More

    ನರೇಗಾದಿಂದ ಹಳ್ಳಿಗರ ಬದುಕು ಹಸನು

    ಮೊಳಕಾಲ್ಮೂರು: ದುಡಿಯುವ ಕೈಗಳು ಮನಸ್ಸು ಮಾಡಿದರೆ ಬರಡು ಭೂಮಿಯನ್ನು ಹಸಿರೀಕರಣಗೊಳಿಸಲು ಸಾಧ್ಯ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

    ತಾಲೂಕಿನ ರಾಂಪುರ ವ್ಯಾಪ್ತಿಯ ಜಮೀನೊಂದರಲ್ಲಿ ಬದು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

    ಹಳ್ಳಿಗರ ಬದುಕು ಹಸನಗೊಳಿಸಲು ನರೇಗಾ ಯೋಜನೆ ವರದಾನವಾಗಿದೆ. ರೈತನ ಜಮೀನು ಅಭಿವೃದ್ಧಿ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು, ಮನೆ ನಿರ್ಮಾಣ ಸೇರಿ ವಿವಿಧ ಕಾರ್ಯಗಳಿಗೆ ಅವಕಾಶವಿದೆ ಎಂದರು.

    ಮಳೆ ನೀರು ಸಂಗ್ರಹವಾದರೆ ಪ್ರತಿ ಗ್ರಾಮದಲ್ಲೂ ಕುಡಿವ ನೀರಿನ ಸಮಸ್ಯೆ, ಅಂತರ್ಜಲ ಹೆಚ್ಚಳದಿಂದ ಕೃಷಿ ಬದುಕು ಹಸಿರೀಕರಣವಾಗಲಿದೆ. ಜಾನುವಾರುಗಳು, ವನ್ಯಜೀವಿ ಸಂಕುಲಕ್ಕೂ ಅನುಕೂಲವಾಗಲಿದೆ ಎಂದರು.

    ಮೊಳಕಾಲ್ಮೂರು ಸಕಾಲಕ್ಕೆ ಮಳೆ, ಬೆಳೆ ಇಲ್ಲದೆ ಬರಪೀಡಿತ ತಾಲೂಕಾಗಿದ್ದು, ಈ ಭಾಗದ ಜನ ಜೀವನ ದೊಡ್ಡ ಸವಾಲಾಗಿದೆ. ಇದನ್ನು ಮನಗಂಡಿರುವ ಕೇಂದ್ರ, ರಾಜ್ಯ ಸರ್ಕಾರಗಳು ಗ್ರಾಪಂ ಹಂತದಲ್ಲೇ ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 150 ದಿನ ಕೆಲಸ ಕೊಡಲು ನಿರ್ಧರಿಸಿವೆ. ಒಬ್ಬರಿಗೆ ದಿನಕ್ಕೆ 275 ರೂ. ಕೂಲಿ ಇದೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ತಾಪಂ ಇಒ ಪ್ರಕಾಶ್ ಮಾತನಾಡಿ, ನದಿ ಮೂಲಗಳಿಲ್ಲದ, ಮಳೆಯಾಶ್ರಿತ ಪ್ರದೇಶದ ಕೃಷಿಕರು, ಕಾರ್ಮಿಕರ ಜೀವನೋಪಾಯಕ್ಕೆ ಖಾತ್ರಿ ಯೋಜನೆ ಪೂರಕವಾಗಿದೆ. ಕೂಲಿ ಅರಸಿ ಬರುವವರ ಸಂಖ್ಯೆ 5 ಸಾವಿರ ದಾಟುತ್ತಿದೆ. ಬೇಡಿಕೆ ಅನುಸಾರ ಒಂದು ತಿಂಗಳಿಂದ ಜಮೀನುಗಳಲ್ಲಿ 1615 ಬದು ನಿರ್ಮಾಣ ಪೂರ್ಣಗೊಂಡಿವೆ. ಖಾತ್ರಿ ಪ್ರಗತಿಯಲ್ಲಿ ಜಿಲ್ಲೆಯಲ್ಲೇ ಮೊಳಕಾಲ್ಮೂರು ಮೊದಲ ಸ್ಥಾನದಲ್ಲಿದೆ ಎಂದರು.

    ತಹಸೀಲ್ದಾರ್ ಎಂ.ಬಸವರಾಜ್, ಪಿಡಿಒ ಎನ್.ಕೆ.ಪಾಪನಾಯಕ, ಕಾರ್ಯದರ್ಶಿ ಗುಂಡಪ್ಪ, ಕಂದಾಯ ಅಧಿಕಾರಿಗಳಾದ ಆರ್.ಗೋಪಾಲ್, ಮಧುಸೂದನ, ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts