More

    ಇಪ್ಪತ್ತು ಇಪ್ಪತ್ತು… ನಿರೀಕ್ಷೆಯ ನೊಗ ಹೊತ್ತು..

    ಕರಿಯಪ್ಪ ಅರಳಿಕಟ್ಟಿ ಹಾವೇರಿ

    ಜಿಲ್ಲೆಯಲ್ಲಿನ ಸರಣಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬೇಕು. ಕಬ್ಬು ಬೆಳೆಗಾರರಿಗೆ ಎಫ್​ಆರ್​ಪಿ ದರದ ಮೇಲೆ ಹೆಚ್ಚುವರಿಯಾಗಿ 200 ರೂ. ದೊರೆಯಬೇಕು. ನೆರೆ ಸಂತ್ರಸ್ತರಿಗೆ ಸೂರು ನಿರ್ವಣವಾಗಬೇಕು. ನೆರೆಹಾವಳಿಗೆ ಕಿತ್ತು ಹೋದ ರಸ್ತೆ, ಸೇತುವೆ ಮರು ನಿರ್ವಣವಾಗಬೇಕು. ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗಬೇಕು. ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಕಾಮಗಾರಿ ಪೂರ್ಣಗೊಂಡು ರೈತರ ಜಮೀನುಗಳಿಗೆ ಜೀವಜಲ ದೊರಕಬೇಕು…!

    ಹೀಗೆ ಹತ್ತು ಹಲವು ನಿರೀಕ್ಷೆಯೊಂದಿಗೆ ಜಿಲ್ಲೆಯ ಜನತೆ 2020ನೇ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ನೆರೆ, ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿ ಸಿಹಿಗಿಂತ ಹೆಚ್ಚು ಕಹಿ ನೆನಪುಗಳೊಂದಿಗೆ 2019ಕ್ಕೆ ವಿದಾಯ ಹೇಳಿದ್ದಾರೆ.

    ರೈತ ಆತ್ಮಹತ್ಯೆ ಕೊನೆಯಾಗಲಿ: 2019ರ ಸಾಲಿನಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 45 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿ ಎದುರಾದ ಕಾರಣ 22 ರೈತರು ನೇಣಿಗೆ ಕೊರಳೊಡ್ಡಿದ್ದರು. ಈ ಬಾರಿ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ನೀರು ಪಾಲಾಯಿತು. ಮಾತ್ರವಲ್ಲದೆ, ಜಮೀನಿನ ಮಣ್ಣು ಸಹ ನೀರಿನಲ್ಲಿ ಕೊಚ್ಚಿ ಹೋಯಿತು. ಆದರೆ, ಸರ್ಕಾರದಿಂದ ಸಕಾಲಕ್ಕೆ ರೈತರಿಗೆ ಪರಿಹಾರ ದೊರಕದ ಕಾರಣ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗದ ಅನೇಕ ರೈತರು ಆತ್ಮಹತ್ಯೆಗೆ ಶರಣಾದರು.

    ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 1.43 ಲಕ್ಷ ರೈತರಿಗೆ ಸೇರಿದ 1,82,960 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ. ಇವರಿಗೆ 154.21ಕೋಟಿ ರೂ.ಗಳ ಪರಿಹಾರ ವಿತರಣೆಯಾಗಬೇಕಿದ್ದು, ಈವರೆಗೆ 1.03 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ಇನ್ನೂ 40 ಸಾವಿರ ರೈತರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದ್ದರಿಂದ ಈ ವರ್ಷವಾದರೂ ರೈತರಿಗೆ ತ್ವರಿತವಾಗಿ ಪರಿಹಾರ ದೊರೆಯುವಂತಾಗಬೇಕು. ರೈತ ಆತ್ಮಹತ್ಯೆ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕಬ್ಬು, ಮೆಕ್ಕೆಜೋಳ ಹಾಗೂ ಇತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯುವಂತೆ ವ್ಯವಸ್ಥೆ ನಿರ್ವಣವಾಗಬೇಕು ಎಂಬುದು ರೈತರ ಸಮುದಾಯದ ಅಭಿಪ್ರಾಯ.

    ಸೂರಿನ ನಿರೀಕ್ಷೆಯಲ್ಲಿ ನೆರೆ ಸಂತ್ರಸ್ತರು: ನೆರೆ ಹಾವಳಿಗೆ ಜಿಲ್ಲೆಯಲ್ಲಿ 22,899 ಮನೆಗಳಿಗೆ ಹಾನಿಯಾಗಿದೆ. ಆಗಸ್ಟ್​ನಲ್ಲಿ 305 ಮನೆಗಳು ಸಂಪೂರ್ಣ ಕುಸಿದಿವೆ. 3,435 ಮನೆಗಳಿಗೆ ಗಂಭೀರ ಹಾನಿಯಾಗಿದೆ. ಅಲ್ಪಪ್ರಮಾಣದಲ್ಲಿ 10,389 ಮನೆಗಳು ಹಾನಿಗೊಳಗಾಗಿವೆ. ಅಕ್ಟೋಬರ್ ಮಳೆಗೆ 58 ಪೂರ್ಣ ಕುಸಿದರೆ, 2,354 ಮನೆಗಳಿಗೆ ಗಂಭೀರ ಹಾನಿಯಾಗಿದೆ. 6,358 ಮನೆಗಳು ಅಲ್ಪಪ್ರಮಾಣದಲ್ಲಿ ಕುಸಿದಿವೆ. ಎ ಮತ್ತು ಬಿ ವರ್ಗದ ಮನೆಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಎಲ್ಲಿಯೂ ಮನೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಸಿ ವರ್ಗದ ಮನೆಗಳಿಗೆ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ಘೊಷಿಸಿದೆ. ಇದರಲ್ಲಿ ಶೇ. 25ರಷ್ಟು ಫಲಾನುಭವಿಗಳಿಗೆ ಹಣ ತಲುಪಿಲ್ಲ. ಹೀಗಾಗಿ, ನೆರೆ ಸಂತ್ರಸ್ತರು ಇಂದಿಗೂ ಸೂರು ನಿರ್ವಿುಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ‘ಸರ್ಕಾರ ಕೊಟ್ಟಿರುವ 1 ಲಕ್ಷ ರೂ.ನಲ್ಲಿ ತಳಪಾಯ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ಬಾಕಿಯಿರುವ 4 ಲಕ್ಷ ರೂ. ಮಂಜೂರು ಮಾಡಿದರೆ, ತಕ್ಕಮಟ್ಟಿಗೆ ಮನೆ ನಿರ್ವಿುಸಿಕೊಳ್ಳಲು ಸಾಧ್ಯವಾಗಲಿದೆ’ ಎನ್ನುತಾರೆ ನೆರೆ ಸಂತ್ರಸ್ತರು.

    ಕಬ್ಬಿಗೆ ದೊರೆಯಲಿ ರೂ. 200: ಹಾವೇರಿಯ ಸಂಗೂರ ಸಕ್ಕರೆ ಕಾರ್ಖಾನೆಯವರು ಪ್ರತಿ ವರ್ಷ 5 ಲಕ್ಷ ಟನ್ ಕಬ್ಬು ಅರೆಯುತ್ತಾರೆ. 2019ರಲ್ಲಿ ರೈತರಿಗೆ ಎಫ್​ಆರ್​ಪಿ ದರದಂತೆ 1 ಕ್ವಿಂಟಾಲ್​ಗೆ 2,163 ರೂ. ನಿಗದಿಯಾಗಿತ್ತು. ಆದರೆ, ಇದು ಸಾಕಾಗುತ್ತಿಲ್ಲ. ಹೆಚ್ಚುವರಿಯಾಗಿ ಪ್ರತಿ ಟನ್​ಗೆ ರೂ. 200 ದರ ನೀಡಬೇಕು ಎಂಬ ಕೂಗು ರೈತರದ್ದಾಗಿತ್ತು. ಈ ಕುರಿತು ಅನೇಕ ಹೋರಾಟ, ಸತ್ಯಾಗ್ರಹ ನಡೆದರೂ 2019ರಲ್ಲಿ ಮಾತ್ರ ಯಾವ ಕಾರಣಕ್ಕೂ ಸಕ್ಕರೆ ಕಾರ್ಖಾನೆಯವರು 200 ರೂ. ನೀಡಲು ಒಪ್ಪಲಿಲ್ಲ. ಈ ವರ್ಷವಾದರೂ ಎಫ್​ಆರ್​ಪಿ ದರಕ್ಕಿಂತ ಹೆಚ್ಚುವರಿ ಹಣ ಬರಬಹುದು ಎಂಬ ನಿರೀಕ್ಷೆ ಕಬ್ಬು ಬೆಳೆಗಾರರದ್ದಾಗಿದೆ.

    ರಸ್ತೆ, ಕುಡಿಯಲು ಶುದ್ಧ ನೀರು ಬೇಕು: ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ 5.57ಕಿಮೀ, ಜಿಲ್ಲಾ ಮುಖ್ಯರಸ್ತೆ 53.81ಕಿಮೀ. ರಾಜ್ಯ ಹೆದ್ದಾರಿಯ 3 ಸೇತುವೆ, ಜಿಲ್ಲಾ ಮುಖ್ಯರಸ್ತೆಯ 26 ಸೇತುವೆಗಳು ಹಾಳಾಗಿವೆ. ಆದರೆ, ಇವುಗಳ ದುರಸ್ತಿ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಇಂಥ ರಸ್ತೆಗಳಲ್ಲಿ ಓಡಾಡುವುದು ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ರಸ್ತೆ, ಸೇತುವೆಗಳ ಅಭಿವೃದ್ಧಿ ಕಾರ್ಯವಾಗಬೇಕಿದೆ. ಇನ್ನು ರಾಜ್ಯ ಸರ್ಕಾರ ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅನುಮೋದನೆ ನೀಡಿದ್ದರೂ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿಲ್ಲ. ಸ್ಥಾಪನೆಯಾದ ಗ್ರಾಮಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಗ್ರಾಮೀಣ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತವಾಗಿದ್ದಾರೆ. ಆದ್ದರಿಂದ 2020ರಲ್ಲಾದರೂ ಶುದ್ಧ ನೀರು ದೊರೆಯುವ ನಿರೀಕ್ಷೆಯನ್ನು ಗ್ರಾಮೀಣರು ಇಟ್ಟುಕೊಂಡಿದ್ದಾರೆ.

    ಯುಟಿಪಿಯಿಂದ ಸಿಗಲಿ ಜೀವಜಲ: ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣ ಕಾಮಗಾರಿ ಇಂದಿಗೂ ಆಮೆ ಗತಿಯಲ್ಲಿಯೇ ಸಾಗಿದೆ. 230 ಕಿ.ಮೀ. ಮುಖ್ಯ ಕಾಲುವೆ ನಿರ್ವಣದ ಗುರಿಯಲ್ಲಿ ಈಗಾಗಲೇ 215 ಕಿ.ಮೀ. ತಲುಪಿದೆ. ಆದರೆ ಉಪ ಕಾಲುವೆ, ಹೊಲಗಾಲುವೆ ಸೇರಿ ಪ್ರತಿ ರೈತನ ಜಮೀನಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಕಾಲುವೆಗಳ ನಿರ್ಮಾಣ ಬಾಕಿಯಿದೆ. ಈ ವರ್ಷವಾದರೂ ಎಲ್ಲ ಕಾಲುವೆ ಕಾಮಗಾರಿ ಮುಗಿದು ನೀರು ದೊರೆಯಲಿ ಎಂಬ ಆಶಾಭಾವನೆಯಲ್ಲಿ ಕಾಲುವೆ ಪಕ್ಕದ ಜಮೀನುಗಳ ರೈತರಿದ್ದಾರೆ.

    ಆರಂಭಗೊಳ್ಳಲಿದೆ ಮೆಗಾ ಮಾರುಕಟ್ಟೆ: ರಾಣೆಬೆನ್ನೂರ ಎನ್​ಎಚ್-4ಕ್ಕೆ ಹೊಂದಿಕೊಂಡ ಎಪಿಎಂಸಿ ಮೆಗಾ ಮಾರುಕಟ್ಟೆಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ 108 ಕೋಟಿ ರೂ. ಬಿಡುಗಡೆಗೊಳಿಸಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ಸಹ ನೆರವೇರಿಸಿದ್ದಾರೆ. 2020ರೊಳಗೆ ಸಂಪೂರ್ಣ ಕಾಮಗಾರಿ ಮುಗಿದು ರಾಣೆಬೆನ್ನೂರ ನಗರದಲ್ಲಿರುವ ಮೇಗಾ ಮಾರುಕಟ್ಟೆಗೆ ಸ್ಥಳಾಂತರವಾಗುವ ನಿರೀಕ್ಷೆಯು ಸಾಕಾರಗೊಳ್ಳಲಿ. ಇದರಿಂದ ವ್ಯಾಪಾರ-ವಹಿವಾಟು ವೃದ್ಧಿಗೆ ಅನುಕೂಲವಾಗಲಿ.

    ಬೇಕಿದೆ ಆಹಾರ ಸಂಸ್ಕರಣ ಘಟಕ, ಮಸಾಲಾ-ಚಿಲ್ಲಿ ಪಾರ್ಕ್: ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಬಳಿ ಚಿಲ್ಲಿ ಹಾಗೂ ಮಸಾಲಾ ಪಾರ್ಕ್ ನಿರ್ವಣಕ್ಕಾಗಿ ಜಾಗ ಗುರುತಿಸುವ ಕಾರ್ಯ ನಡೆದಿತ್ತು. ಆದರೆ, ಈವರೆಗೂ ಯಾವುದೇ ಸ್ಥಳ ಗುರುತಿಸಿಲ್ಲ. ಸರ್ಕಾರದ ಹಂತದಲ್ಲಿ ಇದು ಮುಂದೂಡಲ್ಪಟ್ಟಿದೆ. ಮಸಾಲಾ-ಚಿಲ್ಲಿ ಪಾರ್ಕ್ ನಿರ್ವಣವಾದರೆ ಅತ್ಯಧಿಕ ಉದ್ಯೋಗ ಸೃಷ್ಟಿ ಜತೆಗೆ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಜತೆಗೆ, ಆಹಾರ ಸಂಸ್ಕರಣ ಘಟಕ ನಿರ್ವಿುಸಬೇಕು ಎಂಬ ಬೇಡಿಕೆ ಜಿಲ್ಲೆಯ ಜನತೆಯದು.

    ಯೋಜನೆ ಪೂರ್ಣವಾಗಲಿ: ಹಾವೇರಿ ನಗರದಲ್ಲಿ ದಿನದ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ. ಜತೆಗೆ 50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು 2019ರಲ್ಲಿ ಅರ್ಧಂಬರ್ಧ ಆಗಿದ್ದು, 2020ರಲ್ಲಿಯೇ ಪೂರ್ಣಗೊಳ್ಳಬೇಕಿದೆ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಪೂರ್ಣಪ್ರಮಾಣದೊಂದಿಗೆ ಕಾರ್ಯಾರಂಭಿಸಬೇಕಿದೆ. ಸವಣೂರ ಏತ ನೀರಾವರಿ ಯೋಜನೆಗೆ ತ್ವರಿತಗತಿ, ಸರ್ವಜ್ಞ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭ, ಮೆಡಿಕಲ್ ಕಾಲೇಜ್ ನಿರ್ವಣ, ಪ್ರತ್ಯೇಕ ಡಿಸಿಸಿ ಬ್ಯಾಂಕ್, ಪ್ರತ್ಯೇಕ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬರಬೇಕಿದೆ.

    ಜಿಲ್ಲೆಯ ಇನ್ನಿಬ್ಬರಿಗೆ ಸಚಿವ ಸ್ಥಾನದ ನಿರೀಕ್ಷೆ: ಹಿರೇಕೆರೂರ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಆರ್. ಶಂಕರ ಅವರನ್ನು ಎಂಎಲ್​ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts