More

    ಮೂಡುಬಿದಿರೆಯ ಶಿಕ್ಷಕಿ ಪದ್ಮಾಕ್ಷಿ ಮೃತ್ಯು, ವಿದ್ಯಾಗಮ ಬಳಿಕ ತಗುಲಿತ್ತು ಕೋವಿಡ್

    ಮೂಡುಬಿದಿರೆ: ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯಡಿ ಮನೆ ಮನೆಗೆ ತೆರಳಿ ಪಾಠ ಹೇಳಿಕೊಡುತ್ತಿದ್ದಾಗ ಕರೊನಾ ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಶಿಕ್ಷಕಿ ಪದ್ಮಾಕ್ಷಿ(47) ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
    13 ವರ್ಷಗಳಿಂದ ಶಿರ್ತಾಡಿ ಮಕ್ಕಿಯ ಜವಾಹರಲಾಲ್ ನೆಹರು ಅನುದಾನಿತ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಪದ್ಮಾಕ್ಷಿ ಮತ್ತು ಅವರ ಪತಿ, ಮೂಡುಬಿದಿರೆ ಡಿಜೆ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ ವೈ. ಜೈನ್ ಹಾಗೂ 11 ವರ್ಷದ ಪುತ್ರನಿಗೆ ಕೋವಿಡ್ ಬಾಧಿಸಿತ್ತು. ಪತಿ, ಪುತ್ರ ಚೇತರಿಸಿಕೊಂಡಿದ್ದರು.

    8-10 ದಿನಗಳಿಂದ ಅನಾರೋಗ್ಯದಿಂದಿದ್ದ ಪದ್ಮಾಕ್ಷಿಯವರು ಸೆ.28ರಂದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಸಮಸ್ಯೆ ಹಿನ್ನೆಲೆಯಲ್ಲಿ ಮರುದಿನ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಕೋವಿಡ್ ಖಚಿತಗೊಂಡ ಬಳಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಅ.13ರಂದು ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿತ್ತು. ಆದರೆ ಶ್ವಾಸಕೋಶದ ತೊಂದರೆಯಿಂದ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ಸಂಕಷ್ಟದ ಕುರಿತು ದಂಪತಿಯ ಪುತ್ರಿ ಐಶ್ವರ್ಯಾ ಜೈನ್ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕ ಅಳಲು ತೋಡಿಕೊಂಡಿದ್ದು, ನೆರವಿಗೆ ಬರುವಂತೆ ಸರ್ಕಾರವನ್ನು ಯಾಚಿಸಿದ್ದರು. ಅಲ್ಲದೆ, ನನ್ನ ತಾಯಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದೂ ನೋವಿನಿಂದ ಹೇಳಿದ್ದರು.

    ಎಚ್ಚೆತ್ತ ಸರ್ಕಾರ ಚಿಕಿತ್ಸೆಯ ಎಲ್ಲ ವೆಚ್ಚ ಭರಿಸುವುದಾಗಿ ತಿಳಿಸಿತ್ತು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮಕ್ಕೆ ಆದೇಶಿಸಿ, ಕುಟುಂಬಕ್ಕೆ ಧೈರ್ಯ ತುಂಬಿದ್ದರು.
    ಈ ಮಧ್ಯೆ ಗುರುವಾರ ಶಿಕ್ಷಕಿಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಸರ್ಕಾರದ ವತಿಯಿಂದಲೇ ಶುಕ್ರವಾರ ಏರ್‌ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆದೊಯ್ದು ಉನ್ನತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದ್ದರೂ, ಅದಕ್ಕೂ ಮೊದಲೇ ಅವರು ನಿಧನರಾದರು.
    ಪದ್ಮಾಕ್ಷಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದವರು. ಅವರ ಪತಿ ವೈ.ಶಶಿಕಾಂತ್ ಜೈನ್ ಡಿಜೆ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಾಗಿದ್ದಾರೆ. ದಂಪತಿಗೆ ಪುತ್ರಿ, ಪುತ್ರ ಇದ್ದಾರೆ. ಪದ್ಮಾಕ್ಷಿ ಅವರ ಅಂತ್ಯಸಂಸ್ಕಾರ ಬೆಳ್ತಂಗಡಿ ತಾಲೂಕಿನ ಎಳನೀರಿನಲ್ಲಿ ಶುಕ್ರವಾರ ನಡೆಯಿತು.

    ಶಿಕ್ಷಕಿ ಪದ್ಮಾಕ್ಷಿಯವರು ಮೃತಪಟ್ಟರೆಂದು ತಿಳಿದು ತುಂಬಾ ವೇದನೆಯೆನಿಸಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ. ಐಶ್ವರ್ಯಾ ಜೈನ್ ತನ್ನ ತಾಯಿ ಮನೆಗೆ ಹಿಂತಿರುಗಿ ಎಲ್ಲರಂತಾಗುತ್ತಾರೆಂಬ ಕನಸನ್ನು ಹೊತ್ತಿದ್ದಳು. ಈ ಆಘಾತದಿಂದ್ ಆಕೆ ಚೇತರಿಸಿಕೊಳ್ಳುವಂತಾಗಲಿ.
    – ಸುರೇಶ್ ಕುಮಾರ್, ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts