More

    ಹೊಸದಾಗಿ ಯೋಜನೆ ರೂಪಿಸಲು ಸಲಹೆ: ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸಭೆ

    ಮಂಡ್ಯ: ನಗರದ ಮಹಾವೀರ ವೃತ್ತದಿಂದ ಪೇಟೆಬೀದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಸಂಬಂಧ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು. ಅಂತೆಯೇ ಸುಮಾರು ಹೊತ್ತು ನಡೆದ ಚರ್ಚೆ ಬಳಿಕ ಯಾರಿಗೂ ಸಮಸ್ಯೆಯಾಗದಂತೆ ಹೊಸದಾಗಿ ಯೋಜನೆ ರೂಪಿಸಬೇಕೆನ್ನುವ ಒಮ್ಮತದ ಸಲಹೆ ಕೇಳಿಬಂತು.
    ಮಹಾವೀರ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವರ್ತಕರು, ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ರಸ್ತೆಬದಿ ವ್ಯಾಪಾರಿಗಳು ಭಾಗವಹಿಸಿದ್ದರು. ಅದರಂತೆ ಕಾಮಗಾರಿಯಿಂದಾಗಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಹಾಗೂ ಅನುಕೂಲಗಳ ಕುರಿತು ಚರ್ಚೆ ನಡೆಯಿತು. ಹಲವು ಸಾಧಕ-ಬಾಧಕದ ಕುರಿತು ಅಭಿಪ್ರಾಯ ಮಂಡಿಸಲಾಯಿತು.
    ಏನಿದು ಕಾಮಗಾರಿ ಸಮಸ್ಯೆ?: ಕೆಳ ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರ ಹಲವು ವರ್ಷದ ಹಿಂದೆಯೇ ಅನುದಾನ ಮಂಜೂರು ಮಾಡಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ನನೆಗುದಿಗೆ ಬಿದ್ದಿದೆ. ರೈಲ್ವೆ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರ ಅಧಿಕಾರಾವಧಿಯಲ್ಲಿ ಕೆಳ ಸೇತುವೆಗೆ ಮಂಜೂರಾತಿ ನೀಡಲಾಗಿತ್ತು. ನಂತರ ಡಿ.ವಿ.ಸದಾನಂದಗೌಡ ರೈಲ್ವೆ ಖಾತೆ ಸಚಿವರಾಗಿದ್ದಾಗ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದ್ದರು. ಆದರೂ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭವಾಗಲೇ ಇಲ್ಲ. ನೇರ ರಸ್ತೆ ನಿರ್ಮಿಸುವುದರಿಂದ ಸ್ಥಳೀಯರು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ ಕಾರಣ ಕಾಮಗಾರಿ ನಡೆಯಲಿಲ್ಲ.
    ಕೆಲ ತಿಂಗಳ ಹಿಂದೆ ಸಂಸದೆ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ರೈಲ್ವೆ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ನಂತರ ಹಿಂದೆ ತಯಾರಿಸಿದ್ದ ನೇರ ರಸ್ತೆ ಯೋಜನೆಯನ್ನು ಕೈಬಿಟ್ಟ ರೈಲ್ವೆ ಅಧಿಕಾರಿಗಳು, ಬದಲಿ ಮಾರ್ಗವಾಗಿ ಮತ್ತೊಂದು ನೀಲಿ ನಕಾಶೆಯನ್ನು ರೂಪಿಸಿದರು. ಅದರಂತೆ ಮಹಾವೀರ ವೃತ್ತದಿಂದ ರೈಲ್ವೆ ಹಳಿವರೆಗೆ ಕೆಳ ಸೇತುವೆ ರಸ್ತೆ ಬರುತ್ತದೆ. ಜೈನರ ಬೀದಿಗೆ ಅಡ್ಡಲಾಗಿ ಗೋಡೆ ನಿರ್ಮಿಸಿ ಯೂ ಟರ್ನ್ ಪಡೆದು 60 ಮೀಟರ್ ಮಾರುಕಟ್ಟೆ ಕಡೆಗೆ ರಸ್ತೆ ಸಾಗಿ ಅಲ್ಲಿ ವೃತ್ತ ನಿರ್ಮಿಸುವ ಚಿಂತನೆ ಮಾಡಲಾಗಿತ್ತು. ವೃತ್ತದ ಮೂಲಕ ಮಾರುಕಟ್ಟೆ ಕಡೆಗೆ ಹೋಗಬಹುದು, ಇಲ್ಲವೇ ಜೈನರ ಬೀದಿ ಕಡೆಗೂ ಬರಬಹುದಿತ್ತು.
    ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ ರವಿಕುಮಾರ್, ಹೊಸ ಯೋಜನೆಯನ್ವಯ ಕಾಮಗಾರಿ ಪ್ರಾರಂಭವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರ ಸಲಹೆ ಪಡೆಯಲು ಸಭೆ ಕರೆಯಲಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಸೋಮವಾರದಿಂದ ಮೂರು ದಿನ ಅಧಿವೇಶನ ನಡೆಯಲಿದೆ. ಈ ವೇಳೆ ವರ್ತಕರು, ಸ್ಥಳೀಯರ ನಿಯೋಗ ಬಂದಲ್ಲಿ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿಸಿ ಈ ಯೋಜನೆಯನ್ನು ಕೈಬಿಟ್ಟು ಕಟ್ಟಡಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನೀಲಿ ನಕಾಶೆ ತಯಾರಿಸಿ ನಂತರ ಕಾಮಗಾರಿ ಪ್ರಾರಂಭಿಸುವಂತೆ ಮನವಿ ಮಾಡೋಣ ಎಂದು ಸಲಹೆ ನೀಡಿದರು.
    ಶೀಘ್ರ ಈ ಯೋಜನೆ ಅನುಷ್ಠಾನವಾಗದಿದ್ದಲ್ಲಿ ಹಾಲಿ ಇರುವ ಲೆವೆಲ್ ಕ್ರಾಸಿಂಗ್ ರಸ್ತೆಯನ್ನು ಇಲಾಖೆ ಶಾಶ್ವತವಾಗಿ ಮುಚ್ಚುತ್ತದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವುದರ ಜತೆಗೆ ಸ್ಥಳೀಯರು ಮತ್ತು ವ್ಯಾಪಾರಿಗಳಿಗೂ ಅನಾನುಕೂಲವಾಗುತ್ತದೆ ಎಂದು ಎಚ್ಚರಿಸಿದರು. ಶಾಸಕರ ಮಾತನ್ನು ಆಲಿಸಿದ ಸ್ಥಳೀಯರು ಮತ್ತು ವರ್ತಕರು ಸಹಮತ ವ್ಯಕ್ತಪಡಿಸಿ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವೊಲಿಸುವ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದರು.
    ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್, ಮಾಜಿ ಅಧ್ಯಕ್ಷರಾದ ಮಹೇಂದ್ರಬಾಬು, ಸದಾಶಿವ ಭಟ್, ನಗರಸಭಾ ಸದಸ್ಯರಾದ ನಾಗೇಶ್, ನಯೀಂ, ಮುಖಂಡರಾದ ಸತೀಶ್‌ಬಾಬು ಜೈನ್, ಎಂ.ಎಸ್.ಶಿವಪ್ರಕಾಶ್, ಪುಟರ್‌ಮಲ್ ಜೈನ್, ಶಾಂತಿಪ್ರಸಾದ್‌ಜೈನ್, ಎಂ.ಬಿ.ನಾಗಣ್ಣ, ಸುರೇಶ, ಸುಧೀರ್‌ಜೈನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts