More

    ಕರೊನಾ ಸೋಂಕಿನಿಂದ ಮೃತಪಟ್ಟವರ ವರದಿ ಕೊಡಿ ; ತಹಸೀಲ್ದಾರ್‌ಗೆ ಶಾಸಕ ಎ.ಮಂಜುನಾಥ್ ಸೂಚನೆ

    ಮಾಗಡಿ : ತಾಲೂಕಿನಲ್ಲಿ ಕರೊನಾ ಸೋಂಕಿನಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಬಗ್ಗೆ ದಾಖಲಾತಿ ಸಹಿತ ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್ ಅವರಿಗೆ ಶಾಸಕ ಎ.ಮಂಜುನಾಥ್ ಸೂಚಿಸಿದರು.

    ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಾಡಾಗಿದ್ದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಸಾವುಗಳು ಹೆಚ್ಚಾಗುತ್ತಿವೆ. ನಾನೂ ಕರೊನಾ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಇರುವ ಕಡೆ ಪುರಸಭೆ ಸದಸ್ಯರ ಮಾರ್ಗ ದರ್ಶನದಲ್ಲಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎಂದರು.

    ಜನರಿಗೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿ ಗಳು ಸ್ಪಂದಿಸಬೇಕು. ಕೆಲವರಿಗೆ ಚಿಕಿತ್ಸೆ ಪಡೆಯುವ ಮಾಹಿತಿ ಕೊರತೆಯಿಂದಾಗಿ ಸೋಂಕಿತರು ಮೃತಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ವೈದ್ಯರು ಸಮರ್ಪಕ ಮಾಹಿತಿ ನೀಡಿ, ಅವರ ನೆರವಿಗೆ ಧಾವಿಸುವ ಮೂಲಕ ಮರಣ ಪ್ರಮಾಣ ಕಡಿಮೆ ಮಾಡಲು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.

    ಜನದಟ್ಟಣೆ ಕಡಿಮೆ ಮಾಡಲು ಕಾರ್ಯತಂತ್ರ: ಜನತಾ ಕರ್ಯ್ೂನಿಂದಾಗಿ ದಿನಬಳಕೆ ವಸ್ತುಗಳ ಖರೀದಿಗೆ ಜನದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಮುಂದಿನ ವಾರ ಸರ್ವಪಕ್ಷದ ಸಭೆ ನಡೆಸಲು ತಿರ್ಮಾನಿಸಲಾಗಿದೆ. ಎಲ್ಲರ ಸಲಹೆ, ಮಾರ್ಗದರ್ಶನ, ಅಭಿಪ್ರಾಯ ಪಡೆದು ಜನರ ರಕ್ಷಣೆ ಮಾಡಲಾಗುವುದು. ಜನತೆ ಆತಂಕಪಡಬೇಕಾಗಿಲ್ಲ. ಸೋಂಕಿನ ಲಕ್ಷಣ ಇರುವವರು ಮನೆಯಲ್ಲೆ ಚಿಕಿತ್ಸೆ ಪಡೆದರೆ ಗುಣವಾಗುತ್ತದೆ ಎಂಬ ಮನೋಭಾವ ಬಿಟ್ಟು ಸಮರ್ಪಕವಾದ ಚಿಕಿತ್ಸೆ ಪಡೆಯಬೇಕು ಎಂದು ಶಾಸಕ ಎ. ಮಂಜುನಾಥ್ ಮನವಿ ಮಾಡಿದರು.

    ಕೆಂಪೇಗೌಡ ಕೋಟೆ ಮೈದಾನಕ್ಕೆ ಮಾರುಕಟ್ಟೆ ಸ್ಥಳಾಂತರ?: ಕೆಂಪೇಗೌಡ ಸರ್ಕಲ್ ಬಳಿಯ ತರಕಾರಿ ಮಾರುಕಟ್ಟೆ ಬಳಿ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಜನದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ, ಮಾರುಕಟ್ಟೆಯನ್ನು ಕೆಂಪೇಗೌಡ ಕೋಟೆ ಮೈದಾನಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಯುತ್ತಿದೆ. ಪ್ರತಿಪಕ್ಷದ ನಾಯಕರು, ಪುರಸಭೆ ಆಡಳಿತದ ಅಭಿಪ್ರಾಯ ಪಡೆದು ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಶಾಸಕರು ಹೇಳಿದರು.

    ಪುರಸಭೆ ಸದಸ್ಯರಾದ ಜಯರಾಮು, ಅಶ್ವತ್ಥ್, ಅನಿಲ್ ಕುಮಾರ್, ಎಂ.ಎನ್.ಮಂಜುನಾಥ್, ಕಾಂತರಾಜು, ರಿಯಾಜ್, ಮಾಜಿ ಸದಸ್ಯರಾದ ರಘು, ರೂಪೇಶ್, ಸಿಪಿಐ ಕುಮಾರ್, ಪ್ರಭಾರ ಟಿಎಚ್‌ಒ ಡಾ. ರಾಮಚಂದ್ರಪ್ಪ, ಇಒ ಪ್ರದೀಪ್, ಸಿಡಿಪಿಒ ಸುಧೀಂದ್ರ ಮತ್ತಿತರರಿದ್ದರು.

    ತಾಲೂಕಿನಲ್ಲಿ 395 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರಿಗೂ ಪ್ರತಿದಿನ 2 ಬಾರಿ ಆರೋಗ್ಯ ತಪಾಸಣೆ ಮಾಡಿ, ಔಷಧ ನೀಡಲಾಗುತ್ತಿದೆ. ಆರೋಗ್ಯ ಏರುಪೇರಾದರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿಗಳು ಅವರೆಲ್ಲರ ಆರೋಗ್ಯ ವಿಚಾರಿಸುತ್ತಿದ್ದಾರೆ.
    ಆರ್. ರಂಗನಾಥ್ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts