More

    ಸಮಸ್ಯೆಗಳಿದ್ದರೆ ನನಗೆ ಕರೆ ಮಾಡಿ ತಿಳಿಸಿ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

    ಮಂಡ್ಯ: ನನ್ನನ್ನು ಭೇಟಿಯಾಗಲು ಯಾರು ಸಹ ಹುಡುಕುವ ಅಗತ್ಯವಿಲ್ಲ. ನನ್ನ ಮೊಬೈಕ್ ಸಂಖ್ಯೆ ಕರೆ ಮಾಡಿ ಮಾತನಾಡಬಹುದು. ಇಲ್ಲವಾದರೆ ನಾನೇ ವಾಪಸ್ ಕರೆ ಮಾಡುತ್ತೇನೆ. ಪಿಎ ಅಥವಾ ಗನ್‌ಮ್ಯಾನ್‌ಗಳ ಮೂಲಕ ಸಂಪರ್ಕಿಸುವ ಅಗತ್ಯ ಇಲ್ಲ ಎಂದು ನೂತನ ಶಾಸಕ ರವಿಕುಮಾರ್ ಗಣಿಗ ಹೇಳಿದರು.
    ತಾಲೂಕಿನ ಬಸರಾಳು ಗ್ರಾಮದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಬಳಿಕ ಆಯೋಜಿಸಿದ್ದ ಸಮಾರಂಭದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ನನ್ನ ಗೆಲುವನ್ನು ಕ್ಷೇತ್ರದ ಮತದಾರರು, ಪಕ್ಷದ ನಾಯಕರು, ಮುಖಂಡರು ಹಾಗೂ ಎಲ್ಲ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಪ್ರತಿ ಶನಿವಾರ ಬಸರಾಳಿಗೆ ಆಗಮಿಸಿ ಅರ್ಧ ದಿನ ಇಲ್ಲೇ ಉಳಿದು ನಿಮ್ಮೆಲ್ಲರ ಸಮಸ್ಯೆಗಳ ಕೇಳಿ ಬಗೆಹರಿಸುವುದಾಗಿ ತಿಳಿಸಿದರು.
    ಬಸರಾಳು ಹೋಬಳಿ ಕೇಂದ್ರದಲ್ಲಿ ಶಾಸಕರ ಕಚೇರಿ ಸಹ ತೆರೆಯಲಾಗುವುದು. ಕ್ಷೇತ್ರದ ಎಲ್ಲರೂ ಪ್ರೀತಿಯಿಂದ ನನ್ನನ್ನು ಆಯ್ಕೆ ಮಾಡಿದ್ದೀರಿ. ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜತೆಗೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಕೆಲಸ ಮಾಡಲಾಗುವುದು. ನಾನು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಸೋಮವಾರ ಪ್ರಮಾಣವಚನ ಸ್ವೀಕರಿಸಿದ ನಂತರ ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಖುದ್ದು ಭೇಟಿ ನೀಡಿ ಧನ್ಯವಾದ ಅರ್ಪಿಸಲಾಗುವುದು. ನಮ್ಮ ಪಕ್ಷ ೋಷಣೆ ಮಾಡಿದಂತೆ ಐದು ಯೋಜನೆಗಳನ್ನು ತಪ್ಪದೇ ಜಾರಿಗೊಳಿಸಲಾಗುವುದು ಎಂದರು.
    ಗ್ರಾಮದ ಮುಖಂಡ ಬಿ.ಟಿ.ಶಂಕರೇಗೌಡ ಮಾತನಾಡಿ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಕೆಲಸ ಅರ್ಧಕ್ಕೆ ನಿಂತಿದೆ. ಕೂಡಲೇ ಬಸರಾಳಿಗೆ ಸಮುದಾಯ ಆರೋಗ್ಯ ಕೇಂದ್ರ ಒದಗಿಸಿಕೊಡಬೇಕು. ರಾತ್ರಿ ಪಾಳಿ ವೈದ್ಯರು ಇಲ್ಲದೆ ಇರುವುದರಿಂದ ನೂರಾರು ರೋಗಿಗಳಿಗೆ ಸಮಸ್ಯೆ ಉಂಟಾಗಿದೆ. ಆ ಬಗ್ಗೆಯೂ ತುರ್ತು ಕ್ರಮ ವಹಿಸುವಂತೆ ಮನವಿ ಮಾಡಿದರು.
    ಕಾಂಗ್ರೆಸ್ ಮುಖಂಡರಾದ ರವಿ ಭೋಜೇಗೌಡ, ಎಚ್.ಅಪ್ಪಾಜಿಗೌಡ, ಕೃಷ್ಣೇಗೌಡ, ಚಿಕ್ಕಬಳ್ಳಿ ಕೃಷ್ಣ, ಶ್ರೀನಿವಾಸ್, ರಾಜು ಕೆಂಚನಹಳ್ಳಿ, ಶಂಕರ್ ಪಟೇಲ್, ಲಿಂಗರಾಜು, ಶಂಕರ್ ಇತರರಿದ್ದರು.
    ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮಂಡ್ಯ-ನಾಗಮಂಗಲ ರಸ್ತೆಯಿಂದ ಶಾಸಕ ರವಿಕುಮಾರ್ ಗಣಿಗ ಅವರನ್ನು ಮಂಗಳವಾದ್ಯದೊಂದಿಗೆ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಅಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts