More

    ಮಳೆ ಕೈಕೊಟ್ಟರೆ ಮೊಳಕಾಲ್ಮೂರು ಸ್ಥಿತಿ ಗಂಭೀರ

    ಕೆ.ಕೆಂಚಪ್ಪ ಮೊಳಕಾಲ್ಮೂರು: ತಾಲೂಕಿನಲ್ಲಿ ಕಳೆದ ಏಳೆಂಟು ವರ್ಷ ಆವರಿಸಿದ್ದ ಬರ ಛಾಯೆ ಈ ವರ್ಷ ಕೂಡ ಮುಂದುವರಿಯುವ ಲಕ್ಷಣಗಳು ಕಾಣುತ್ತಿದ್ದು, ಕುಡಿಯುವ ನೀರಿನ ತತ್ವಾರ ಆರಂಭವಾಗಿದೆ.

    ಬಿಸಿಲಿನ ಝಳಕ್ಕೆ ಕೆರೆ, ಕಟ್ಟೆಗಳು ಬತ್ತಿವೆ. ಜಲಕ್ಷಾಮದಿಂದ ಜನ, ಜಾನುವಾರುಗಳಿಗೆ ಕುಡಿವ ನೀರು ಸಿಗದಿರುವ ಆತಂಕ ಹೆಚ್ಚಿದೆ. ತಾಲೂಕಿಗೆ ಯಾವುದೇ ನದಿ ಮೂಲಗಳಿಲ್ಲ. ಮಳೆ ಮತ್ತು ಅಂತರ್ಜಲವೇ ಜೀವಾಳವಾಗಿರುವ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಕೆರೆಗಳು ಬತ್ತಿವೆ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣ ಇಳಿಕೆಯಾಗಿವೆ. ಕೃಷಿ ಪಂಪ್‌ಸೆಟ್‌ಗಳಲ್ಲಿ ನೀರು ಬತ್ತಿ ರೈತರಿಗೆ ಸಂಕಷ್ಟ ಎದುರಾಗಿದೆ.

    ಈ ತಿಂಗಳಲ್ಲಿ ಮಳೆ ಬರದಿದ್ದರೆ ಜಲಕ್ಷಾಮದ ಜತೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಜಾನುವಾರುಗಳಿಗೆ ಮೇವು ಜತೆಗೆ ನೀರಿನ ಸಮಸ್ಯೆ ಎದುರಾಗುವ ಸಂಭವ ಇದೆ.

    ತಾಲೂಕಿನ 16 ಗ್ರಾಪಂ ವ್ಯಾಪ್ತಿಗೆ 97 ಗ್ರಾಮಗಳು ಒಳಪಟ್ಟಿವೆ. ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ನೀರು ಪೂರೈಸಲು ಕಳೆದ ಮೂರ್ನಾಲ್ಕು ವರ್ಷದಲ್ಲಿ ಕೊರೆಸಿರುವ 452 ಕೊಳವೆಬಾವಿ ಕೊರೆಸಲಾಗಿದ್ದು, 296ರಲ್ಲಿ ಒಂದೆರಡು ಇಂಚು ನೀರು ಬರುತ್ತಿದೆ.

    ತಾಪಂ ಇಒ ಪ್ರಕಾಶ್ ಹೇಳಿಕೆ: ನೀರಿನ ಮಿತ ಬಳಕೆ ಮಾಡಲು ಜನರಿಗೆ ತಿಳಿವಳಿಕೆ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಿಯೂ ಸಮಸ್ಯೆ ಕಂಡು ಬಂದಿಲ್ಲ ಮುಂದಿನ ದಿನಗಳಲ್ಲಿ ಉಲ್ಬಣಿಸಿದರೆ ಅಗತ್ಯ ಅನುಸಾರ ಟ್ಯಾಂಕರ್ ನೀರು ಕೊಡಲಾಗುವುದು.

    ಕುಡಿಯುವ ನೀರು ಸರಬರಾಜು ಇಲಾಖೆ ಎಇ ಸುಕುಮಾರ್ ಎಂ.ಪವಾರ್ ಹೇಳಿಕೆ: ಕಳೆದ ವರ್ಷ ಉತ್ತಮ ಮಳೆ ಬಂದಿದ್ದರಿಂದ ಈವರೆಗೆ ಅಷ್ಟೇನು ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಮುಂದೆ ಅಗತ್ಯ ಬಿದ್ದರೆ ಟ್ಯಾಂಕರ್ ನೀರು ಪೂರೈಕೆ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ವಿವಿಧ ಗ್ರಾಮಗಳಲ್ಲಿನ 79 ಆರ್‌ಒ ಪ್ಲಾಂಟ್‌ಗಳ ಪೈಕಿ 21 ಕೆಟ್ಟಿವೆ. ಸರಿಪಡಿಸಲು ನಿರ್ವಹಣೆ ಹೊತ್ತ ಏಜೆನ್ಸಿಯವರಿಗೆ ಪತ್ರ ಬರೆಯಲಾಗಿದೆ. ಅಗತ್ಯ ಇರುವ 31 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮಂಜೂರಾತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

    ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್ ಹೇಳಿಕೆ: ಪಟ್ಟಣದಲ್ಲಿರುವ 17 ಸಾವಿರಕ್ಕೂ ಹೆಚ್ಚು ನಾಗರಿಕರಿಗೆ ಕುಡಿಯುವ ನೀರಿಗೆ ರಂಗಯ್ಯನದುರ್ಗ ಜಲಾಶಯವೇ ಆಧಾರವಾಗಿದ್ದು, ಮಿತವಾಗಿ ನೀರು ಬಳಸಲಾಗುತ್ತಿದೆ. ನಗರದ ಸುತ್ತಮುತ್ತ ಕೊರೆಯಿಸಿರುವ 34 ಕೊಳವೆಬಾವಿಗಳ ಪೈಕಿ 30ರಲ್ಲಿ ಸಮರ್ಪಕ ನೀರಿದೆ. ಆರು ಆರ್‌ಒ ಪ್ಲಾಂಟ್‌ಗಳ ಮೂಲಕ ಮೂರ್ನಾಲ್ಕು ದಿನಕ್ಕೊಮ್ಮೆ ಸಮರ್ಪಕ ಶುದ್ಧ ನೀರು ಕೊಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts