More

    ಕಳಸಾ-ಬಂಡೂರಿಯ ಮಹಾ ನಿರೀಕ್ಷೆ…

    ವಿಜಯವಾಣಿ ಸುದ್ದಿಜಾಲ ಗದಗ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಲಿರುವ 2020-21ನೇ ಸಾಲಿನ ಬಜೆಟ್ ಮೇಲೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯವಾಗಿ ಮಹದಾಯಿ ಯೋಜನೆ ಕಾಮಗಾರಿಗೆ ಬಜೆಟ್​ನಲ್ಲಿ ಅನುದಾನ ಮೀಸಲಿಡಬೇಕು ಎಂಬ ಒತ್ತಾಯ ಸಾರ್ವತ್ರಿಕವಾಗಿದೆ.

    ಮಹದಾಯಿ, ಕಳಸಾ- ಬಂಡೂರಿ ವಿವಾದವನ್ನು ಬಗೆಹರಿಸಿ ಮಲಪ್ರಭಾ ನದಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ನರಗುಂದ ಸೇರಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವೆ ಮಹದಾಯಿ ನೀರು ಹಂಚಿಕೆಯ ಕುರಿತಂತೆ ಮಹದಾಯಿ ನ್ಯಾಯಾಧೀಕರಣವು ರಾಜ್ಯಕ್ಕೆ 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲದೆ, ಇತ್ತೀಚೆಗೆ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು ರೈತರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಸಹ ಮಹದಾಯಿ ಕಾಮಗಾರಿಗೆ ಅನುದಾನ ನೀಡಬೇಕು ಹಾಗೂ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹಪೂರ್ವಕ ಮನವಿಯಾಗಿದೆ.

    ಕಳೆದ ಸಮ್ಮಿಶ್ರ ಸರ್ಕಾರ ಅವಧಿಯ 2019-20ರ ಆಯವ್ಯಯದಲ್ಲಿ ಗದಗ, ಕೊಪ್ಪಳ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ಕೃಷಿ ಅಳವಡಿಸಲು 150 ಕೋಟಿ ರೂ. ಅನುದಾನ ಹಾಗೂ ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 450 ಹಾಸಿಗೆ ಆಸ್ಪತ್ರೆ ನಿರ್ವಿುಸುವ ಭರವಸೆ ನೀಡಿತ್ತು. ಇದರಲ್ಲಿ, 450 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಕುರಿತು ಜಿಲ್ಲೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯಲಿಲ್ಲ. ಈ ಕುರಿತು ಬಜೆಟ್​ನಲ್ಲಿ ಘೊಷಣೆ ಮಾಡಿದ್ದೇ ಸಾಧನೆ ಎನ್ನುವಂತಾಯಿತು.

    ನಿರೀಕ್ಷೆಗಳು: ಲಕ್ಷೆ್ಮೕಶ್ವರ, ಗಜೇಂದ್ರಗಡ ನೂತನ ತಾಲೂಕುಗಳ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡಬೇಕಿದೆ. ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳ ಸ್ವಂತ ಕಟ್ಟಡ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕಿದೆ. ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ನೂತನ ಕಟ್ಟಡ ನಿರ್ವಣಕ್ಕೆ ಹಣ ನೀಡಬೇಕಿದೆ. ಸ್ನಾತಕೋತ್ತರ ಕೇಂದ್ರವನ್ನೂ ಆರಂಭಿಸಬೇಕಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕಿದೆ. ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ವಿಶೇಷ ಕ್ರಮಕೈಗೊಳ್ಳಬೇಕಿದೆ. ಜಿಲ್ಲೆಯ ವಿವಿಧೆಡೆ ಜಿಂಕೆ ಹಾವಳಿ ಹೆಚ್ಚಾಗಿದ್ದು, ಈ ವರ್ಷವಾದರೂ ಜಿಂಕೆ ವನ ನಿರ್ವಿುಸುವ ಕುರಿತು ಕ್ರಮ ಕೈಗೊಳ್ಳಬೇಕಿದೆ. 140 ಕೋಟಿ ರೂ. ವೆಚ್ಚದ ಸಾಸಲವಾಡ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕಿದೆ ಎಂಬುದು ಜಿಲ್ಲೆಯ ಜನರು ಒತ್ತಾಯವಾಗಿದೆ.

    ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪ್ರಸ್ತಾವನೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಲಿರುವ 2020-21ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಗದಗ ಜಿಲ್ಲೆಗೆ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿ ಇರುವಂತಹ ಎಲ್ಲಾ ನಗರಸಭೆಯ ಆಸ್ತಿ ತೆರಿಗೆ ಒಂದೇ ರೀತಿಯಲ್ಲಿ ಜಾರಿಗೆ ತರಬೇಕು, ಒಂದು ದೇಶ ಒಂದು ತೆರಿಗೆ ನೀತಿಜಾರಿ ಇರುವುದರಿಂದ ಮಾರುಕಟ್ಟೆಯ ಸೆಸ್ ಅನ್ನು ಜಿಎಸ್​ಟಿಯಲ್ಲಿ ವಿಲೀನಗೊಳಿಸಬೇಕು, ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು, ನಗರದ ವರ್ತಲ ರಸ್ತೆಗಳನ್ನು ಪೂರ್ಣಗೊಳಿಸಬೇಕು, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಜಿಲ್ಲಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಮಾಡಬೇಕು, ಗದಗ ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೃಗಾರಿಕೆಗಳು ಸ್ಥಾಪನೆ, ಜಿಲ್ಲೆಯಲ್ಲಿ ಗ್ಯಾಸ್ ಪೈಪಲೈನ್ ಹಾದು ಹೋಗಿರುವುದರಿಂದ ರಸಗೊಬ್ಬರ ಕಾರ್ಖಾನೆ, ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬುದು ಸಂಸ್ಥೆಯ ಬೇಡಿಕೆಯಾಗಿದೆ.

    ಜಿಲ್ಲೆಯಲ್ಲಿ ಹೆಸರು, ಕಡಲೆ, ಗೋವಿನಜೋಳ, ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ ಸಂಸ್ಕರಣ ಘಟಕ ಸ್ಥಾಪಿಸಬೇಕು. ಫುಡ್ ಪಾರ್ಕ್, ಮೇಜ್ ಪಾರ್ಕ್, ಪ್ರಿಂಟಿಂಗ್ ಕ್ಲಸ್ಟರ್ ಮತ್ತು ಜವಳಿ ಪಾರ್ಕ್ ಸ್ಥಾಪನೆ ಮಾಡಬೇಕು. ಶೇ. 3ರ ಬಡ್ಡಿ ದರದಲ್ಲಿ ಉದ್ಯಮಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಬೇಕು. ಪ್ರಿಂಟಿಂಗ್ ಹಾಗೂ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಕಾರ್ವಿುಕರಿಗೆ ತರಬೇತಿ ನೀಡುವಂತಹ ಶಾಲೆ ಆರಂಭಿಸಬೇಕು. ರೈತರಿಗೆ ಮಧ್ಯಮ ವರ್ಗದ ಹಿತ ಕಾಪಾಡಬೇಕು. ವ್ಯಾಪಾರಸ್ಥರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಒತ್ತು ನೀಡಬೇಕೆಂದು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಜಿಲ್ಲಾ ವಾಣಿಜ್ಯೊದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಕುರಡಗಿ, ಸಂಸ್ಥೆಯ ತೆರಿಗೆ ಉಪ ಸಮಿತಿ ಚೇರ್ಮನ್ ವಿ.ಎಚ್. ಮಾಟಲದಿನ್ನಿ ಒತ್ತಾಯಿಸಿದ್ದಾರೆ.

    ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ… ಸಚಿವರಿಗೂ ಗೊತ್ತಿಲ್ಲ…: ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಎಂದು ಘೋಷಣೆಯಾಗಿದೆ ಹೊರತು ಪ್ರಾಧಿಕಾರ ಕೆಲಸ ಕಾರ್ಯಗಳು ನಡೆದಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರಿಗೂ ಮಾಹಿತಿ ಲಭ್ಯ ಇಲ್ಲದಿರುವುದು ಆಶ್ಚರ್ಯಕರ ಸಂಗತಿ. ಲಕ್ಕುಂಡಿ ಪ್ರಾಧಿಕಾರ ಘೋಷಣೆ ಕೇವಲ ಕಣ್ಣೊರೆಸುವ ತಂತ್ರವಾಗದೆ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿದ್ದು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕಿದೆ.

    ಗದಗ- ಬೆಟಗೇರಿ ಅವಳಿ ನಗರದಲ್ಲಿ ನೂತನವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಜಮೀನು, ನಿವೇಶನಗಳು ಇಲ್ಲದೇ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಸಂಸ್ಥೆಯಿಂದ ನಿವೇಶನದ ಸಲುವಾಗಿ ಸರ್ವೇ ಕಾರ್ಯ ಕೈಗೊಳ್ಳುವ ಮೂಲಕ 600 ಎಕರೆ ಜಮೀನ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೆ, 600 ಎಕರೆ ಪೈಕಿ ಕೇವಲ 214 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರ ಕೂಡಲೇ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು.

    – ಶರಣಬಸಪ್ಪ ಕುರಡಗಿ, ಅಧ್ಯಕ್ಷ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts