More

    ನಿಮ್ ಕೈಲಿ ರಸ್ತೆ ಗುಂಡಿ ಮುಚ್ಚೋಕೂ ಆಗಲ್ಲ; ರಾಣೆಬೆನ್ನೂರ ಹೋಗಿ ನೋಡಿಕೊಂಡು ಬರ್ರಿ; ಶಾಸಕ ಶಿವಣ್ಣನವರ ಆಕ್ರೋಶ

    ಹಾವೇರಿ: ‘ತಾಲೂಕಿನ ಸಿಬಾರದಿಂದ ಎಕ್ಕುಂಬಿ ರಸ್ತೆ ಸಂಪೂರ್ಣ ಹಾಳಾಗಿದೆ. ನಿಮಗೆ ಸರಿಯಾಗಿ ರಸ್ತೆ ಗುಂಡಿ ಮುಚ್ಚೋಕೆ ಬರುವುದಿಲ್ಲ. ಎರಡು ತಿಂಗಳಾಗಿಲ್ಲ ಎಲ್ಲ ಕಿತ್ತುಕೊಂಡು ಹೋಗಿದೆ. ರಾಣೆಬೆನ್ನೂರ ಹಾಗೂ ಬ್ಯಾಡಗಿಯಲ್ಲಿ ಹೇಗೆ ಮಾಡಿದ್ದಾರೆ ಹೋಗಿ ನೋಡಿಕೊಂಡು ಬರ್ರಿ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ಬಸವರಾಜ ಶಿವಣ್ಣನವರ ಆಕ್ರೋಶ ವ್ಯಕ್ತಪಡಿಸಿದರು.
    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ನೀವು ಯಾಕೆ ಸರಿಯಾಗಿ ರಸ್ತೆ ಗುಂಡಿ ಮುಚ್ಚಲ್ಲ. ನಾನು ಹಾವೇರಿಯಲ್ಲಿ ಶಾಸಕ ಇದ್ದಾಗಿನಿಂದಲೂ ಇಲ್ಲಿ ಇದೇ ಸಮಸ್ಯೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ರಸ್ತೆ ದುರಸ್ತಿಗೆ 1 ಕಿ.ಮೀ.ಗೆ 34 ಲಕ್ಷ ರೂ. ಕೊಡುತ್ತಾರೆ. ರಸ್ತೆ ಸಂಪೂರ್ಣ ಹದಗೆಟ್ಟಿರುವ ಕಾರಣ ಹೀಗಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಶ್ರೀಮಂತ ಹದಗಲ್ ಸ್ಪಷ್ಟಪಡಿಸಿದರು.
    ಗುತ್ತಲ ಫ್ಲೈ ಓವರ್‌ನಿಂದ ಸಿಬಾರವರೆಗಿನ ರಸ್ತೆಗೆ 9 ಕೋಟಿ ರೂ. ಮಂಜೂರಾಗಿದ್ದು ಕೆಲಸ ಆರಂಭವಾಗಿದೆ. ಗಜೇಂದ್ರಗಡ- ಸೊರಬ ರಸ್ತೆ ಡಾಂಬರೀಕರಣ ಅಗಿದ್ದು, ಬಾಕಿ ಕೆಲಸ ಪ್ರಗತಿಯಲ್ಲಿದೆ. ಹೊಸರಿತ್ತಿ- ನೆಗಳೂರು, ತೋಟದ ಯಲ್ಲಾಪುರ- ಗುತ್ತಲ ರಸ್ತೆ ಆಗಬೇಕಿದೆ. ಅಗಡಿ- ಕಾಟೇನಹಳ್ಳಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಇತರೆ ಕೆಲಸ ಬಾಕಿ ಇದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಶ್ರೀಮಂತ ಹದಗಲ್ ಸಭೆಗೆ ತಿಳಿಸಿದರು. ಅಗಡಿ ರಸ್ತೆ ಪೂರ್ಣಗೊಳಿಸಲು ಇನ್ನೂ ಎಷ್ಟು ದಿನ ಬೇಕು. ನಾನು ಅದೇ ರಸ್ತೆಯಲ್ಲಿ ಓಡಾಡುತ್ತೇನೆ. ಅಲ್ಲಿ ಓಡಾಡಲು ಆಗುತ್ತಿಲ್ಲ. ಕೂಡಲೇ ಸರಿಪಡಿಸಿ ಎಂದು ಶಾಸಕ ಶಿವಣ್ಣವರ ಹೇಳಿದರು. ಕೊರಡೂರ ರಸ್ತೆ ಸ್ವಲ್ಪ ಉಳಿದಿದೆ. ಈ ಹಿಂದೆ ಅಲ್ಲಿ ವಾಹನವೊಂದು ಪಲ್ಟಿ ಆಗಿ ನಾಲ್ಕು ಜನ ಸತ್ತಿದ್ದಾರೆ. ಅದನ್ನು ಕೂಡಲೇ ಸರಿಪಡಿಸಿ ಎಂದು ಲಮಾಣಿ ಹೇಳಿದರು.
    ನೆಲೋಗಲ್ಲ ಗುಡ್ಡದಲ್ಲಿ ಕಾನೂನು ಮಹಾವಿದ್ಯಾಲಯಕ್ಕೆ 5 ಕೋಟಿ ರೂ. ಮಂಜೂರಾಗಿದೆ. ಎಂಟು ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ. ಹೆಲಿಪ್ಯಾಡ್ ಸಂಪರ್ಕಿಸುವ ರಸ್ತೆ ಕಾರ್ಯ ಆರಂಭವಾಗಲಿದೆ. ಹಾವೇರಿ ಸರ್ಕೀಟ್ ಹೌಸ್‌ಗೆ 9 ಕೋಟಿ ರೂ. ಮಂಜೂರಾಗಿದೆ. ಕರ್ಜಗಿ ಎಸ್‌ಸಿ, ಎಸ್‌ಟಿ ಹಾಸ್ಟೆಲ್ 6.50 ಕೋಟಿ ರೂ. ಮಂಜೂರಾಗಿದೆ. ಹೊಸರಿತ್ತಿ ಸರ್ಕೀಟ್ ಹೌಸ್ ಟೆಂಡರ್ ಆಗಬೇಕಿದೆ ಎಂದು ಎಇಇ ವಿವರಿಸಿದರು.
    ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಡಿ.ಸಿ. ಮಾತನಾಡಿ, ತಾಲೂಕಿನ 886 ಜಾನುವಾರುಗಳು ಕಳೆದ ವರ್ಷ ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ಇದರಲ್ಲಿ 673 ಜಾನುವಾರುಗಳ ಮಾಲೀಕರಿಗೆ ಪರಿಹಾರ ಕೊಡಲಾಗಿದ್ದು, ಬಾಕಿ 213 ಜಾನುವಾರುಗಳ ಪರಿಹಾರ ಶೀಘ್ರದಲ್ಲೇ ಪಾವತಿಯಾಗಲಿದೆ. ಸದ್ಯಕ್ಕೆ ಮೇವಿಗೆ ಕೊರತೆ ಇಲ್ಲ. ತಾಲೂಕಿನಲ್ಲಿ ಪಶು ಇಲಾಖೆಯಲ್ಲಿ ಒಟ್ಟು 85 ಪಶು ವೈದ್ಯರ ಹುದ್ದೆ ಮಂಜೂರಾಗಿದ್ದು ಕೇವಲ ನಾಗನೂರ, ದೇವಗಿರಿ ಹಾಗೂ ಹಾವೇರಿಯಲ್ಲಿ ಮಾತ್ರ ಮೂವರು ವೈದ್ಯರಿದ್ದಾರೆ. ದಯವಿಟ್ಟು ಪಶುವೈದ್ಯರನ್ನು ಮಂಜೂರು ಮಾಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
    ಸಭೆಯಲ್ಲಿ ಡಿಡಿಪಿಐ ಬಿ.ಎಸ್.ಜಗದೀಶ್ವರ, ತಹಶೀಲ್ದಾರ ಗಿರೀಶ ಸ್ವಾದಿ, ತಾಪಂ ಇಒ ಭರತ ಹೆಗಡೆ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಬಾಕ್ಸ್
    ಕುಡಿಯುವ ನೀರು ಪೂರೈಸಿ :
    ಬ್ಯಾಡಗಿ ಕ್ಷೇತ್ರದ ಹೊಸಳ್ಳಿ, ಆಲದಕಟ್ಟಿ, ಗೌರಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕ ಬಸವರಾಜ ಶಿವಣ್ಣವರ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಕೆಲ ಬೋರ್‌ವೆಲ್‌ಗಳಲ್ಲಿ ನೀರು ಬಂದ್ ಆಗಿದೆ. ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹೊಸೂರು ತಾಂಡಾದಲ್ಲಿ 3 ಬೊರ್‌ವೆಲ್ ಇವೆ. ಒಂದು ಬೋರ್ ಹಾಳಾಗಿದೆ ಎಂದರು. ನೀವು ಏನು ಮಾಡುತ್ತೀರೋ ಗೊತ್ತಿಲ್ಲ. ಹೊಸೂರು ಹಾಗೂ ಹೊಸಳ್ಳಿಗೆ ನೀರು ಕೊಡಬೇಕು ಅಷ್ಟೇ ಎಂದು ಶಾಸಕರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts