More

    ಏಕ ಕುಟುಂಬ ವ್ಯವಸ್ಥೆಯಿಂದ ಸಮಾಜದ ಬೇರು ಸಡಿಲ

    ಮದ್ದೂರು: ಸಮಾಜ ಹಾಗೂ ಕುಟುಂಬದ ಬೇರುಗಳು ಸಡಿಲಾಗುತ್ತಿರುವುದಕ್ಕೆ ಏಕ ಕುಟುಂಬ ವ್ಯವಸ್ಥೆಯೇ ಕಾರಣ ಎಂದು ಮೈಸೂರು ಮಹಾರಾಣಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸರ್ವಮಂಗಳಾ ಅಸಮಾಧಾನ ವ್ಯಕ್ತಪಡಿಸಿದರು.

    ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಹಾಗೂ ಐಕ್ಯೂ ಎಸಿ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅವಿಭಕ್ತ ಕುಟುಂಬ ವ್ಯವಸ್ಥೆ ವ್ಯಕ್ತಿಯ, ಕುಟುಂಬದ ಹಾಗೂ ಸಮಾಜದ ಸ್ಥಿರತೆಗೆ ಕಾರಣ ಎಂದು ಪ್ರತಿಪಾದಿಸಿದ ಅವರು ಭಾರತೀಯ ಸಮಾಜದ ಪುರಾತನ ಹಿನ್ನೋಟವನ್ನು ವಿಶ್ಲೇಷಿಸಿದರು. ಅಲ್ಲದೆ ಏಕ ಕುಟುಂಬ ವ್ಯವಸ್ಥೆಯ ಅನರ್ಥಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

    ಕೂಡು ಕುಟುಂಬ ವ್ಯವಸ್ಥೆ ಮನುಷ್ಯರಿಗೆ ನೆಮ್ಮದಿ, ಭದ್ರತೆ ಹಾಗೂ ಸುರಕ್ಷಾ ಭಾವವನ್ನು ಮೂಡಿಸುತ್ತದೆ ಎಂದರಲ್ಲದೆ, ಇತ್ತೀಚಿಗೆ ಭಾರತೀಯ ಸಮಾಜ ಕೂಡ ಪಾಶ್ಚಿಮಾತ್ಯ ದೇಶಗಳಂತೆ ಏಕ ಕುಟುಂಬ ವ್ಯವಸ್ಥೆಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
    ಸಮಾರಂಭದಲ್ಲಿ ಪಾಲ್ಗೊಂಡು ಏತಕ್ಕಾಗಿ ಸಮಾಜ ಶಾಸ್ತ್ರವನ್ನು ಓದಬೇಕು ಎಂಬುದರ ಬಗ್ಗೆ ಮಾತನಾಡಿದ ಡಾ.ದೊರೆಸ್ವಾಮಿ, ಪ್ರತಿಯೊಂದು ವಿಷಯಗಳು ತಮ್ಮದೇ ಆದ ಮೌಲ್ಯಗಳನ್ನು, ವಿಸ್ತೃತ ವಿವರಗಳನ್ನು ಒಳಗೊಂಡಿರುತ್ತವೆ ಹಾಗಾಗಿ ಯಾವುದೇ ವಿಷಯಗಳನ್ನು ವಿದ್ಯಾರ್ಥಿಗಳು ಲಘುವಾಗಿ ಪರಿಗಣಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸಮಾಜಶಾಸ್ತ್ರವನ್ನು ಏಕೆ ಅಧ್ಯಯನ ಮಾಡಬೇಕು? ಅದರ ಉಪಯೋಗಗಳು, ಪ್ರಸ್ತುತ ಅದರ ಅವಶ್ಯಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಅಣ್ಣಯ್ಯ ತೈಲೂರು ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂ ಎಸಿ ಸಂಚಾಲಕ ಡಾ.ಉಮೇಶ್, ಉಪನ್ಯಾಸಕಿ ಸೌಜನ್ಯ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts