More

    ಕೇಂದ್ರ ಸ್ಥಾನದಲ್ಲಿ ಇರದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

    ಮದ್ದೂರು: ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು ರೈತರ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಎಚ್ಚರಿಕೆ ನೀಡಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿ, ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರದೆ ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಬರುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿಯಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸ್ಥಾನದಲ್ಲೇ ಉಳಿದು ಕೆಲಸ ಮಾಡಬೇಕು. ಇಲ್ಲದಿದ್ದರೆ, ಅಂತನ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ ಎಂದರು.

    ಅಧಿಕಾರಿಗಳು ದೂರದ ಊರುಗಳಿಂದ ಬಂದು ಕೆಲಸ ಮಾಡಲು ತಡವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ, ರೈತರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರದಿದ್ದರೆ ನೀವು ನಿಮಗೆ ಇಷ್ಟ ಬಂದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಕೆಲವು ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸಾರ್ವಜನಿಕರ ಹಾಗೂ ರೈತರ ಕೆಲಸಗಳನ್ನು ಮಾಡಲು ಲಂಚದ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಎಲ್ಲ ರೀತಿಯ ದಾಖಲಾತಿಗಳನ್ನು ನೀಡಿದರೂ ಲಂಚ ನೀಡಲಿಲ್ಲ ಎಂಬ ಕಾರಣಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳದಿದ್ದರೆ ಅನಿವಾರ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಅಧಿಕಾರಿಗಳು ರೈತರ ಹಾಗೂ ಸಾರ್ವಜನಿಕರ ಬಳಿ ಸೌಜನ್ಯದಿಂದ ವರ್ತನೆ ಮಾಡಬೇಕು. ಸರ್ಕಾರದ ಕೆಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ. ಇದನ್ನು ಮರೆತು ಸಾರ್ವಜನಿಕರೊಂದಿಗೆ ಉಡಾಫೆಯಾಗಿ ವರ್ತಿಸುವುದು, ಕೆಲಸಗಳನ್ನು ಮಾಡಿಕೊಳ್ಳದೆ ಅನಗತ್ಯವಾಗಿ ಕಚೇರಿಗೆ ಅಲೆಸುವುದನ್ನು ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ಬರದ ಸಂಬಂಧ ಬೆಳೆಗಳ ನೋಂದಣಿಯನ್ನು ಸಮರ್ಪಕವಾಗಿ ಮಾಡಿ, ಪ್ರತಿಯೊಬ್ಬ ರೈತರಿಗೂ ಬರ ಪರಿಹಾರ ಬರುವಂತೆ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಕಾಲಕ್ಕೆ ತಲುಪುವಂತೆ ನೋಡಿಕೊಂಡು ಸಾರ್ವಜನಿಕರಿಗೆ ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ಎಡಿಎಲ್‌ಆರ್ ಶ್ರೀನಿವಾಸಮೂರ್ತಿ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts