More

    ಕರ್ತವ್ಯಕ್ಕೆ ಸೈ, ರಕ್ತದಾನಕ್ಕೂ ಜೈ

    ಬೆಳಗಾವಿ: ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ. ರಕ್ತದಾನ ಮಾಡುವುದರಿಂದ ಸ್ವತಃ ಆರೋಗ್ಯ ಸುಧಾರಿಸುವ ಜತೆಗೆ, ತುರ್ತು ಸಂದರ್ಭ ಒಂದು ಜೀವ ಉಳಿಸಿದ ಸಂತೃಪ್ತಿ ದೊರಕುತ್ತದೆ. ವೃತ್ತಿ ಬದುಕಿನ ಒತ್ತಡದ ಮಧ್ಯೆಯೂ ಜಿಲ್ಲೆಯ ಇಬ್ಬರು ಹಿರಿಯ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಇನ್ನೊಬ್ಬರಿಗೆ ಹೊಸ ಬದುಕು ಕೊಡುವ ಜತೆಗೆ, ಸಹೋದ್ಯೋಗಿಗಳಲ್ಲೂ ಅರಿವು ಮೂಡಿಸುತ್ತ ಜೀವಪರ ಕಾಳಜಿ ಮೆರೆಯುತ್ತಿದ್ದಾರೆ.

    ಖಾನಾಪುರ ಬಿಇಒ ಸಾಮಾಜಿಕ ಕಳಕಳಿ: ಕರೊನಾ ವೈರಸ್ ಭೀತಿ ನಡುವೆಯೂ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುತ್ತಿರುವ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ 41 ಬಾರಿ ರಕ್ತದಾನ ಮಾಡಿದ್ದಾರೆ. ಈಚೆಗೆ ಖಾನಾಪುರದ ಶಾಸಕರ ಮಾದರಿ ಶಾಲೆಯಲ್ಲಿ ಅವರ ಮುಂದಾಳತ್ವದಲ್ಲೇ ಆಯೋಜಿಸಿದ್ದ ಶಿಬಿರದಲ್ಲಿ 160 ಶಿಕ್ಷಕರು ರಕ್ತದಾನ ಮಾಡಿದ್ದಾರೆ.

    ಬೈಲಹೊಂಗಲ ತಾಲೂಕಿನ ಮಲ್ಲಾಪುರ(ಕೆ.ಎನ್.), ನಂದಗಡದ ಸಂಗೊಳ್ಳಿ ರಾಯಣ್ಣ ವಸತಿ ಶಾಲೆ, ವಿಜಯಪುರ ಜಿಪಂ, ಖಾನಾಪುರ, ಅಥಣಿ ಮತ್ತು ಹಳಿಯಾಳ ತಾಪಂಗಳಲ್ಲಿ ಯಕ್ಕುಂಡಿ ಕರ್ತವ್ಯ ನಿರ್ವಹಿಸಿದ್ದಾರೆ. ತಾವು ಕೆಲಸ ಮಾಡಿದ ಸ್ಥಳಗಳಲ್ಲಿ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸುತ್ತ ಬಂದಿದ್ದಾರೆ.

    ‘ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ, ಎಷ್ಟು ಜನರಿಗೆ ನೆರವಾಗಿದ್ದೇವೆ ಎಂಬುದು ಮುಖ್ಯ. ಅದರಲ್ಲೂ ರಕ್ತದಾನ ಮಾಡಿದಾಗ ಸಿಗುವ ಖುಷಿಯೇ ಬೇರೆ. ಪ್ರತಿವರ್ಷ ಕನಿಷ್ಠ 2 ಬಾರಿ ರಕ್ತದಾನ ಮಾಡುತ್ತೇನೆ. ನಾನು ಸಂಚರಿಸುವ ರಸ್ತೆಯಲ್ಲಿ ಯಾರೇ ಅಪಘಾತಕ್ಕೀಡಾದರೂ, ನನ್ನ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತೇನೆ’ ಎನ್ನುತ್ತಾರೆ ಅವರು. ಬೆಳಗಾವಿ ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಉತ್ತರ ಕನ್ನಡದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

    50 ಸಲ ರಕ್ತದಾನ: ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿಯಾಗಿರುವ ಡಾ.ಸಂಜಯ ಡುಮಗೋಳ ಕಳೆದ 20 ವರ್ಷಗಳ ಅವಧಿಯಲ್ಲಿ 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದಾರೆ. ಕರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ತಮ್ಮ ತಂಡದೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಅವರು, ರಕ್ತದಾನ ಮಾಡುವಂತೆ ಪ್ರತಿಯೊಬ್ಬರಲ್ಲೂ ಪ್ರೇರಣೆ ತುಂಬುತ್ತಾರೆ. ರಕ್ತದಾನಿಗಳ ನೆರವಿನಿಂದ ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆ ಅನುಸಾರ ರಕ್ತ ಪೂರೈಕೆಗೂ ಶ್ರಮಿಸುತ್ತಿದ್ದಾರೆ.

    ಗೋಕಾಕ, ಯಾದವಾಡ, ಅಥಣಿ ಮತ್ತು ಖಾನಾಪುರದಲ್ಲಿ ಸೇವೆ ಸಲ್ಲಿಸಿದ ಕಡೆಗಳಲ್ಲಿ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದೆ. ಆಯಾ ಆಸ್ಪತ್ರೆಗಳಲ್ಲಿ ಆಯೋಜಿಸಿದ್ದ ಶಿಬಿರಗಳಿಗೆ ಚಾಲನೆ ನೀಡುವ ವೇಳೆ, ಸ್ವತಃ ನಾನೇ ರಕ್ತದಾನ ಮಾಡುತ್ತಿದ್ದೆ. ಇದರಿಂದ ಪ್ರೇರಣೆಗೊಂಡ ನನ್ನ ಸಹೋದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದ ಪರಿಣಾಮ ರಕ್ತ ಸಂಗ್ರಹ ಪ್ರಮಾಣವೂ ಅಧಿಕವಾಗುತ್ತಿತ್ತು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಡುಮಗೋಳ.

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts