More

    ಸಮೃದ್ಧ ಭಾರತ ನಿರ್ಮಾಣಕ್ಕೆ ಮತದಾನ ಮಾಡಿ

    ಸೋಮವಾರಪೇಟೆ: ಸಂವಿಧಾನದತ್ತವಾಗಿ ದೊರಕಿರುವ ಮತದಾನ ಹಕ್ಕು ಪವಿತ್ರವಾಗಿದ್ದು, ಹಕ್ಕು ಚಲಾವಣೆ ಮೂಲಕ ಯುವ ಸಮುದಾಯ ಸಮೃದ್ಧ ಭಾರತವನ್ನು ಕಟ್ಟಬೇಕು ಎಂದು ಇಲ್ಲಿನ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪುತ್ರ ಆರ್.ದಿಂಡಿಲಕೊಪ್ಪ ಹೇಳಿದರು.
    ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ, ವಕೀಲರ ಸಂಘ, ಬಿಟಿಸಿಜಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ವಿದ್ಯಾವಂತ, ಪ್ರಜ್ಞಾವಂತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ದೇಶದ ಯುವಜನರು ಪ್ರಜ್ಞಾವಂತಿಕೆಯಿಂದ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಮಾಡದಿದ್ದರೆ ಕೆಟ್ಟ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂದು ಹೇಳಿದರು.
    ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷದ ಆಧಾರದಲ್ಲಿ ಮತ ಯಾಚಿಸಬೇಕು. ಗೆಲುವು ಪಡೆದ ನಂತರ ಎಲ್ಲ ಧರ್ಮ, ಜನಾಂಗದವರ ಪರವಾಗಿ ಕೆಲಸ ಮಾಡಬೇಕು. ಇದನ್ನು ಮಾಡದಿದ್ದರೆ ಪ್ರಶ್ನೆ ಮಾಡುವ ಅಧಿಕಾರ ಮತದಾರರಿಗೆ ಇದೆ ಎಂದು ಹೇಳಿದರು.
    ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು. ಮೊಬೈಲ್ ಬಳಕೆ ಮಿತವಾಗಿರಲಿ, ಶಿಸ್ತು ಶ್ರದ್ಧೆ, ಸಂಯಮ, ಏಕಾಗ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆಯ ಮೆಟ್ಟಿಲೇರಬಹುದು ಎಂದರು.
    ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಮಾತನಾಡಿ, ಮತದಾನದ ಮೂಲಕ ಯುವ ಸಮುದಾಯ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಸಂವಿಧಾನ ಕಲ್ಪಿಸಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
    ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. 18 ವರ್ಷಕ್ಕಿಂತ ಒಳಗಿನ ವಯಸ್ಸಿನ ಹೆಣ್ಣು ಮಕ್ಕಳು ಮಗುವಿಗೆ ಸಮಾನ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಹೆಣ್ಣು ಮಕ್ಕಳಿಗೆ ಯಾವುದೇ ತರಹದ ಕಿರುಕುಳ ನೀಡಿದರೆ, ಶಿಕ್ಷೆಯಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಪ್ರತಿಯೊಬ್ಬರು ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿ ಹೇಳಿದರು.
    ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಚಂದನ, ಮಣಿಕಂಠ, ಸಿ.ಸಿ.ಸೂರ್ಯ, ಎ.ಈ.ಅನನ್ಯ, ಸಿಂಧು, ಎಸ್.ಪ್ರಾಂತ್ಯ, ಪ್ರವೀಣ್, ಸಮರುದ್ಧೀನ್, ನಿತೀನ್ ಅವರಿಗೆ ಬಹುಮಾನ ವಿತರಿಸಲಾಯಿತು.
    ತಹಸೀಲ್ದಾರ್ ಗೋವಿಂದರಾಜು, ತಾಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಬಿಇಒ ಎಚ್.ಕೆ.ಪಾಂಡು, ವಿದ್ಯಾಸಂಸ್ಥೆಯ ಬಾತ್ಮೀದಾರ ಕೆ.ಎಂ.ಜಗದೀಶ್, ಮುಖ್ಯ ಶಿಕ್ಷಕಿ ಮಿಲ್‌ಡ್ರೆಡ್ ಗೊನ್ಸಾಲ್ವೆಸ್, ಪ್ರಾಂಶುಪಾಲ ಎಚ್.ಎಸ್.ಶರಣ್, ವಕೀಲರಾದ ಎಚ್.ಎಸ್.ವೆಂಕಟೇಶ್, ಬಿ.ಆರ್.ಸಿ. ಸತೀಶ್ ಕುಮಾರ್, ಶಾಲಾ ನಾಯಕಿ ಹಂಸಿನಿ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts