More

    ಮೈಸೂರು ಜಿಲ್ಲೆಯಲ್ಲಿ ತಾಯಿ-ಮಗುವಿನ ಮರಣ ಇಳಿಮುಖ

    ಅವಿನಾಶ್ ಜೈನಹಳ್ಳಿ ಮೈಸೂರು
    ಸತತ ಎರಡು ವರ್ಷ ಮಹಾಮಾರಿ ಕರೊನಾ ಆರ್ಭಟದ ನಡುವೆಯೂ ತಾಯಿ, ಮಗುವಿನ ಮರಣ ಪ್ರಮಾಣ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಫಲವಾಗಿ ಮೈಸೂರು ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ. ಇದಕ್ಕೆ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಕಾರಣರಾಗಿದ್ದಾರೆ.

    ಪ್ರಸ್ತುತ ಸಾಲಿನಲ್ಲಿ ದೇಶದಲ್ಲಿ ಜನನವಾದ ಪ್ರತಿ ಸಾವಿರ ಶಿಶುಗಳ ಪೈಕಿ 28 ಹಾಗೂ ರಾಜ್ಯದಲ್ಲಿ 23 ಶಿಶುಗಳು ಮೃತಪಟ್ಟಿವೆ. ಆದರೆ ಈ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ 15.3ರಷ್ಟು ಇದೆ. ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ಬಹುತೇಕರು ಹೆರಿಗೆಗಾಗಿ ಮೈಸೂರಿನ ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ. ಆದ್ದರಿಂದ ಒಟ್ಟಾರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಎಲ್ಲರ ಲೆಕ್ಕ ತೆಗೆದುಕೊಂಡರೆ ಮೈಸೂರು ಜಿಲ್ಲೆಯಲ್ಲಿ ಪ್ರತಿ ಸಾವಿರ ಶಿಶುಗಳ ಪೈಕಿ 23 ಶಿಶುಗಳು ಮೃತಪಟ್ಟಿವೆ. ಈ ಪೈಕಿ ಕೇವಲ ಮೈಸೂರು ಜಿಲ್ಲೆಯವರ ಲೆಕ್ಕ ಮಾಡಿದರೆ ಮರಣ ಪ್ರಮಾಣ ಕಡಿಮೆ ಇದೆ.
    ಈ ಸಾಲಿನಲ್ಲಿ ಹೆರಿಗೆ ಸಮಯದಲ್ಲಿ ದೇಶದಲ್ಲಿ ಲಕ್ಷ ತಾಯಂದಿರ ಪೈಕಿ 97 ಹಾಗೂ ರಾಜ್ಯದಲ್ಲಿ 69 ತಾಯಂದಿರು ಮೃತಪಟ್ಟಿದ್ದಾರೆ. ಆದರೆ ಜಿಲ್ಲೆಯಲ್ಲಿ ಈ ಸಂಖ್ಯೆ 67 ಇದೆ. ಮರಣ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಜನನಿ ಸುರಕ್ಷಾ ಯೋಜನೆ, ನಗು-ಮಗು ಇನ್ನಿತರ ಯೋಜನೆಗಳು ಸಫಲವಾಗಿವೆ.

    ತಾಯಂದಿರ ಮರಣ ಪ್ರಮಾಣವನ್ನು 2024ರ ವೇಳೆಗೆ 67ಕ್ಕೆ (1 ಲಕ್ಷ ತಾಯಂದಿರ ಪೈಕಿ) ಇಳಿಸಬೇಕೆಂಬುದು ಕೇಂದ್ರ ಸರ್ಕಾರದ ಗುರಿ. ಆದರೆ ಮೈಸೂರು ಈಗಾಗಲೇ ಈ ಗುರಿ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಈಗಾಗಲೇ 67ಕ್ಕೆ ಇಳಿಕೆಯಾಗಿದೆ. 2024ರ ವೇಳೆಗೆ ಈ ಪ್ರಮಾಣ ಮತ್ತಷ್ಟು ಇಳಿಯುವ ನಿರೀಕ್ಷೆ ಹೊಂದಲಾಗಿದೆ.

    ದೇಶದಲ್ಲಿ 2024ರ ವೇಳೆಗೆ ಶಿಶು ಮರಣ ಪ್ರಮಾಣವನ್ನು 20ರೊಳಗೆ (ಪ್ರತಿ ಸಾವಿರ ಮಗುವಿಗೆ) ಇಳಿಕೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 15ಕ್ಕೆ ಇಳಿಕೆ ಆಗಿದೆ. 2024ರ ವೇಳೆಗೆ ಈ ಪ್ರಮಾಣ ಮತ್ತಷ್ಟು ಇಳಿಯುವ ನಿರೀಕ್ಷೆ ಹೊಂದಲಾಗಿದೆ.

    ಶೇ.99.9 ಹೆರಿಗೆ ಆಸ್ಪತ್ರೆಯಲ್ಲಿ

    ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆರಿಗೆಗಳಾಗಿವೆ. ಈ ಪೈಕಿ ಶೇ.99.9ರಷ್ಟು ಆಸ್ಪತ್ರೆಯಲ್ಲೇ ಆಗಿದೆ. ಹೆಚ್ಚಿನ ಹೆರಿಗೆ ಆಸ್ಪತ್ರೆಯಲ್ಲಿ ನಡೆಯುತ್ತಿರುವುದು ತಾಯಂದಿರು ಮತ್ತು ಮಗುವಿನ ಮರಣ ಪ್ರಮಾಣ ಕ್ಷೀಣಿಸಲು ಪ್ರಮುಖ ಕಾರಣ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಉತ್ತಮ ಆರೈಕೆ ದೊರೆಯುತ್ತಿರುವುದು ಕೂಡ ಮರಣ ಪ್ರಮಾಣ ಇಳಿಕೆಗೆ ನೆರವಾಗಿದೆ. ಸರ್ಕಾರ ವಿವಿಧ ಯೋಜನೆಗಳಡಿ ಗರ್ಭಿಣಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರ, ಔಷಧ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ), ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಜನನಿ ಸುರಕ್ಷಾ ಯೋಜನೆ, ನಗು-ಮಗು ಸೇರಿ ಹಲವು ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ ಹಲವು ತಾಯಂದಿರು ಮತ್ತು ಶಿಶುಗಳ ಜೀವ ಉಳಿದಿದೆ.

    ಹೆರಿಗೆಗೆ ಆರ್ಥಿಕ ನೆರವು

    ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಅನಕ್ಷರಸ್ಥರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದರು. ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಜಾರಿಯಾದ ನಂತರ ಆರೋಗ್ಯದ ಕುರಿತು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಗಳು ನಡೆದಿವೆ. ಅಲ್ಲದೆ, ಆರ್ಥಿಕವಾಗಿ ಹಿಂದುಳಿದವರು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಸರ್ಕಾರದಿಂದ ಆರ್ಥಿಕ ನೆರವು ಕೂಡ ದೊರೆಯುತ್ತದೆ. ಸಹಜ ಹೆರಿಗೆಗೆ ಸಹಾಯಧನ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆರೋಗ್ಯ ಸೇವೆ ದೊರೆಯುತ್ತಿದೆ. ಇದಲ್ಲದೆ, ಸರ್ಕಾರದ ಹಲವು ಯೋಜನೆಗಳು ಗರ್ಭಿಣಿಯರನ್ನು ಆಸ್ಪತ್ರೆಯ ಕಡೆಗೆ ಆಕರ್ಷಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts