More

    ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…

    ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸೋಮವಾರ ಒಳ್ಳೆಯ ದಿನವೆಂದು 842 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಚುನಾವಣೆಯಲ್ಲಿ ಕೋಟಿ ಕುಳಗಳ ಘರ್ಜನೆ ಜೋರಾಗಿದ್ದು, ಬಹುತೇಕ ಅಭ್ಯರ್ಥಿಗಳು ಶತಕೋಟ್ಯಾಧೀಶರಾಗಿದ್ದಾರೆ. 

    ಶತಕೋಟಿ ಒಡೆಯ ಎಂ.ಬಿ.ಪಾಟೀಲ

    ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಒಟ್ಟು 102.89 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಚುನಾವಣೆ ಆಯೋಗಕ್ಕೆ ಸಲ್ಲಿಸಿದ ದಾಖಲೆ ಪ್ರಕಾರ ಎಂ.ಬಿ. ಪಾಟೀಲ ಹೆಸರಲ್ಲಿ 97.22 ಲಕ್ಷ ರೂ. ಬೆಲೆಯ ಮರ್ಸಿಡಿಸ್​ ಬೆಂಜ್​, 1.50 ಕೋಟಿ ರೂ. ಬೆಲೆಯ ಬಿಎಂಡಬ್ಲು ಕಾರು, ಹೂಡಿಕೆ, ವಿವಿಧ ಕಂಪನಿಗಳಲ್ಲಿ ಷೇರು ಖರೀದಿ ಸೇರಿ 8,59,69,928 ರೂ. ಮೌಲ್ಯದ ಚರಾಸ್ತಿ ಇದೆ. ಕೃಷಿ ಭೂಮಿ, ಬೆಂಗಳೂರು, ವಿಜಯಪುರದಲ್ಲಿ ವಸತಿ, ವಾಣಿಜ್ಯ ಕಟ್ಟಡ ಸೇರಿ 94,29,41,500 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ 102,89,11,428 ರೂ. ಆಸ್ತಿ ಹೊಂದಿದ್ದಾರೆ. ಹಾಗೆಯೇ 34,26,50,980 ರೂ. ಸಾಲ ಪಡೆದಿದ್ದಾರೆ.

    ಪತ್ನಿ ಆಶಾ ಪಾಟೀಲ ಹೆಸರಲ್ಲಿ 92.80 ಲಕ್ಷ ರೂ. ಬೆಲೆಯ 160 ತೊಲ ಬಂಗಾರ, ವಾಹನಗಳು, ಹೂಡಿಕೆ ಸೇರಿ 12,39,05,877 ರೂ. ಮೌಲ್ಯದ ಚರಾಸ್ತಿ ಹಾಗೂ ಹೊನಗನಹಳ್ಳಿಯಲ್ಲಿ ಕೃಷಿ ಭೂಮಿ, ಬೆಂಗಳೂರಿನಲ್ಲಿ ವಸತಿ ಕಟ್ಟಡ ಸೇರಿ 24,32,13,600 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ ಒಟ್ಟು 36,71,19,477 ರೂ. ಆಸ್ತಿ ಇದೆ. 12,98,49,000 ರೂ. ಸಾಲ ಪಡೆದಿದ್ದಾರೆ. ಹಿರಿಯ ಪುತ್ರನ ಹೆಸರಲ್ಲಿ 1,12,68,980 ರೂ.ಮೌಲ್ಯದ ಹಾಗೂ ಕಿರಿಯ ಪುತ್ರನ ಹೆಸರಲ್ಲಿ 58,05,095 ರೂ. ಮೌಲ್ಯದ ಚರಾಸ್ತಿ ಇದೆ.

    ಮಾಧುಸ್ವಾಮಿ ಆಸ್ತಿ 7 ಪಟ್ಟು ಹೆಚ್ಚಳ

    ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಕುಟುಂಬದ ಚರ-ಸ್ಥಿರಾಸ್ತಿ ಒಟ್ಟು ಮೌಲ್ಯ ಐದು ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ. 5 ವರ್ಷಗಳ ಹಿಂದೆ ಕುಟುಂಬದ ಒಟ್ಟು ಚರ-ಸ್ಥಿರಾಸ್ತಿ 4.13 ಕೋಟಿ ಇದ್ದಿದ್ದು, ಈ ಬಾರಿ 27.05 ಕೋಟಿ ರೂ. ಹೆಚ್ಚಿದೆ.

    ಟಿಎಂಸಿಸಿ ಬ್ಯಾಂಕ್​ನಲ್ಲಿ ಮಾಧುಸ್ವಾಮಿ 7.27 ಕೋಟಿ ರೂ., ಹಾಗೂ ಪತ್ನಿ ತ್ರಿವೇಣಿ 10.50 ಕೋಟಿ ರೂ. ಸಾಲ ಹೊಂದಿದ್ದಾರೆ. ವಿವಿಧ ಬ್ಯಾಂಕ್​ಗಳಲ್ಲಿರುವ ಠೇವಣಿ, ಉಳಿತಾಯ, ಮ್ಯೂಚುಯೆಲ್​ ಫಂಡ್​, ಡಿಬೆಂಚರ್​ಗಳಲ್ಲಿ ಹಣ ಹೂಡಿದ್ದು ಇದರ ಜತೆಗೆ ಚಿನ್ನಾಭರಣ, ಟೊಯೋಟಾ ಫಾರ್ಚೂನರ್​, ಟ್ರಾಕ್ಟರ್​, ನಿಸ್ಸಾನ್​ ಕಾರು ಸೇರಿ ಚರಾಸ್ತಿಯ ಒಟ್ಟು ಮೌಲ್ಯ 26,23,2181 ರೂ.,! ಬೆಂಗಳೂರಿನ ರಾಜಮಹಲ್​ ವಿಲಾಸ್​ನಲ್ಲಿ 4.91 ಕೋಟಿ ರೂ.ಮೊತ್ತದ ನಿವೇಶನ, ಮನೆ, ಪೀಣ್ಯ ಇಂಡಸ್ಟ್ರಿಯಲ್​ ಏರಿಯಾ ಬಳಿ 4 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ವಿವಿಧೆಡೆ ಭೂಪರಿವರ್ತನೆ ಮಾಡಿರುವುದೂ ಸೇರಿ ಪತ್ನಿ ಹೆಸರಲ್ಲಿ 15,14,03,731 ರೂ., ಒಟ್ಟು ಸ್ಥಿರಾಸ್ತಿ ಖರೀದಿಸಿದ್ದಾರೆ.

    ನಿಖಿಲ್ ಕುಮಾರಸ್ವಾಮಿ

    ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ 46.51ಕೋಟಿ ರೂ. ಚರಾಸ್ತಿ ಹಾಗೂ 28 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.151 ಕೆಜಿ ಚಿನ್ನ ಹಾಗೂ 38.94 ಕೋಟಿ ರೂ.ಸಾಲ ಹೊಂದಿದ್ದಾರೆ. ನಿಖಿಲ್ ಬಳಿ ಲ್ಯಾಂಬೋರ್ಗಿನಿ ಸಹಿತ ಒಟ್ಟು 5 ಕಾರುಗಳಿವೆ. 4.28 ಕೋಟಿ ರೂ. ವಾರ್ಷಿಕ ಆದಾಯವಿದ್ದು, ಒಟ್ಟು 169 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

    ಸೋಮಣ್ಣ ಆಸ್ತಿ 13.82 ಕೋಟಿ ರೂ.

    ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಸಚಿವ ವಿ.ಸೋಮಣ್ಣ ಕೋಟ್ಯಧಿಪತಿಯಾಗಿದ್ದು, 13,82,14,769 ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಈ ಪೈಕಿ 3,61,14,769 ರೂ. ಮೌಲ್ಯದ ಚರಾಸ್ತಿ ಹಾಗೂ 10,21,00,000 ರೂ. ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಜತೆಗೆ ವಿವಿಧ ಬ್ಯಾಂಕ್​, ಹಣಕಾಸು ಸಂಸ್ಥೆಗಳು ಮತ್ತಿತರ ಮೂಲಗಳಿಂದ 2.90 ಕೋಟಿ ರೂ. ಸಾಲ ಪಡೆದಿರುವುದಾಗಿಯೂ ಮಾಹಿತಿ ನೀಡಿದ್ದಾರೆ.

    ತಮ್ಮ ಪತ್ನಿ ಜೆ.ಶೈಲಜಾ ಹೆಸರಿನಲ್ಲಿ 13,01,63,851 ರೂ. ಮೌಲ್ಯದ ಚರಾಸ್ತಿ ಹಾಗೂ 21.40 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಪತ್ನಿ ಹೆಸರಲ್ಲೂ ಜತೆಗೆ ವಿವಿಧ ಬ್ಯಾಂಕ್​, ಹಣಕಾಸು ಸಂಸ್ಥೆಗಳು ಮತ್ತಿತರ ಮೂಲಗಳಿಂದ 4,53,83,907 ರೂ. ಸಾಲ ಪಡೆದಿರುವುದಾಗಿಯೂ ತಿಳಿಸಿದ್ದಾರೆ.

    ರೆಡ್ಡಿಗಿಂತ ಪತ್ನಿಯೇ ಶ್ರೀಮಂತೆ

    ಕೆಆರ್​ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿಗಿಂತ ಪತ್ನಿ ಲಕ್ಷ್ಮಿ ಅರುಣಾ ಶ್ರೀಮಂತೆ. ಇವರ ಬಳಿ 1.76
    ಲಕ್ಷ ರೂ. ನಗದು ಇದ್ದು, ಚರಾಸ್ತಿ ಮೌಲ್ಯ 96.23 ಕೋಟಿ ರೂ.ಗಳಷ್ಟಿದೆ. ರೆಡ್ಡಿ 29.20 ಕೋಟಿ ರೂ., ಚರಾಸ್ತಿ ಹೊಂದಿದ್ದಾರೆ. ಅರುಣಾ 104.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ರೆಡ್ಡಿ ಹೆಸರಿನಲ್ಲಿ ಎಂಟು ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಚಿನ್ನಾಭರಣದಲ್ಲೂ ಅರುಣಾ ಮೇಲುಗೈ ಆಗಿದ್ದು, 16.44 ಕೋಟಿ ರೂ. ಮೌಲ್ಯದ 38,486 ಗ್ರಾಂ ಚಿನ್ನ ಹಾಗೂ ಡೈಮಂಡ್​ ಹೊಂದಿದ್ದಾರೆ. ಲಕ್ಷ್ಮಿ ಅರುಣಾ ಓಬಳಾಪುರಂ ಮೈನಿಂಗ್​ ಕಂಪನಿಯಲ್ಲಿ 29.55 ಕೋಟಿ ರೂ., ಬ್ರಾಹ್ಮಣಿ ಇಂಡಸ್ಟ್ರೀಸ್​ನಲ್ಲಿ 25.08 ಕೋಟಿ ರೂ. ಹೂಡಿಕೆ, ಮುದಿತಾ ಪ್ರಾಪರ್ಟಿಸ್​ನಲ್ಲಿ 18.27 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಆಕ್ಸಿಜನ್​ ಕೋ.ಪೆ.ಲಿ.ನಲ್ಲಿ 2.50 ಲಕ್ಷ ರೂ., ಲಕ್ಷ್ಮಿ ಅರುಣಾ ಅವರು ಚರಾಸ್ತಿ ಮೇಲೆ 96.23 ಕೋಟಿ ರೂ, ಮತ್ತು ಸ್ಥಿರಾಸ್ತಿ ಮೇಲೆ 74.89 ಕೋಟಿ ರೂ. ಸಾಲ ಹೊಂದಿದ್ದಾರೆ.

    ಶಾಮನೂರು 292.83 ಕೋಟಿ ರೂ. ಒಡೆಯ

    ಕಾಂಗ್ರೆಸ್​ ಪಕ್ಷದ ಹಿರಿಯ ಶಾಸಕ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪ ಅವರ ಆಸ್ತಿ ಮೌಲ್ಯ 292.83 ಕೋಟಿ ರೂ. ಸೋಮವಾರ ನಾಮಪತ್ರದ ಜತೆಗೆ ಅವರು ಸಲ್ಲಿಸಿದ ಆಸ್ತಿ ವಿವರದ ಪ್ರಕಾರ, ಅವರ ಕೈಯಲ್ಲಿ 8 ಲಕ್ಷ ಹಣವಿದೆ. ಬ್ಯಾಂಕುಗಳಲ್ಲಿ 63.96 ಕೋಟಿ ರೂ. ಠೇವಣಿ, ಷೇರುಗಳು ಮತ್ತು ಡಿಬೆಂಚರ್​ಗಳಲ್ಲಿ 85.32 ಕೋಟಿ ರೂ. ಹೂಡಿಕೆ ಮಾಡಲಾಗಿದೆ.

    ಅವರು ಮಾಡಿರುವ ಸಾಲ 15.71 ಕೋಟಿ ರೂ., ಅವಿಭಕ್ತ ಕುಟುಂಬದ ಸಾಲ 2.02 ಕೋಟಿ ರೂ. ಇದೆ. 73.26 ಲಕ್ಷ ರೂ. ಗಳ ಮೌಲ್ಯದ ವಾಹನಗಳು, 2.25 ಕೋಟಿ ರೂ. ಮೌಲ್ಯದ ಆಭರಣಗಳಿವೆ. ಶಾಮನೂರು ಶಿವಶಂಕರಪ್ಪ 35 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, 25 ಲಕ್ಷ ರೂ. ಮೌಲ್ಯದ ಮನೆ ಹೊಂದಿರುವುದಾಗಿ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ.

    ಶತ ಕೋಟ್ಯಧಿಶ ಶಂಕರ್​ಬಳಿ ಕಾರು ಇಲ್ಲ

    ಎನ್​ಸಿಪಿಯಿಂದ ಸೋಮವಾರ ನಾಮಪತ್ರ ಸಲ್ಲಿಸಿದ ಆರ್​. ಶಂಕರ ಹಾಗೂ ಅವರ ಪತ್ನಿ ಸೇರಿ ಒಟ್ಟು 276.23 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆರ್​. ಶಂಕರ ಹೆಸರಿನಲ್ಲಿ 38.78 ಕೋಟಿ ರೂ.ಗಳ ಚರಾಸ್ತಿ ಇದೆ. 163.24 ಕೋಟಿ ರೂ.ಗಳ ಸ್ವಯಾರ್ಜಿತ ಸೊತ್ತು, 1.58 ಕೋಟಿ ರೂ.ಗಳ 2.783 ಕೆ.ಜಿ. ಚಿನ್ನಾಭರಣ ಇದೆ. 27.88ನ ಕೋಟಿ ರೂ. ಸಾಲ ಹೊಂದಿದ್ದಾರೆ.

    ಅವರ ಪತ್ನಿ ಹೆಸರಲ್ಲಿ 8.21 ಕೋಟಿ ರೂ. ಚರಾಸ್ತಿ, 65.97ಕೋಟಿ ರೂ.ಗಳ ಸ್ವಯಾರ್ಜಿತ ಸ್ವತ್ತು, 1.78 ಕೋಟಿ ರೂ. ಮೌಲ್ಯದ 3.126 ಕೆ.ಜಿ ಚಿನ್ನಾಭರಣಗಳಿವೆ. ಅವರು 15.96 ಕೋಟಿ ರೂ. ಸಾಲ ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಆರ್​. ಶಂಕರ (ದಂಪತಿ) 229 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಈ ಬಾರಿ 276 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದು, 46 ಕೋಟಿ ರೂ. ಹೆಚ್ಚಳವಾಗಿದೆ.

    ದೇಶಪಾಂಡೆ ಆಸ್ತಿ 147 ಕೋಟಿ ರೂ. ಹೆಚ್ಚಳ

    ಕಾರವಾರ: ಹಳಿಯಾಳ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆರ್​.ವಿ. ದೇಶಪಾಂಡೆ ಕುಟುಂಬದ ಆಸ್ತಿಯ ಮೌಲ್ಯ ಐದು ವರ್ಷಗಳಲ್ಲಿ 147.66 ಕೋಟಿ ರೂ. ಹೆಚ್ಚಳವಾಗಿದೆ. 2018ರಲ್ಲಿ ಅವರು 215 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಈ ಬಾರಿ ಅವರ ಕುಟುಂಬದ ಆಸ್ತಿಯ ಮೌಲ್ಯ ಸುಮಾರು 362.66 ಕೋಟಿ ರೂ. ಎಂದು ಅಫಿಡವಿಟ್​ನಲ್ಲಿ ಘೋಷಿಸಿದ್ದಾರೆ.

    ಅವರ ಪತ್ನಿಯ ಬಳಿಯೇ ಅತಿ ಹೆಚ್ಚು ಆಸ್ತಿ ಇದೆ. ಅದರಲ್ಲಿ ಮುಖ್ಯವಾಗಿ ವಿವಿಧ ಕಂಪನಿಗಳಲ್ಲಿ ಅವರ ಪತ್ನಿ ಹೂಡಿಕೆ ಮಾಡಿದ್ದು, ಅದರಲ್ಲಿ 207 ಕೋಟಿ ರೂ. ಚರ ಆಸ್ತಿಗಳಿವೆ. ದೇಶಪಾಂಡೆ ಬಳಿ 26.82 ಕೋಟಿ ರೂ. ಚರ ಆಸ್ತಿಗಳಿದ್ದು, 19.04 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಅವರ ಕುಟುಂಬದ ಪಾಲುದಾರಿಕೆಯಲ್ಲಿ 54.74 ಕೋಟಿ ರೂ. ಚರ ಹಾಗೂ 8.93 ಕೋಟಿ ರೂ. ಸ್ಥಿರ ಆಸ್ತಿಗಳಿವೆ. ಒಟ್ಟಾರೆ ಅವರ ಕುಟುಂಬ 14.7 ಕೋಟಿ ರೂ. ಸಾಲ ಹೊಂದಿದೆ. ಅವರ ಅಫಿಡವಿಟ್​ನಲ್ಲಿ ಮಕ್ಕಳು ಹಾಗೂ ಮಕ್ಕಳ ಕುಟುಂಬದ ಆಸ್ತಿಯ ವಿವರಗಳಿಲ್ಲ.

    ಸತೀಶ್​ ರೆಡ್ಡಿ ಆಸ್ತಿಮೌಲ್ಯ 127 ಕೋಟಿ

    ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕನೇ ಬಾರಿಗೆ ಸ್ಪರ್ಧಿಯಾಗಲು ನಾಮಪತ್ರ ಸಲ್ಲಿಸಿರುವ ಶಾಸಕ ಸತೀಶ್​ ರೆಡ್ಡಿಯವರ ಒಟ್ಟು ಆಸ್ತಿಮೌಲ್ಯ 127 ಕೋಟಿ ರೂ.ಗಳಾಗಿವೆ. ಸತೀಶ್​ ರೆಡ್ಡಿ ಚರಾಸ್ತಿ ಒಟ್ಟು ಮೌಲ್ಯ 94,61,32,273, ಪತ್ನಿ ಆಶಾ ಚರಾಸ್ತಿ ಮೌಲ್ಯ 9,83,01,415, ಸತೀಶ್​ ರೆಡ್ಡಿ ವಿವಿಧ ಬ್ಯಾಂಕುಗಳಲ್ಲಿ ಸಾಲ 39,82,80,306, ಪತ್ನಿ ಆಶಾ ಪಡೆದಿರುವ ಸಾಲ 7,41,58,252, ಸತೀಶ್​ ರೆಡ್ಡಿ ಸ್ಥಿರಾಸ್ತಿ ಒಟ್ಟು ಮೌಲ್ಯ 17,66,50,000, ಪತ್ನಿ ಆಶಾ ಸ್ಥಿರಾಸ್ತಿ ಮೌಲ್ಯ6,15,99,050, ರೆಡ್ಡಿ ಬಳಿ ಪೋರ್ಶೆ ಕಾರು, ಆಡಿ ಕ್ಯೂ ಕಾರು, ಪತ್ನಿ ಬಳಿ ಮಾರುತಿ ಬಲೆನೋ ಮತ್ತು ರೇವಾ ಕಾರು ಇದೆ.

    ರೆಡ್ಡಿ ಬಳಿ ಚಿನ್ನ 1350 ಗ್ರಾಂ, ಬೆಳ್ಳಿ 20 ಕೆಜಿ, ಪತ್ನಿ ಆಶಾ ಬಳಿ 2600 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ಮಗಳು ರಿಷಿಕಾ ಬಳಿ 400 ಗ್ರಾಂ ಚಿನ್ನ, ಮಗ ನಿಶಾಂತ್​ 400 ಗ್ರಾಂ ಚಿನ್ನವಿದ್ದು ಸತೀಶ್​ ರೆಡ್ಡಿ ಒಟ್ಟು ಆಸ್ತಿ ಮೌಲ್ಯ 127,19,39,317 ಆಗಿದೆ ಎಂದು ಅಫಿಡೆವಿಟ್​ನಲ್ಲಿ ನಮೂದಿಸಲಾಗಿದೆ.

    ಸಂತೋಷ್​ ಶತಕೋಟಿ “ಲಾರ್ಡ್​’

    ಧಾರವಾಡ: ಕಲಟಗಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸಂತೋಷ್​ ಲಾಡ್​ 121.63 ಕೋಟಿ ರೂ.ಗಳ ಚರಾಸ್ತಿ, 8.27 ಕೋಟಿ ರೂ.ಗಳ ಸ್ಥಿರಾಸ್ತಿಯ ಒಡೆಯರಾಗಿದ್ದಾರೆ. ಸಂತೋಷ್​ ಲಾಡ್​ ಕೈಯಲ್ಲಿ 7,49,365 ರೂ. ನಗದು, 2.67 ಲಕ್ಷ ರೂ. ಮೌಲ್ಯದ ಓಮ್ನಿ ಕಾರು, 2.35 ಕೋಟಿ ರೂ.ಗಳ ಚಿನ್ನಾಭರಣ, 17 ಲಕ್ಷ ರೂ. ಬ್ಯಾಂಕ್​ ಠೇವಣಿ ಇದೆ. ಬಾಂಡ್​, ಶೇರ್​, ವಿಎಸ್​ಎಲ್​ ಸ್ಟೀಲ್​, ಕನೆಕ್ಟ್​ ಫಿಲ್ಮ್ಸ್ ಮೀಡಿಯಾ, ವಿಎಸ್​ಎಲ್​ ಲ್ಯಾಂಡ್​ ಡೆವಲಪರ್ಸ್​, ಐಆರ್​ಎ ಫಿಲ್ಮ್​ ಫಿಲ್ಮ್ಸ್ ಸೇರಿ ಇತರೆಡೆ 16.97 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ವ್ಯಕ್ತಿ ಮತ್ತು ಸಂಸ್ಥೆಗಳಿಗೆ 70.22 ಕೋಟಿ ರೂ. ಸಾಲ ನೀಡಿದ್ದಾರೆ. 17.31 ಕೋಟಿ ರೂ. ಸಾಲ ಪಡೆದಿದ್ದಾರೆ. ಲಾಡ್​ ಪತ್ನಿ ಕೀರ್ತಿ ಬಳಿ 4.25 ಲಕ್ಷ ರೂ. ಸಾಲ, 84 ಲಕ್ಷ ರೂ.ಗಳ ಚಿನ್ನಾಭರಣ, 5.84 ಕೋಟಿ ರೂ.ಗಳ ಚರಾಸ್ತಿ ಇದೆ. 2.60 ಕೋಟಿ ರೂ. ಸಾಲವಿದೆ. ಪುತ್ರ ಕರಣ್​ 2.76 ಕೋಟಿ ರೂ.ಗಳ ಚರಾಸ್ತಿ, 2.50 ಕೋಟಿ ರೂ. ಸಾಲ ಹೊಂದಿದ್ದಾರೆ. ಬಳ್ಳಾರಿಯ ಸಂಡೂರು, ಧಾರವಾಡದ ಕೆಲಗೇರಿಯಲ್ಲಿ ಜಮೀನು, ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿ ಅಪಾರ್ಟ್​ಮೆಂಟ್​, ಸಂಡೂರಿನಲ್ಲಿ ಮನೆಯನ್ನು ಲಾಡ್​ ಹೊಂದಿದ್ದಾರೆ.

    ರೇವಣ್ಣ ಪತ್ನಿ ಭವಾನಿ ಬಳಿ 3 ಕೆಜಿ ಚಿನ್ನ

    ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಎಚ್​.ಡಿ. ರೇವಣ್ಣ 43 ಕೋಟಿ ರೂ. ಆಸ್ತಿ ಒಡೆಯ. 43,37,56,441 ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್​ ಸಲ್ಲಿಸಿದ್ದಾರೆ. ಸ್ಥಿರಾಸ್ತಿ 7.36 ಕೋಟಿ ರೂ. ಚರಾಸ್ತಿ ಹಾಗೂ 36.01 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಭವಾನಿ ಹೆಸರಿನಲ್ಲಿ 38,25,22,777 ರೂ. ಆಸ್ತಿ ಇದ್ದು, 8.66 ಕೋಟಿ ರೂ. ಚರಾಸ್ತಿ ಇದ್ದರೆ, 29.58 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಭವಾನಿ ಬಳಿ 46 ಕೆಜಿ ಬೆಳ್ಳಿ, 3 ಕೆ.ಜಿ. ಚಿನ್ನ ಹಾಗೂ 25 ಕ್ಯಾರೆಟ್​ ವಜ್ರದ ಆಭರಣ ಇದ್ದು, ಒಟ್ಟು 2.20 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ವಜ್ರದ ಆಭರಣದ ಒಡತಿಯಾಗಿದ್ದಾರೆ. ರೇವಣ್ಣ 320 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ತಾಯಿ ಚನ್ನಮ್ಮ ಅವರಿಂದ 60 ಲಕ್ಷ ರೂ. ಮತ್ತು ತಂದೆ ದೇವೇಗೌಡರಿಂದ 31 ಲಕ್ಷ ರೂ., ಸಹೋದರ ರಮೇಶ್​ ಅವರಿಂದ 4 ಕೋಟಿ ರೂ. ಸಾಲ, ಮನೆ ನಿರ್ಮಾಣಕ್ಕೆ 2 ಕೋಟಿ ರೂ. ಸಾಲ ಮಾಡಿರುವುದಾಗಿ ರೇವಣ್ಣ ವಿವರಿಸಿದ್ದಾರೆ. ಭವಾನಿ 5.28 ಕೋಟಿ ರೂ. ಸಾಲ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್​ 1413 ಕೋಟಿ

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಆಸ್ತಿ ಮೌಲ್ಯ 1 ಸಾವಿರ ಕೋಟಿ ರೂ. ಗಡಿ ದಾಟಿದ್ದು, ತಾವು, ಪತ್ನಿ ಉಷಾ, ಪುತ್ರ ಆಕಾಶ್​ ಕೆಂಪೇಗೌಡ, ಪುತ್ರಿ ಆಭರಣ ಸೇರಿ ಒಟ್ಟಾರೆ 1413 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. 

    ಡಿ.ಕೆ.ಶಿವಕುಮಾರ್​ ಅವರ ಸ್ತಿರ ಮತ್ತು ಚರಾಸ್ತಿ ಮೌಲ್ಯ1215 ಕೋಟಿ ರೂ.ಗಳಾದರೆ, ಪತ್ನಿ ಅವರ ಬಳಿ ಇರುವ ಆಸ್ತಿ ಮೌಲ್ಯ 133 ಕೋಟಿ ರೂ.ಗಳಾಗಿದೆ. ಪುತ್ರನ ಬಳಿ 55.6 ಕೋಟಿ ರೂ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಇರುವುದಾಗಿ ಘೋಷಣೆ ಮಾಡಿದ್ದಾರೆ. ಪುತ್ರಿ ಆಭರಣ ಬಳಿಯೂ 12.7 ಲಕ್ಷ ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ.

    ಕುಟುಂಬದ ಒಟ್ಟು ಸಾಲ 265 ಕೋಟಿ ಸಾಲವಿದ್ದು, ಡಿಕೆಶಿ ಸಾಲವೇ 226 ಕೋಟಿ ರೂ. ಇದೆ. 238 ಕೋಟಿ ರೂ.ಗಳ ಸಾಲಕ್ಕೆ ಸಂಬಂಧಿಸಿಂದಂತೆ ವ್ಯಾಜ್ಯ ಇದೆ ಎಂದು ತಿಳಿಸಿದ್ದಾರೆ. 2021&22ನೇ ಸಾಲಿನಲ್ಲಿ ಇವರ ಆದಾಯ ಒಟ್ಟು 14.24 ಕೋಟಿ ರೂ.ಗಳಾಗಿವೆ. ಟೊಯೊಟಾ ಕ್ವಾಲಿಸ್​ ಕಾರಿನ ಮಾಲೀಕರಾಗಿರುವ ಶಿವಕುಮಾರ್​, 23 ಲಕ್ಷ ರೂ ಮೌಲ್ಯದ ಹ್ಯೂಬ್ಲೆಟ್​ ವಾಚ್​ ಸೇರಿದಂತೆ, 2.80 ಕೋಟಿ ರೂ.ಮೌಲ್ಯದ ಚಿನ್ನ ಬೆಳ್ಳಿ ಹಾಗೂ ವಜ್ರದ ಆಭರಣ ಹೊಂದಿದ್ದಾರೆ.

    ಎಚ್​ಡಿಕೆ 189.27 ಕೋಟಿ ರೂ. ಒಡೆಯ

    ಚನ್ನಪಟ್ಟಣ ಜೆಡಿಎಸ್​ ಅಭ್ಯರ್ಥಿ ಎಚ್​.ಡಿ.ಕುಮಾರಸ್ವಾಮಿ 189.27 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದು, 47 ಲಕ್ಷ ರೂ.ಗಳ ಕೃಷಿ ಆದಾಯ ನಮೂದಿಸಿದ್ದಾರೆ. ಕುಮಾರಸ್ವಾಮಿ ಮತ್ತು ಅನಿತಾ ದಂಪತಿ ಒಟ್ಟಾಗಿ 92.84 ರೂ. ಕೋಟಿ ಮೊತ್ತದ ಸ್ಥಿರಾಸ್ತಿ ಹಾಗೂ 96.43 ಕೋಟಿ ರೂ. ಮೊತ್ತದ ಚರಾಸ್ತಿ ಹೊಂದಿದ್ದಾರೆ. ಅನಿತಾ 125 ಕೋಟಿ ರೂ. ಆಸ್ತಿ ಗಳಿಸಿದ್ದಾರೆ. ಕುಮಾರಸ್ವಾಮಿ ಬಳಿ 750 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ, 4 ಕ್ಯಾರಟ್​ ವಜ್ರ, ಇ ಟ್ರ್ಯಾಕ್ಟರ್​ ಇದೆ.

    ಕುಮಾರಸ್ವಾಮಿ ಬಳಿ 48 ಎಕರೆಗೂ ಹೆಚ್ಚು ಕೃಷಿ ಜಮೀನು ಹಾಗೂ ಪತ್ನಿ ಬಳಿ 16.05 ಕೋಟಿ ರೂ ಮೌಲ್ಯದ ಕೃಷಿ ಜಮೀನು ಇದೆ. ಎಚ್ಟಿಕೆ ಹೆಸರಲ್ಲಿ ಜೆ.ಪಿ.ನಗರದಲ್ಲಿ 5400 ಚ.ಅಡಿ ವಿಸ್ತೀರ್ಣದ ಮನೆ ಇದೆ. ಅನಿತಾ ಅವರಿಂದ 2.4 ಕೋಟಿ ರೂ.ಸಾಲ, ಭವಾನಿ ರೇವಣ್ಣ ಅವರಿಂದ 3.26 ಲಕ್ಷ ರೂ. ಹಾಗೂ ಪುತ್ರ ನಿಖಿಲ್​ರಿಂದ 1.37 ಕೋಟಿ ಸಾಲ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts