More

    ಜಿಲ್ಲೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ 32 ಕ್ಕೂ ಅಧಿಕ ಪ್ರಕರಣ ದಾಖಲು

    ಕಾರವಾರ: ಉಪ ಲೋಕಾಯುಕ್ತ ನ್ಯಾ.ಎನ್.ಫಣೀಂದ್ರ ಅವರು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿದ್ದು 32 ಅಧಿಕ ಪ್ರಕರಣಗಳನ್ನು ಜಿಲ್ಲೆಯ ಅಧಿಕಾರಿಗಳ ವಿರುದ್ಧ ದಾಖಲಿಸಿಕೊಂಡಿದ್ದಾರೆ.

    ಉಪ ಲೋಕಾಯುಕ್ತರ ಬಳಿ ದೂರುಗಳ ಶನಿವಾರ ರಾಶಿಯೇ ಬಂದು ಬಿದ್ದಿದ್ದವು. ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ಸಲ್ಲಿಕೆಗೆ ಕೌಂಟರ್ ತೆರೆಯಲಾಗಿತ್ತು. 95 ದೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಉಪ ಲೋಕಾಯುಕ್ತ ಎನ್.ಫಣೀಂದ್ರ ಅವರು ಬೆಳಗಿನಿಂದ ಕತ್ತಲಾಗುವವರೆಗೂ ಒಂದೊಂದಾಗಿ ಅರ್ಜಿಗಳ ವಿಚಾರಣೆ ನಡೆಸಿದರು.

    ಕಾನೂನು ಸಲಹೆಗಳನ್ನು ನೀಡಿದರು. ತಮ್ಮ ವ್ಯಾಪ್ತಿಗೆ ಬರದ ಪ್ರಕರಣಗಳನ್ನೂ ಪರಿಶೀಲಿಸಿ ದೂರುದಾರರಿಗೆ ಕಾನೂನಿನ ಜ್ಞಾನ ನೀಡಿದರು. ಅಧಿಕಾರಿಗಳನ್ನು ಸ್ಥಳದಲ್ಲೇ ಕರೆಸಿ ವಿಚಾರಣೆ ನಡೆಸಿದರು. ಪ್ರಾಥಮಿಕವಾಗಿ ಸಮಸ್ಯೆ ಇದೆ ಎಂದು ಕಂಡುಬಂದ 32 ಅರ್ಜಿಗಳಿಗೆ ಸಂಬಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    5 ಅರ್ಜಿಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. 2 ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಶನಿವಾರ 65 ಅರ್ಜಿಗಳ ವಿಚಾರಣೆ ಮಾತ್ರ ಸಾಧ್ಯವಾಗಿದ್ದು, ಉಳಿದ ಅರ್ಜಿಗಳನ್ನು ಮಾರ್ಚ್ 5 ರಂದು ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ.ಕೆಲವು ಅರ್ಜಿಗಳಿಗೆ ಉಪ ಲೋಕಾಯುಕ್ತರು ಅಧಿಕಾರಿಗಳಿಗೆ ವಾರ, 15 ದಿನಗಳ ಗಡುವು ನೀಡಿದ್ದಾರೆ. ಅಧಿಕಾರಿಗಳು ಮಾಡಿಕೊಡದೇ ಇದ್ದಲ್ಲಿ ತಮಗೆ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ. ಸಲ್ಲಿಕೆಯಾದ ದೂರುಗಳಿಗೆ ಸಂಬಂಧಿಸಿದಂತೆ ಎದುರುದಾರರು ಹಾಗೂ ಅರ್ಜಿದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಜಮೀನು ಪೋಡಿ, ಅರಣ್ಯ ಜಮೀನು ಪರಬಾರೆ, ಭೂ ಪರಿಹಾರ ನೀಡುವಲ್ಲಿ ವಿಳಂಬ ಹೀಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚು ಬಂದಿದ್ದವು.

    ಕರ್ತವ್ಯ ಲೋಪ ಸಹಿಸುವುದಿಲ್ಲ:


    ಅಧಿಕಾರಿಗಳು ಕರ್ತವ್ಯ ಲೋಪ ಮಾಡಿ ದುರ್ನಡತೆ ತೋರಿದಲ್ಲಿ ಸಹಿಸುವುದಿಲ್ಲ. ಲೋಕಾಯುಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಲಾಗುವುದು. ಹಾಗೆಂದು ಅಧಿಕಾರಿಗಳಿಗೆ ಸತಾಯಿಸುವ ಸಲುವಾಗಿ ಸುಳ್ಳು ಪ್ರಕರಣ ದಾಖಲಿಸಿದರೂ ಅಂಥವರ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗುವುದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಎನ್.ಫಣೀಂದ್ರ ಎಚ್ಚರಿಸಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 7 ಕೋಟಿ ಜನರಿದ್ದು, ಒಟ್ಟಾರೆ ಜನಸಂಖ್ಯೆಯ ಶೇ.1 ರಷ್ಟೂ ಸರ್ಕಾರಿ ಅಧಿಕಾರಿಗಳಿಲ್ಲ. ಸುಮಾರು 2 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಸಿಬ್ಬಂದಿಯ ಕೊರತೆಯ ನೆಪ ಹೇಳಿ ಸಾರ್ವಜನಿಕರ ಕೆಲಸ ಮಾಡಿಕೊಡದೇ ಇರಲು ಬರುವುದಿಲ್ಲ. ನಿಮ್ಮ ಸಮಸ್ಯೆಯನ್ನು ಸರ್ಕಾರದ ಬಳಿ ಹೇಳಿ ಬಗೆಹರಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
    ಕೋಟ್ಯಂತರ ಜನರಿಗೆ ನ್ಯಾಯ ಕೊಡಿಸುವ ಕಾರ್ಯಾಂಗದ ಮಹತ್ವದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈಗಾಗಲೇ ಸರ್ಕಾರಿ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಲು ಬಿಡದೇ ನೌಕರರು ತಮ್ಮ ಜವಾಬ್ದಾರಿಯನ್ನು ಅರಿತು, ಕಾನೂನು ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಯ ಹಿರಿಯ ಅಧಿಕಾರಿಗಳು ತಾವು ಸಮರ್ಪಕವಾಗಿ ಕಾರ್ಯನಿರ್ವಹಿಸಿ, ಕೆಳಗಿನ ಅಧಿಕಾರಿಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಡಿಸಿ, ಎಸ್‌ಪಿ ಅವರಿಗೂ ಸೂಚಿಸಿದರು.
    ಮಾಡಬೇಕಾದ ಕಾರ್ಯವನ್ನು ಅಧಿಕಾರಿಗಳು ಸಕಾಲದಲ್ಲಿ, ಸಂದರ್ಭೋಚಿತವಾಗಿ ಕಾನೂನು ವ್ಯಾಪ್ತಿಯಲ್ಲಿ ಮಾಡದೇ ಇದ್ದಲ್ಲಿ ಅದು ಕರ್ತವ್ಯ ಲೋಪ ಉಂಟಾಗಲಿದೆ. ಅಥವಾ ಮಾಡುವ ಕಾರ್ಯದಲ್ಲಿ ಲೋಪ ಮಾಡಿದಲ್ಲಿ, ಮಾಡಬಾರದ ಕಾರ್ಯ ಮಾಡಿದಲ್ಲಿ ಅದು, ಲೋಕಾಯುಕ್ತ ವ್ಯಾಪ್ತಿಗೆ ಬರಲಿದೆ. ಸಾರ್ವಜನಿಕರು ನೀಡಿದ ದೂರನ್ನು ಪರಿಶೀಲಿಸಿ ಅಧಿಕಾರಿ, ಕರ್ತವ್ಯ ಲೋಪ ಎಸಗಿರುವುದು ಮೇಲ್ಮೋಟಕ್ಕೆ ಕಂಡುಬಂದರೂ ಲೋಕಾಯುಕ್ತ ಸರ್ಕಾರದ ಅನುಮತಿ ಪಡೆದು ವಿಚಾರಣೆ ಆರಂಭಿಸಲಿದೆ ಎಂದು ತಿಳಿಸಿದರು.

    ಜಾಗೃತಿಗಾಗಿ ಸಭೆ

    ಸಾರ್ವಜನಿಕರು ಲೋಕಾಯುಕ್ತದ ಕಾರ್ಯವೇನು..?ಸಂಸ್ಥೆಯ ಕಾರ್ಯ ವ್ಯಾಪ್ತಿಯೇನು..? ಅರ್ಜಿ ಹೇಗೆ ಸಲ್ಲಿಸಬೇಕು..? ಎಂಬುದನ್ನು ತಿಳಿಸಬೇಕಿದೆ. ಹಾಗಾಗಿ ಪ್ರತಿ ಜಿಲ್ಲೆಗೆ ಓಡಾಟ ಮಾಡಿ ಸಮಸ್ಯೆ ಆಲಿಸುವ, ಜನರಲ್ಲಿ ಜಾಗೃತಿ ಮೂಡಿಸುವ, ಅಧಿಕಾರಿಗಳಿಗೆ ಕಾನೂನಿನ ತಿಳುವಳಿಕೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಇದುವರೆಗೆ 12 ಜಿಲ್ಲೆಗಳಲ್ಲಿ ಅಹವಾಲು ಸ್ವೀಕರಿಸಲಾಗಿದೆ.
    ಇಬ್ಬರು ಖಾಸಗಿ ವ್ಯಕ್ತಿಗಳ ನಡುವಿನ ವ್ಯಾಜ್ಯಗಳನ್ನು, ವರ್ಗಾವಣೆ ವಿಚಾರಗಳನ್ನು ಲೋಕಾಯುಕ್ತ ಪರಿಹರಿಸಲಾಗದು. ಅವುಗಳನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಮೇಲ್ಮನವಿ ಪ್ರಾಧಿಕಾರಿಗಳಲ್ಲಿ ಬಗೆಹೆರಿಸಿಕೊಳ್ಳಬೇಕು. ಬೇರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳನ್ನು ಲೋಕಾಯುಕ್ತ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕ ಕಾರ್ಯದಲ್ಲಿ ಲೋಪ, ಭ್ರಷ್ಟಾಚಾರ, ಕಳಪೆ ಕಾಮಗಾರಿ, ವೈಯಕ್ತಿಕ ಕಾರ್ಯ ಮಾಡಿಕೊಳ್ಳುವಲ್ಲಿ ಅಧಿಕಾರಿಗಳ ವಿಳಂಬ ಇದನ್ನು ನಾವು ವಿಚಾರಣೆ ಮಾಡಿ ಬಗೆಹರಿಸಬಹುದಾಗಿದೆ ಎಂದರು.
    ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ ಸಿ., ಚೆನ್ನಕೇಶವ ರೆಡ್ಡಿ, 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕಿರಣ ಕಿಣಿ, ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್,ಎಸ್‌ಪಿ ಎನ್.ವಿಷ್ಣುವರ್ಧನ, ಲೋಕಾಯುಕ್ತ ಎಸ್‌ಪಿ ಕುಮಾರ ಚಂದ್ರ, ಎಡಿಸಿ ಪ್ರಕಾಶ ರಜಪೂತ ಇದ್ದರು.

    ಇದನ್ನೂ ಓದಿ: 2 ಸಾವಿರ ಕಿಮೀ ನಡೆದು ಅಯೋಧ್ಯಾ ರಾಮನ ದರ್ಶನ ಪಡೆದ ಭಕ್ತ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts