More

    ಕದ್ದ ಕಾರಿಗೆ ಎಮ್​ಎಲ್​ಸಿ ಕಾರಿನ ನಂಬರ್!; ಮಾರಾಟಕ್ಕೆ ಯತ್ನಿಸಿದ್ದ ಇಬ್ಬರ ಬಂಧನ, ಮತ್ತಿಬ್ಬರಿಗಾಗಿ ಶೋಧ

    ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರ ಕಾರಿನ ನಂಬರನ್ನು ಮತ್ತೊಂದು ಕದ್ದ ಕಾರಿಗೆ ನಕಲಿ ಪ್ಲೇಟ್ ಅಳವಡಿಸಿ ಮತ್ತು ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಅಟ್ಟೂರು ಲೇಔಟ್ ಮುಖ್ಯರಸ್ತೆ ನಿವಾಸಿ ಮಂಜುನಾಥ್ (45), ಮೈಸೂರು ನಿವಾಸಿ ಶಾಬಾಜ್ ಖಾನ್ (31) ಬಂಧಿತರು. ಆರೋಪಿಗಳಿಂದ ಇನ್ನೋವಾ ಕ್ರಿಸ್ಟಾ ಕಾರು ಹಾಗೂ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ವಾಮೀಜಿಗಳು ಸಿಎಂ ಯೋಗಿ ಆದಿತ್ಯನಾಥರ ಥರ ಆಗಬಾರದು: ಮುಖ್ಯಮಂತ್ರಿ ಚಂದ್ರು

    ಏನಿದು ಪ್ರಕರಣ?

    ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಪಕ್ಕದಲ್ಲೇ ಇರುವ ಸೆಕೆಂಡ್ ಹ್ಯಾಂಡ್ ಐ-ಕಾರ್ ಶೋ ರೂಂನಲ್ಲಿ ಫೆ.22ರ ಸಂಜೆ 4.30ರ ಸಮಯದಲ್ಲಿ ಭೋಜೇಗೌಡ ಅವರ ಕಾರಿನ ನಂಬರ್ ಪ್ಲೇಟ್ (ಕೆಎ-18-ಝಡ್-5977) ಅಳವಡಿಸಲಾಗಿದ್ದ ಕಾರು ನಿಂತಿರುವುದನ್ನು ಅವರ ಆಪ್ತ ಸಹಾಯಕ ಮಾದೇಶ್ ಗಮನಿಸಿದ್ದಾರೆ. ತಕ್ಷಣ ಶೋರೂಂ ಒಳಗೆ ತೆರಳಿ ಕಾರಿನ ಬಗ್ಗೆ ವಿಚಾರಿಸಿದಾಗ, ಕಾರು ಮಾರಾಟಕ್ಕಿದೆ, ನಿಮಗೆ ಬೇಕಿತ್ತಾ ಟೆಸ್ಟ್ ರೈಡ್ ಮಾಡಿ ನೋಡುವಿರಾ ಎಂದು ಶೋರೂಂ ಸಿಬ್ಬಂದಿ ಕೇಳಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡು ಕಾರಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಚ್ಚರಿ ಎಂಬಂತೆ ಆರ್.ಸಿ ಕಾರ್ಡ್ ಕೂಡ ಭೋಜೇಗೌಡರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಭೋಜೇಗೌಡರಿಗೆ ಕರೆ ಮಾಡಿದ್ದ ಅವರ ಆಪ್ತ ಸಹಾಯಕ ಸರ್ ನಿಮ್ಮ ಕಾರ್ ಮಾರಾಟಕ್ಕೆ ಇಟ್ಟಿದ್ದಿರಾ ಎಂದು ಕೇಳಿದ್ದಾರೆ. ಅದಕ್ಕೆ ಭೋಜೇಗೌಡರು ಇಲ್ಲ, ಕಾರು ಚಿಕ್ಕಮಗಳೂರಿನ ನನ್ನ ಮನೆಯ ಬಳಿಯೇ ಇದೆ ಎಂದಾಗ, ಶೋರೂಂನಲ್ಲಿ ನಿಮ್ಮ ಕಾರಿನ ನಂಬರ್ ಮತ್ತೊಂದು ಕಾರು ಇದೆ ಎಂದು ವಿಷಯ ಮುಟ್ಟಿಸಿದ ಬಳಿಕ ಹೈಗ್ರೌಂಡ್ಸ್ ಠಾಣೆಯಲ್ಲಿ ಮಾದೇಶ ದೂರು ನೀಡಿದ್ದಾರೆ.

    ಇದನ್ನೂ ಓದಿ: ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ

    ಮತ್ತಿಬ್ಬರಿಗಾಗಿ ಶೋಧ

    ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಹೈಗ್ರೌಂಡ್ಸ್ ಪೊಲೀಸ್ ಇನ್‌ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ತನಿಖೆ ಕೈಗೊಂಡು ಶೋ ರೂಂ ಮಾಲೀಕ ಇಮ್ರಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಮಂಜುನಾಥ್, ಶಾಬಾಜ್ ಖಾನ್ ಎಂಬುವವರು ನನಗೆ ಮಾರಾಟ ಮಾಡಲು ನೀಡಿದ್ದರು ಎಂದು ತಿಳಿಸಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಮೈಸೂರಿನಲ್ಲಿ ಇನ್ನೋವಾ ಕ್ರಿಸ್ಟಾ ಕಾರನ್ನು ಕದ್ದು ತಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆ ಕಾರನ್ನು 3 ದಿನಗಳ ಹಿಂದೆ ಶೋ ರೂಂ ಮಾಲೀಕ ಇಮ್ರಾನ್‌ಗೆ ನೀಡಿ ಮಾರಾಟ ಮಾಡಿಕೊಡಲು ಹೇಳಿದ್ದಾರೆ. ಹೀಗಾಗಿ ಶೋ ರೂಂ ಮಾಲೀಕ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದ.

    ಇದನ್ನೂ ಓದಿ: ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

    ಶೋ ರೂಂ ಬಳಿ ನಿಂತಿದ್ದ ಕಾರಿನ ಸಂಖ್ಯೆಯನ್ನು ಭೋಜೇಗೌಡ ಅವರ ಆಪ್ತ ಸಹಾಯಕ ಮಾದೇಶ್ ಗಮನಿಸಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts