More

    ಪಿಡಿಒ ಕೊರತೆ, ಅಭಿವೃದ್ಧಿ ಚಿಂತೆ: 800ಕ್ಕೂ ಹೆಚ್ಚು ಸ್ಥಾನ ಖಾಲಿ, ಹೊಸ ಚುನಾಯಿತರಿಗೆ ಆತಂಕ..

    ಮರಿದೇವ ಹೂಗಾರ ಹುಬ್ಬಳ್ಳಿ

    ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ರಾಜ್ಯಾದ್ಯಂತ ನಡೆಯುತ್ತಿರುವಂತೆಯೇ ಅಧಿಕಾರಿ ವರ್ಗದ ಸಿಬ್ಬಂದಿ ಕೊರತೆ ಅಭಿವೃದ್ಧಿಗೆ ಹಿನ್ನಡೆಯಾಗುವ ಆತಂಕ ತಂದಿಟ್ಟಿದೆ. ರಾಜ್ಯದ 6021 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 5203 ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಈ ಸ್ಥಾನಗಳು ಭರ್ತಿ ಆಗದೇ ಇದ್ದಲ್ಲಿ, ಒಬ್ಬ ಪಿಡಿಒ ಹೆಗಲಿಗೆ ಅಕ್ಕಪಕ್ಕದ ಪಂಚಾಯಿತಿಗಳ ಭಾರ ಬೀಳಲಿದೆ.

    ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು, ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಬಹಳಷ್ಟು ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ. ಆದರೆ, ಅಭಿವೃದ್ಧಿಪರ ಚಿಂತನೆ ಮಾಡಬೇಕಿರುವ ಜನಪ್ರತಿನಿಧಿಗಳಿಗೆ, ಪಂಚಾಯಿತಿ ಅಧಿಕಾರಿಗಳ ಹುದ್ದೆ ಖಾಲಿ ಇರುವುದು ಚಿಂತೆಯಾಗಿದೆ.ಅನೇಕ ಪಿಡಿಒಗಳು, ಗ್ರಾಮ ಪಂಚಾಯಿತಿಗಳ ಮೇಲೆ ಇಲಾಖೆ ಹಾಗೂ ಲೋಕಾಯುಕ್ತ ತನಿಖೆಗಳಿವೆ. ಮತ್ತೊಂದೆಡೆ, 800ಕ್ಕೂ ಹೆಚ್ಚು ಪಿಡಿಒಗಳ ಕೊರತೆ ಇದೆ. ಸದ್ಯ ಗ್ರೇಡ್ 1 ಮತ್ತು ಗ್ರೇಡ್ 2 ಕಾರ್ಯದರ್ಶಿಗಳು, ಪಂಚಾಯಿತಿಗಳನ್ನು ನೋಡಿ ಕೊಂಡು ಹೋಗುತ್ತಿದ್ದಾರೆ. ಕೆಲ ಪಿಡಿಒಗಳಿಗೆ ಸಮೀಪದ ಗ್ರಾ.ಪಂ.ಗಳ ಜವಾಬ್ದಾರಿ ಹೊರಿಸಲಾಗಿದೆ. ಗ್ರೇಡ್ 1 ಕಾರ್ಯದರ್ಶಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ ಒಂದು ಗ್ರಾಮ ಪಂಚಾಯಿತಿಗೆ ಬರುವ ವಾರ್ಷಿಕ ಕನಿಷ್ಠ 1 ಕೋಟಿ ರೂ.ಗೂ ಹೆಚ್ಚು ಅನುದಾನ ವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಹಿನ್ನಡೆಯಾಗಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಟ್ಟು 29 ಇಲಾಖೆಯ ಪ್ರಮುಖ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

    ಮಾತೃ ಇಲಾಖೆ ಪರಿಣಾಮ: ಪಿಡಿಒ ಹುದ್ದೆಗಳಿಗೆ ನೇಮಕವಾದ ಬಹಳಷ್ಟು ನೌಕರರಿಗೆ ಕೆಲಸ ಮಾಡುವ ಹುಮ್ಮಸ್ಸಿತ್ತು. ಆದರೆ ನಂತರ ಕೆಲವರಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸದ ಒತ್ತಡ ಗೊತ್ತಾಗಿತ್ತು. ಹಾಗಾಗಿಯೇ 800ಕ್ಕೂ ಹೆಚ್ಚು ಪಿಡಿಒಗಳು, ಸಣ್ಣ ನೌಕರಿ ಆದರೂ ಪರವಾಗಿಲ್ಲ ಎಂದು ಮರಳಿ ಮಾತೃ ಇಲಾಖೆಗೆ ತೆರಳಿದ್ದಾರೆ.

    ಅನುಷ್ಠಾನ ಹೇಗೆ?: ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ರಾಜ್ಯ ಸರ್ಕಾರವು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲು ನಿರ್ಧರಿಸಿದೆ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರತ್ಯೇಕ ತರಬೇತಿ ಸಿಗಲಿದೆ. 5 ದಿನಗಳವರೆಗೆ ನಡೆಯುವ ಈ ತರಬೇತಿಯಲ್ಲಿ ಜನಪ್ರತಿನಿಧಿಗಳ ಪಾತ್ರ, ಅಭಿವೃದ್ಧಿಯ ಮಹತ್ವ ಹಾಗೂ ಇತರ ವಿಷಯಗಳ ಸಮಗ್ರ ಪರಿಚಯ ಲಭಿಸಲಿದೆ. ‘ತರಬೇತಿ ನೀಡುವುದು ಸರಿ. ಆದರೆ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳೇ ಇಲ್ಲದಿದ್ದರೆ ಹೇಗೆ?’ ಎಂದು ಪ್ರಶ್ನಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು.

    ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಪೂರ್ಣ ಪ್ರಮಾಣದಲ್ಲಿಲ್ಲ. ಗ್ರೇಡ್ 1 ಕಾರ್ಯದರ್ಶಿಗಳಿಗೆ ಪದೋನ್ನತಿ ಕೊಟ್ಟು ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಕೆ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ.

    | ಎಲ್.ಕೆ. ಅತೀಖ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ

    ಒಬ್ಬ ಪಿಡಿಒ ಹೆಗಲಿಗೆ ಇನ್ನೊಂದು ಪಂಚಾಯಿತಿ ಜವಾಬ್ದಾರಿ ಬೀಳುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗುತ್ತಿದ್ದೇವೆ. ಕೆಲ ಪಿಡಿಒಗಳು ಸಕಾರಣವಿಲ್ಲದೆ, ಲೋಕಾಯುಕ್ತ ತನಿಖೆ, ವೇತನ ಬಡ್ತಿ ತಡೆ ಬಾಧೆ ಅನುಭವಿಸುವಂತಾಗಿದೆ.

    | ಬೋರಯ್ಯ ಎಚ್. ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts