More

    2.90 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಜಿಲ್ಲೆಯಲ್ಲಿ ಕರೊನಾ ವೈರಸ್ ರುದ್ರತಾಂಡವದ ಮಧ್ಯೆಯೇ ರೈತಾಪಿ ವರ್ಗ ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಕರೊನಾ ಹೊಡೆತದಿಂದ ಬೇಸಿಗೆ ವೇಳೆ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದೆ ರೈತರು ತೊಂದರೆ ಎದುರಿಸಿದ್ದರು.

    ಬೇಸಿಗೆ ಕಳೆದು ಮಳೆಗಾಲ ಆರಂಭಗೊಳ್ಳುತ್ತಿದ್ದು, ವಾರದಿಂದ ಜಿಲ್ಲೆಯಲ್ಲಿ ಒಣಹವೆ ಮುಂದುವರಿದಿದೆ. ಇದರಿಂದ ಮಳೆಗಾಗಿ ರೈತರು ಎದುರು ನೋಡುತ್ತಿದ್ದು, ಎಲ್ಲೆಡೆ ಜಮೀನು ಹದಮಾಡಿ ಬಿತ್ತನೆಗೆ ಸಜ್ಜಾಗಿದ್ದಾರೆ. ಒಂದು ಮಳೆಯಾದರೆ ಸಾಕು ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಗರಿಗೆದರಲಿವೆ.

    2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ನೀರಾವರಿ ಪ್ರದೇಶದ 55 ಸಾವಿರ ಹೆಕ್ಟೇರ್ನಲ್ಲಿ ಭತ್ತ ಬಿತ್ತನೆ ಸಾಧ್ಯತೆ ಇದ್ದು, 2.75 ಲಕ್ಷ ಟನ್ ಉತ್ಪಾದನೆ ನಿರೀಕ್ಷಿಸಲಾಗಿದೆ. ಇದರಲ್ಲಿ ಏಕದಳ ಹಾಗೂ ದ್ವಿದಳ ಧಾನ್ಯಗಳದ್ದೇ ಸಿಂಹಪಾಲು ಇದ್ದು, ಎಂದಿನಂತೆ ವಾಣಿಜ್ಯ ಬೆಳೆಗಳು ಹೆಚ್ಚಿನ ಕ್ಷೇತ್ರವನ್ನು ವ್ಯಾಪಿಸುವ ಸಾಧ್ಯತೆ ಇದೆ.

    ಸದ್ಯ 25.38 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ. ಸಹಕಾರಿ ಸಂಸ್ಥೆ ಮತ್ತು ಖಾಸಗಿ ವಿತರಕರಲ್ಲಿ 21,926 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಏಪ್ರಿಲ್ ಮಾಹೆಗೆ 13,525 ಮೆಟ್ರಿಕ್ ಟನ್ ಪೂರೈಸಲಾಗಿದೆ. ಬೆಳೆಗಳಿಗೆ ರೋಗ ಮತ್ತು ಕೀಟ ನಿರ್ವಹಣೆಗಾಗಿ ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಮಾರಾಟಗಾರರಲ್ಲಿ 52 ಸಾವಿರ ಕೆಜಿ ಕೀಟನಾಶಕ ದಾಸ್ತಾನು ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.

    ಜಿಲ್ಲೆಯಲ್ಲಿ 836 ಮಿ.ಮೀ. ವಾಡಿಕೆ ಮಳೆ ಇದ್ದು, ಏಪ್ರಿಲ್ನಲ್ಲಿ ಸರಾಸರಿ 18 ಮಿ.ಮೀ ಮಳೆಯಾಗಿದೆ. ಭತ್ತ, ಹೆಸರು, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಮುಂಗಾರಿನ ಪ್ರಮುಖ ಬೆಳೆಗಳು. ಇನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರೈತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ರೈತರಿಗೆ ಕೃಷಿ ಉತ್ಪನ್ನಗಳ ಸಾಗಣೆ, ಯಂತ್ರೋಪಕರಣ ಪೂರೈಕೆ ಇತ್ಯಾದಿ ಸಹಾಯಕ್ಕಾಗಿ ಅಗ್ರಿ ವಾರ್ ರೂಮ್ ಆರಂಭಿಸಿದ್ದು, ರೈತರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿದ್ದಾರೆ.

    ಬಿತ್ತನೆ ವೇಳೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 14 ಕೃಷಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ಯಂತ್ರೋಪಕರಣ ಪೂರೈಸಲು ಎಲ್ಲ ರೈತ ಸಂಪರ್ಕ ಕೇಂದ್ರಗಳ ಅಗತ್ಯವಿರುವ ಸಿಬ್ಬಂದಿಗೆ 750 ಗ್ರೀನ್ ಪಾಸ್ ವಿತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts