More

    ಬಯಲು ಸೀಮೆಯಲ್ಲಿ ಆದಾಯಕ್ಕೆ ವೀಳ್ಯ

    ಕೆ.ಕೆಂಚಪ್ಪ ಮೊಳಕಾಲ್ಮೂರು
    ಮೊಳಕಾಲ್ಮೂರು ತಾಲೂಕು ಮಳೆಯಾಶ್ರಿತ ಕೃಷಿ ಪ್ರದೇಶ. ಇಲ್ಲಿ ಬೆಳೆ ಕೈ ಸೇರುವುದು ಜೂಜಾಟದಂತೆ. ಇಂತಹ ಭೂಮಿಯಲ್ಲಿ ಅಧಿಕ ನೀರು ಬೇಡುವ ವೀಳ್ಯದೆಲೆ ಬೆಳೆಯುವುದೆಂದರೆ ಸಾಹಸದ ಕೆಲಸ. ಇಲ್ಲೊಬ್ಬ ರೈತ ಈ ನಿಟ್ಟಿನಲ್ಲಿ ಮುಂದಡಿ ಇಟ್ಟು ಯಶಸ್ವಿಯಾಗಿದ್ದಾನೆ.

    ತಾಲೂಕಿನ ನೇರ‌್ಲಹಳ್ಳಿ ರೈತ ಚಂದ್ರಣ್ಣ ಅರ್ಧ ಎಕರೆ ಜಮೀನಿನಲ್ಲಿ ವೀಳ್ಯೆದೆಲೆ ತೋಟ ಮಾಡಿ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾನೆ. ಕಳೆದ ವರ್ಷ ಜೂನ್‌ನಲ್ಲಿ ಜಮೀನನ್ನು ಉತ್ತಮವಾಗಿ ಹದಗೊಳಿಸಿ ನಂತರ ಸಾಲು ಬದುಗಳಲ್ಲಿ ಎರಡೂವರೆ ಅಡಿ ಉದ್ದಗಲ ಅಳತೆಯಲ್ಲಿ 1,400 ನಾಗ ತಳಿ ಎಲೆ ಬಳ್ಳಿ ನಾಟಿ ಮಾಡಿದ್ದಾರೆ.

    ತೋಟಕ್ಕೆ ದನದ ಗೊಬ್ಬರ ಮತ್ತು ಸಮೃದ್ಧವಾಗಿ ನೀರು ಕೊಟ್ಟು ಚೆನ್ನಾಗಿ ಆರೈಕೆ ಮಾಡಲಾಗಿದೆ. ಪ್ರಸ್ತುತ ಎಲೆ ಕಟಾವಿಗೆ ಬಂದಿದ್ದು, 10 ಸಾವಿರ ಎಲೆ ಪೆಂಡೆಗೆ ನಾಲ್ಕೈದು ಸಾವಿರ ದರ ಇದೆ. ತಿಂಗಳಿಗೆ 40ರಿಂದ 50 ಸಾವಿರ ಎಲೆ ಇಳುವರಿ ನಿರೀಕ್ಷೆ ಇದೆ. ವರ್ಷದಲ್ಲಿ ಖರ್ಚು ತೆಗೆದು 2 ಲಕ್ಷ ರೂ. ಆದಾಯ ಬರುವ
    ಭರವಸೆ ಹುಟ್ಟಿಸಿದೆ. ನೀರಿನ ಅಭಾವ ಇರುವ ಕಡೆ ಎಲೆ ತೋಟಗಳು ಮೊಳಕಾಲ್ಮೂರಲ್ಲಿ ತೀರಾ ವಿರಳ. ರೈತ ಚಂದ್ರಣ್ಣ ಇದರಲ್ಲೇ ಶ್ರಮ ವಹಿಸಿ ಕೃಷಿ ಬದುಕು ಕಟ್ಟಿಕೊಂಡಿದ್ದಾರೆ.

    ತೋಟಕ್ಕೆ ರಕ್ಷಣೆ: ಎಲೆಗೆ ರೋಗ ಹತೋಟಿ ಮತ್ತು ಅಧಿಕ ಇಳುವರಿಗಾಗಿ ಸುತ್ತ ಬೇಲಿ, ಕಾಡು ಸೊಪ್ಪಿನ ರಕ್ಷಣೆ ನೀಡಬೇಕು. ಎಲೆ ಬಳ್ಳಿಗೆ ಆಧಾರವಾಗಿ ಸೊಗಸೆ ಮರಗಳನ್ನು ಬೆಳೆಸಬೇಕು. ವರ್ಷಕ್ಕೆ ಎರಡು ಬಾರಿ ಕೊಟ್ಟಿಗೆ ಗೊಬ್ಬರ, ಕೆರೆ ಮಣ್ಣು ಹಾಕಿದರೆ ನಿರೀಕ್ಷಿತ ಬೆಳೆ ಸಿಗಲಿದೆ.

    ಮನಸು ಮಾಡಿದರೆ ಉತ್ತಮಬೆಳೆ: ಪ್ರಸ್ತುತ ಹೆಚ್ಚು ಆದಾಯ ತರುವಂತಹ ಆಧುನಿಕ ಬೆಳೆ ಬೆಳೆಯುವುದು ವಾಡಿಕೆ. ಆದರೆ, ನನ್ನ ಎಲೆ ತೋಟ ನೋಡಿದವರು ಬರಪೀಡಿತ ಪ್ರದೇಶದಲ್ಲಿ ಎಲೆ ತೋಟ ಮಾಡಿರುವ ಧೈರ್ಯ ಮೆಚ್ಚಲೇಬೇಕು ಎನ್ನುತ್ತಾರೆ. ಆದರೆ, ನನ್ನ ತಂದೆ ದಳಪತಿ ಕರ್ನಯ್ಯ ಅವರು 30 ವರ್ಷಗಳಿಂದಲೂ ಎಲೆ ತೋಟವನ್ನೇ ರೂಢಿಗತ ಮಾಡಿಕೊಂಡು ಬಂದಿದ್ದು, ನಾನದನ್ನು ಮುಂದುವರಿಸಿದ್ದೇನೆ. 8 ವರ್ಷಗಳ ಕಾಲ ತೋಟ ಸಂಪೂರ್ಣ ಒಣಗಿ ಹೋಗಿತ್ತು. ಕಳೆದ ವರ್ಷದ ಮಳೆಯಿಂದಾಗಿ ಚೇತರಿಸಿಕೊಂಡಿದೆ. ಈ ಭಾಗದಲ್ಲಿ ಹೆಚ್ಚು ಮರಳು ಮಿಶ್ರಿತ ಮಣ್ಣು ಇದೆ. ಈ ಕಾರಣಕ್ಕೆ ಅಡಕೆ, ಎಲೆ ತೋಟ ಮಾಡಿದರೆ ಇಳುವರಿ ಬರುವುದಿಲ್ಲ ಎಂದು ಬಹುತೇಕರು ಹೇಳುತ್ತಾರೆ. ಮನಸ್ಸು ಮಾಡಿದರೆ ಎಂತಹ ಬೆಳೆಯೂ ಕೈ ಸೇರಲಿದೆ ಎನ್ನುತ್ತಾರೆ ರೈತ ಚಂದ್ರಣ್ಣ.

    ದಾಳಿಂಬೆ, ಮೂಸಂಬಿ, ಪಪ್ಪಾಯಿ, ಮಾವು, ಪೇರಲ ಮತ್ತಿತರ ಹಣ್ಣಿನ ತೋಟಗಳೇ ಹೆಚ್ಚು. ಬೆವರು ಸುರಿಸಿ ಬೆಳೆದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ವೈಜ್ಞಾನಿಕ ಬೆಲೆ ನಿಗದಿ ಇಲ್ಲದೇ ಆದಾಯ ಕೈ ಸೇರುವುದು ಕಷ್ಟದ ಮಾತು. ಅದನ್ನು ಮನಗಂಡು ಕೊಳವೆಬಾವಿ ನೀರಿನಲ್ಲಿ ವೀಳ್ಯದೆಲೆ ತೋಟ ಮಾಡಿದ್ದೇನೆ. ಯಾವತ್ತೂ ನಷ್ಟ ತರಿಸಿಲ್ಲ. ಶ್ರಾವಣ ಮಾಸ, ಮದುವೆ, ಶುಭ ಕಾರ್ಯ, ಹಬ್ಬ ಹರಿದಿನಗಳಲ್ಲಿ 10 ಸಾವಿರ ಎಲೆ ಇರುವ ಪೆಂಡೆ 12-15 ಸಾವಿರದವರೆಗೆ ಮಾರಾಟವಾಗುತ್ತದೆ.
    ಚಂದ್ರಣ್ಣ ನೇರ್ಲಹಳ್ಳಿ ರೈತ.

    ಮೊಳಕಾಲ್ಮೂರಿನ ಮಣ್ಣು, ಹವಾಗುಣ ರೇಷ್ಮೆ ಬಿಟ್ಟರೆ ಎಳೆಬಳ್ಳಿ ಬೆಳೆಯಲು ಸೂಕ್ತವಾದ ಪ್ರದೇಶ. ಶೇಂಗಾ, ಸಜ್ಜೆ ಮತ್ತಿತರ ಸಾಂಪ್ರದಾಯಿಕ ಬೆಳೆ ಜತೆಗೆ ಇಂತಹ ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ನೀಡಿದರೆ ಆದಾಯ ಪಡೆಯಬಹುದು.
    ವಿರೂಪಾಕ್ಷ ಹಿರಿಯ ತೋಟಗಾರಿಕೆ ನಿರ್ದೇಶಕ, ಮೊಳಕಾಲ್ಮೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts