More

    ಸಂತೆಗಳಲ್ಲಿ ಮೊಬೈಲ್​ಫೋನ್ ಕಳ್ಳರ ಕೈಚಳಕ

    ಹಾನಗಲ್ಲ: ತಾಲೂಕಿನಾದ್ಯಂತ ಮೊಬೈಲ್​ಫೋನ್ ಕಳ್ಳರ ಹಾವಳಿ ಜೋರಾಗಿದೆ. ಸಭೆ-ಸಮಾರಂಭಗಳು, ಜಾತ್ರೆ ಮತ್ತು ಸಂತೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ.

    ತಾಲೂಕಿನ ಹಲವೆಡೆ ಜಾತ್ರೆಗಳು ಆರಂಭಗೊಂಡಿದ್ದು, ಅಲ್ಲಲ್ಲಿ ಕಳ್ಳರು ಕೈಚಳಕ ತೋರಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಬೆಲೆಯ ಮೊಬೈಲ್ ಇಟ್ಟುಕೊಂಡಿರುವವರನ್ನೇ ಹಿಂಬಾಲಿಸಿ ಅವರ ದೃಷ್ಟಿ ಅತ್ತಿತ್ತ ಹೊರಳಿದಾಗ ಜೇಬಿನಿಂದ ಮೊಬೈಲ್ ಎಗರಿಸುತ್ತಿದ್ದಾರೆ.

    ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆಯಲ್ಲಿ 5 ರಿಂದ 10 ಮೊಬೈಲ್ ಫೋನ್​ಗಳು ಕಳವಾಗುತ್ತಿವೆ. ಆದರೆ, ಕೆಲವೇ ಜನ ದೂರು ಸಲ್ಲಿಸುತ್ತಿದ್ದಾರೆ. ಈತನಕ ಒಟ್ಟು 50 ಪ್ರಕರಣಗಳು ದಾಖಲಾಗಿವೆ. ಸಂತೆಯಲ್ಲಿ ಮೊಬೈಲ್ ಕಳ್ಳರ ತಂಡಗಳು ಸಕ್ರಿಯವಾಗಿದ್ದರೂ, ಪೊಲೀಸರಿಗೆ ಹಿಡಿಯಲಾಗುತ್ತಿಲ್ಲ. ಈ ತರನಾಗಿ ನಡೆಯುವ ಕಳ್ಳತನ ಕೇವಲ ಹಾನಗಲ್ಲ ಸಂತೆಗೆ ಸೀಮಿತಗೊಂಡಿಲ್ಲ. ತಾಲೂಕಿನಲ್ಲಿ ನಡೆಯುವ ಎಲ್ಲ ಗ್ರಾಮೀಣ ಸಂತೆಗಳಲ್ಲೂ ಕಳ್ಳರು ತಮ್ಮ ಕೃತ್ಯ ವಿಸ್ತರಿಸಿದ್ದಾರೆ.

    ಇತ್ತೀಚೆಗೆ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ದಿನದಂದು ಹಾನಗಲ್ಲ-ತಡಸ ರಸ್ತೆಯಲ್ಲಿ ಸಾವಿರಾರು ಜನ ಜಮಾಯಿಸಿದ್ದರು. ಇದೇ ಸಂದರ್ಭ ಬಳಸಿಕೊಂಡ ಕಳ್ಳರು, ಅಂದು 25ಕ್ಕೂ ಅಧಿಕ ಮೊಬೈಲ್​ಫೊನ್ ದೋಚಿದ್ದಾರೆ. ದೂರು ನೀಡಿದ ಪ್ರಕರಣಗಳಲ್ಲಿ ಕೆಲವರ ಮೊಬೈಲ್​ಗಳು ಮಾತ್ರ ಸುಮಾರು ದಿನಗಳ ಮೇಲೆ ಸಿಕ್ಕುತ್ತವೆ. ಸಿಕ್ಕರೂ ಮೊಬೈಲ್​ನಲ್ಲಿನ ಎಲ್ಲ ದಾಖಲೆಗಳು, ಫೋಟೋ, ನಂಬರ್​ಗಳು ಸ್ವಚ್ಛವಾಗಿರುತ್ತವೆ. ಇಂಥ ಪ್ರಕರಣಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಟ್ರ್ಯಾಕ್ ಮಾಡಿ ಪತ್ತೆ ಹಚ್ಚುವ ಕಾರ್ಯ ವಿಳಂಬವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಕದ್ದ ಮೊಬೈಲ್​ಗಳ ಐಎಂಇಐ ಅಳಿಸಿ ಹಾಕುತ್ತಿದ್ದಾರೆ. ಈ ಕಾರ್ಯಕ್ಕೆ ಸ್ಥಳೀಯ ಮೊಬೈಲ್ ದುರಸ್ತಿ ನಿಪುಣರನ್ನು ಬಳಸಿಕೊಳ್ಳುತ್ತಿದ್ದಾರೆ. ಇಂಥವರ ಮೇಲೂ ಪೊಲೀಸರು ನಿಗಾ ವಹಿಸುವ ಅಗತ್ಯವಿದೆ. ಕದ್ದ ಮೊಬೈಲ್ ಮಾರಾಟಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

    ಹಾನಗಲ್ಲ ಪಟ್ಟಣದಲ್ಲಿ ಎಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸದಿರುವುದರಿಂದ ಕಳ್ಳರ ಪತ್ತೆಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರು ಇಂಥ ಘಟನೆಗಳು ಜರುಗಿದಾಗ ಮಾಹಿತಿ ನೀಡಿದರೆ ತನಿಖೆ ಸುಲಭ. ಪೊಲೀಸ್ ಸಿಬ್ಬಂದಿ ಸಂತೆ-ಜಾತ್ರೆ ಸಂದರ್ಭದಲ್ಲಿ ಕಣ್ಗಾವಲು ನಡೆಸುತ್ತಾರೆ. ಮೊಬೈಲ್ ಕಳವು ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವುದರಿಂದ ಸದ್ಯದಲ್ಲೇ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು.
    | ಶ್ರೀಶೈಲ ಪಟ್ಟಣಶೆಟ್ಟಿ ಪಿಎಸ್​ಐ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts