರಂದು ರೈಲ್ವೆ ಸಿಬ್ಬಂದಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ರಿಸರ್ವೇಷನ್ ಸೂಪರ್‌ವೈಸರ್ ಸ್ನೇಹಲ್ ಕಾಂಬಳೆ ಅವರು ರೈಲ್ವೆ ಇನ್‌ಸ್ಪೆಕ್ಟರ್ ದಿನೇಶಕುಮಾರ ಅವರಿಗೆ ಮಾಹಿತಿ ತಿಳಿಸಿದ್ದು, ಅವರು ಅದೇ ದಿನ ರಾತ್ರಿ ದೆಹಲಿಗೆ ರಾತ್ರಿ 9ಕ್ಕೆ ಕರೆ ಮಾಡಿ ಮಹಿಳೆಯ ಸಂಪೂರ್ಣ ವಿವರ ಕಳುಹಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಕೇವಲ 50 ನಿಮಿಷದಲ್ಲಿಯೇ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆ ತನ್ನ ಮಗಳೊಂದಿಗೆ ಊಟ, ನೀರು ಇಲ್ಲದೆ ಬಳಲಿ ಮಲಗಿರುವುದನ್ನು ಪತ್ತೆ ಹಚ್ಚಿದ್ದಾರೆ.

    ಊಟದ ವ್ಯವಸ್ಥೆ: ದೆಹಲಿಯ ಕಾನ್ಸ್‌ಟೇಬಲ್ ಮೋಹಿತ್ ಪಾನವರ್ ಅವರು, ಸುಷ್ಮಾ ಮತ್ತು ಅವರ ಮಗಳನ್ನು ಗಮನಿಸಿ ಫೋಟೋ ಕ್ಲಿಕ್ಕಿಸಿ ಬೆಳಗಾವಿಗೆ ಕಳುಹಿಸಿದ್ದಾರೆ. ಮಹಿಳೆ ಸುಷ್ಮಾ ಜಗತಾಪ್ ಎಂಬುದು ದೃಢಪಟ್ಟ ನಂತರ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಸೆ. 7ರಂದು ಮಧ್ಯಾಹ್ನ 3ಕ್ಕೆ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಹತ್ತಿಸಿ ಬೆಳಗಾವಿಗೆ ಕಳುಹಿಸಿದ್ದಾರೆ. ರೈಲ್‌ನಲ್ಲಿ ಎರಡು ದಿನಗಳ ಪ್ರಯಾಣ ಮಾಡಿ ಮಂಗಳವಾರ ಮಧ್ಯರಾತ್ರಿ 12:30ಕ್ಕೆ ಬೆಳಗಾವಿಗೆ ರೈಲ್ ಬಂದಿದ್ದು, ಮಹಿಳೆ ಹಾಗೂ ಮಗುವನ್ನು ಬರ ಮಾಡಿಕೊಳ್ಳಲಾಯಿತು. ಬುಧವಾರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಗಮನಕ್ಕೆ ಬರುತ್ತಿದ್ದಂತೆ ಮಹಿಳೆ ಮತ್ತು ಮಗುವನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ ಕರೆಯಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts