More

    ಶರಾವತಿ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡಿ

    ತೀರ್ಥಗಳ್ಳಿ: ಕೋಣಂದೂರು ಸಮೀಪದ ಆಲೂರು-ಹೊಸಕೊಪ್ಪದಲ್ಲಿ 60 ವರ್ಷಗಳಿಂದ ಬಗರ್​ಹುಕುಂ ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡುವಂತೆ ಸಂತ್ರಸ್ತರ ನಿಯೋಗ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಭಾನುವಾರ ಮನವಿ ಸಲ್ಲಿಸಿತು.

    ನಾವು ಮೂಲತಃ ಸಾಗರ ತಾಲೂಕು ಲಿಂಗನಮಕ್ಕಿ, ಭಾರಂಗಿ ಹೋಬಳಿಯ ಹಂಸೆ, ಕಸಬಾ ಹೋಬಳಿ ಬಡೇನಗರ, ಕ್ಯಾದಗೆಪುರ, ಕೆಸರೆ, ಆವಿನಹಳ್ಳಿ, ಕುದುರೆ ಬೀರಪ್ಪ ಸರ್ಕಲ್ ಮುಂತಾದ ಗ್ರಾಮಗಳಿಂದ ಮುಳುಗಡೆಯಾಗಿ ಬಂದವರು. ರಾಜ್ಯಕ್ಕೆ ವಿದ್ಯುಚ್ಛಕ್ತಿ ನೀಡುವ ಉದ್ದೇಶದಿಂದ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮನೆ, ದನದ ಕೊಟ್ಟಿಗೆ, ಭತ್ತದ ಗದ್ದೆಗಳನ್ನು ಕಳೆದುಕೊಂಡೆವು. ಈ ರೀತಿಯಾಗಿ ಮುಳುಗಡೆಯಾದ 22ಕ್ಕೂ ಹೆಚ್ಚು ಕುಟುಂಬಗಳಿಗೆ ಇದುವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯ, ಜಮೀನು ಮಂಜೂರಾಗಿಲ್ಲ ಎಂದರು.

    ನಾವು ಹೊಸಕೊಪ್ಪ ಗ್ರಾಮದ ಸರ್ವೆ ನಂ.16, 29, 37ರಲ್ಲಿ ಬಗರ್​ಹುಕುಂ ಸಾಗುವಳಿ ಮಾಡುತ್ತಿದ್ದು, ಸರ್ಕಾರಕ್ಕೆ ತೆರಿಗೆ ಸಂದಾಯ ಮಾಡಿದ್ದೇವೆ. ಪಹಣಿ ಸಹ ನಮ್ಮ ಹೆಸರಿನಲ್ಲಿ ನಮೂದಾಗಿದೆ. ಬಗರ್​ಹುಕುಂ ಸಾಗುವಳಿ ಅರ್ಜಿ ಸಂಖ್ಯೆ 50 ಮತ್ತು 53, 57ರಲ್ಲಿ ಬಗರ್​ಹುಕುಂ ಸಕ್ರಮೀಕರಣ ಕಾಯ್ದೆಯಡಿ ಜಮೀನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಳುಗಡೆ ಸಂತ್ರಸ್ತರಾದ ನಮಗೆ ಆದ್ಯತೆ ಮೇರೆಗೆ ಜಮೀನು ಮಂಜೂರು ಮಾಡಬೇಕು. ಸರ್ಕಾರದಿಂದ ನೇಮಕವಾದ ವಿಶೇಷಾಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆ ಅರ್ಥೈಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ವಿನಂತಿಸಿದರು.

    ರಾಮಕೃಷ್ಣ ಭಂಡಾರಿ, ಎಚ್.ಬಿ.ಓಂಕೇಶ, ದೇವೇಂದ್ರ ನಾಯ್ಕ, ಕೃಷ್ಣಮೂರ್ತಿ ಭಂಡಾರಿ, ನಾಗರಾಜ ಭಂಡಾರಿ, ಈಶ್ವರ ಭಂಡಾರಿ, ಮಂಜಪ್ಪ ಭಂಡಾರಿ, ಪತ್ರಕರ್ತ ಹೊಸಕೊಪ್ಪ ಶಿವು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts