More

    ಮಂಗಗಳ ಕಾಟ ರೈತರಿಗೆ ಪ್ರಾಣಸಂಕಟ

    ಪ್ರವೀಣ್‌ರಾಜ್ ಕಡಬ

    ದಿನ ಬೆಳಗಾದರೆ ಕೃಷಿ ತೋಟಗಳಲ್ಲಿ ಕೋತಿಗಳ ಚೇಷ್ಟೆಯನ್ನು ನಿಯಂತ್ರಿಸುವುದೇ ಚಿಂತೆ. ಕಷ್ಟಪಟ್ಟು ಬೆವರಿಳಿಸಿ ದುಡಿದ ಬೆಳೆ ಕಣ್ಣೆದುರೇ ಮಂಗಗಳ ದಾಳಿಗೆ ತುತ್ತಾಗುತ್ತಿರುವುದು ರೈತರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಇದು ಕಡಬ ತಾಲೂಕಿನ ಗ್ರಾಮಗಳ ರೈತರ ದುಸ್ಥಿತಿ.

    ತೋಟಗಳಿಗೆ ಹಿಂಡು ಹಿಂಡಾಗಿ ದಾಳಿ ಇಡುವ ಮಂಗಗಳು ಬೆಳೆಗಳನ್ನು ಹಾಳುಗೆಡವುತ್ತಿವೆ. ನಿರಂತರ ಮಂಗಗಳ ಕಾಟ ರೈತರ ನಿದ್ದೆಗೆಡಿಸಿದೆ. ಇದು ಹಲವಾರು ವರ್ಷಗಳಿಂದ ನಡೆಯುತ್ತಿದೆ. ಹಿಂದೆ ಭತ್ತದ ಬೇಸಾಯದ ಸಮಯದಲ್ಲಿ ಮಾತ್ರ ಕಾಣಸಿಗುತ್ತಿದ್ದ ಮಂಗಗಳು, ಪ್ರಸಕ್ತ ದಿನವೂ ದಾಳಿ ಮಾಡಿ ಬೆಳೆ ಹಾಳು ಮಾಡುತ್ತಿದೆ. ಎಳನೀರು ಕುಡಿಯುವುದರಿಂದ ತೆಂಗಿನಕಾಯಿಗೆ ಬರ ಬರುವಂತಾಗಿದೆ. ಬಾಳೆಕಾಯಿ, ತರಕಾರಿಯನ್ನೂ ನಾಶ ಮಾಡುತ್ತಿವೆ. ಹಣ್ಣಾಗುವ ಮುನ್ನವೇ ಕಾಯಿ ಅಡಕೆಯ ಸಿಪ್ಪೆ ಸುಲಿದು ಹಾಳು ಮಾಡುವುದರಿಂದ ಅದರ ಗುಣಮಟ್ಟ ಕಡಿಮೆಯಾಗುತ್ತಿದೆ.

    ಮಂಗಗಳ ಉಪಟಳದಿಮದ ಪಾರಾಗಲು ರೈತರು ಪಟಾಕಿ ಅಥವಾ ಗರ್ನಲ್ ಸಿಡಿಸಿದರೂ ಅವುಗಳ ಹಾವಳಿ ಕಡಿಮೆಯಾಗುತ್ತಿಲ್ಲ. ನಾಶ ಮಾಡಿರುವ ಬಾಳೆ, ತೆಂಗು, ಅಡಕೆ, ತರಕಾರಿ ಮೌಲ್ಯಕ್ಕೆ ತಕ್ಕಂತೆ ಇದುವರೆಗೂ ಪರಿಹಾರವೂ ಸಿಕ್ಕಿಲ್ಲ. ಮಂಗಗಳನ್ನು ಹಿಡಿದು ದೂರದ ಕಾಡುಗಳಲ್ಲಿ ಬಿಡುವುದು, ಸಂತಾನಹರಣ ಚಿಕಿತ್ಸೆ ನೀಡುವುದು ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಮಂಗಗಳನ್ನು ನಿಯಂತ್ರಿಸಬಹುದು ಎನ್ನುತ್ತಾರೆ ರೈತರು.

    ಪ್ರತಿನಿತ್ಯ ಮಂಗಗಳನ್ನು ಓಡಿಸುವುದೇ ಕೆಲಸವಾಗುತ್ತಿದೆ. ಇದರಿಂದ ಮನೆ ಬಿಟ್ಟು ಬೇರೆಡೆಗೆ ಹೋಗದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಮಂಗಗಳ ದಾಳಿಯಿಂದ ಬಾಳೆ, ಅಡಕೆ, ಎಳನೀರು, ತರಕಾರಿಗಳನ್ನು ಕಳೆದುಕೊಂಡಿರುವ ತೋಟಗಳ ಮಾಲೀಕರು ಹೇಳುತ್ತಾರೆ. ಹೀಗೆಯೇ ಮುಂದುವರಿದರೆ ಜೀವನ ನಡೆಸುವುದು ಹೇಗೆ? ಕೃಷಿಯನ್ನೆ ನಂಬಿರುವ ನಾವು ಜೀವನ ನಡೆಸುವುದೇ ಕಷ್ಟವಾಗಿದೆ. ಇದುವರೆಗೆ ನಮ್ಮ ಕಷ್ಟ ಯಾರೂ ಕೇಳಿಲ್ಲ. ಈ ಹಿಂದೆ ಸರ್ಕಾರ ಮಂಗಗಳಿಗಾಗಿ ಪಾರ್ಕ್ ನಿರ್ಮಾಣ ಮಾಡುವ ಹೊಸ ಚಿಂತನೆ ನಡೆಸಿತ್ತು. ಇದು ಆದಷ್ಟು ಬೇಗ ಅನುಷ್ಠಾನವಾಗಲಿ ಎಂದು ಹೇಳುತ್ತಾರೆ.

    ಮಂಗಗಳ ಹಾವಳಿಯಿಂದ ಹಾನಿಯಾದ ಬೆಳೆಗಳಿಗೆ ನಿರ್ದಿಷ್ಟ ಪರಿಹಾರ ನೀಡುವ ವ್ಯವಸ್ಥೆ ಇಲಾಖೆಯಿಂದ ಇಲ್ಲ. ಕಾಡುಪ್ರಾಣಿಗಳ ಹಾವಳಿಯಿಮದ ಹಾನಿಗೊಳಗಾದ ಬೆಳೆಗಳಿಗೆ ಮಾನದಂಡ ಅನುಸಾರ ಪರಿಹಾರ ನಿಡಲಾಗುವುದು. ಮಂಗಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
    -ಪ್ರವೀಣ್, ಎಸಿಎಫ್ ಸುಳ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts