More

    ಸತ್ವ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ

    ಮೊಳಕಾಲ್ಮೂರು: ತಾಲೂಕಿನ ಕೃಷಿ ಭೂಮಿಯ ಶೇ.25ರಿಂದ 30ರಷ್ಟು ಭಾಗ ಸತ್ವ ಕಳೆದುಕೊಂಡಿದ್ದು, ರೈತರು ಸಾವಯವ ಗೊಬ್ಬರದ ಜತೆಗೆ ಬಹುಬೆಳೆ ಪದ್ಧತಿ ಅನುಸರಿಸದಿದ್ದರೆ ಭವಿಷ್ಯದಲ್ಲಿ ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕೃಷಿ ಅಧಿಕಾರಿ ಡಾ.ಅಶೋಕ್ ಎಚ್ಚರಿಸಿದ್ದಾರೆ.

    ತಾಲೂಕಿನ 32500 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಪೂರ್ವ ಕಾಲದಿಂದಲೂ ಬಹುತೇಕ ಏಕ ಬೆಳೆ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ನಿರೀಕ್ಷಿತ ಬೆಳೆ ಕೈಸೇರುತ್ತಿಲ್ಲ ಎಂಬ ಅಳಲು ರೈತರಲ್ಲಿ ಮನೆ ಮಾಡಿದೆ.

    ಕೊಟ್ಟಿಗೆ ಗೊಬ್ಬರ ಬಳಸದೆ ಅತಿಯಾದ ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯು ಜಿಂಕ್, ಬೋರಾನ್, ಕಬ್ಬಿಣದ ಅಂಶ ಹಾಗೂ ಲಘು ಪೋಷಕಾಂಶಗಳ ಕೊರತೆ ಅನುಭವಿಸುತ್ತಿದೆ. ಇದರಿಂದ ಅಧಿಕ ಇಳುವರಿ ಮತ್ತು ಉತ್ಕೃಷ್ಟ ಬೆಳೆ ಅಸಾಧ್ಯ ಎಂಬ ಸತ್ಯಾಂಶ ಮಣ್ಣು ಪರೀಕ್ಷೆ ಕಾರ್ಡ್‌ನಿಂದ ಗೊತ್ತಾಗಿದೆ. ಮಣ್ಣಿನ ಗುಣಕ್ಕೆ ತಕ್ಕನಾದ ಬೆಳೆ ಪದ್ಧತಿ ಮತ್ತು ಕೊಟ್ಟಿಗೆ ಗೊಬ್ಬರ ಬಳಸದಿರುವುದೇ ಇಷ್ಟಕ್ಕೆಲ್ಲ ಕಾರಣ. ಇದೇ ರೀತಿ ಮುಂದುವರಿದರೆ ರೈತ ಮಾಡಿದ ಖರ್ಚು ಸಹ ಕೈಸೇರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

    ಕ್ಷೇತ್ರದ 31 ಸಾವಿರ ರೈತರ ಕೃಷಿ ಭೂಮಿ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಕಾರ್ಡ್ ವಿತರಣೆ ಮಾಡಲಾಗಿದ್ದು, ಭೂಮಿಗೆ ಅನುಗುಣವಾಗಿ ಬಿತ್ತನೆ ಮಾಡುವ ಬೆಳೆಗಳು ಹಾಗೂ ಪಾಲನೆ ಮಾಡುವ ಕ್ರಮಗಳ ಕುರಿತು ತಿಳಿವಳಿಕೆ ನೀಡಲಾಗಿದೆ. ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿದರೆ ಭೂಮಿಯ ರಕ್ಷಣೆ ಮಾಡಲು ಸಾಧ್ಯ.

    ಮುಂಗಾರು ಮತ್ತು ಹಿಂಗಾರು ಬಿತ್ತನೆ ಸಮಯದಲ್ಲಿ ಕೊಟ್ಟಿಗೆ ಗೊಬ್ಬರ ಬಳಸಬೇಕು. ಏಕ ಬೆಳೆ ಪದ್ಧತಿ ಕೈಬಿಟ್ಟು ಪ್ರಧಾನ ಬೆಳೆ ನಡುವೆ ತೊಗರಿ, ಹಲಸಂದೆ, ಹೆಸರು ಬಿತ್ತನೆ ಮಾಡಬೇಕು. ನವಣೆ, ಸಜ್ಜೆ, ಕೊರ‌್ಲೆ ಸೇರಿ ವಿವಿಧ ಸಿರಿಧಾನ್ಯ ಬಿತ್ತನೆ ಮಾಡುವುದು ಉತ್ತಮ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts