More

    ದಾಸರಹಳ್ಳಿಯಲ್ಲಿ ಮಂಜುನಾಥ್ ಅಭಿವೃದ್ಧಿ ಪರ್ವ

    ಜನರ ನಡುವೆಯೇ ಇದ್ದು, ಅವರ ಸಂಕಷ್ಟಗಳಿಗೆ ಪರಿಹಾರ ನೀಡುತ್ತಲೇ ಬಂದಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ವಿಜಯವಾಣಿ ಫೋನ್ ಇನ್ ವೇದಿಕೆ ಮೂಲಕವೂ ಒಂದಿಷ್ಟು ಸಮಸ್ಯೆ ಆಲಿಸಿ, ತಕ್ಷಣವೇ ಪರಿಹಾರ ನೀಡಲು ಮುಂದಾಗಿ ಕರ್ತವ್ಯ ಮೆರೆದಿದ್ದು ವಿಶೇಷ ಸಂಗತಿ. ಅವರ ಪ್ರಭಾವ ಎಷ್ಟು ವ್ಯಾಪಿಸಿದೆ ಎಂದರೆ, ಅಕ್ಕಪಕ್ಕದ ಕ್ಷೇತ್ರದ ಜನರೂ ಸಹ ಫೋನ್ ಇನ್​ಗೆ ಕರೆ ಮಾಡಿ ದುಃಖದುಮ್ಮಾನ ತೋಡಿಕೊಂಡರು. ಅದಕ್ಕೂ ಸ್ಪಂದಿಸಿ ನೆರವಾಗುವ ಭರವಸೆ ನೀಡಿದರು. ಕ್ಷೇತ್ರದ ಇಂಚಿಂಚೂ ಸಮಸ್ಯೆ ಅರಿತ ಅವರು, ಕರೆ ಮಾಡಿದವರಿಗೆ ಸ್ಪಷ್ಟ ಭರವಸೆಯನ್ನೂ ನೀಡಿದರು. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಪರಿಹಾರದ ಕಿಟ್ ವಿತರಿಸಿದ್ದನ್ನು ಅನೇಕರು ನೆನಪಿಸಿಕೊಂಡು ಕೃತಜ್ಞತೆ ಅರ್ಪಿಸಿದರು. ಇಡೀ ಫೋನ್ ಇನ್ ಮತ್ತು ವಿಜಯವಾಣಿ ಸಂಪಾದಕೀಯ ಬಳಗದೊಂದಿಗೆ ನಡೆಸಿದ ಸಂವಾದದ ಪೂರ್ಣ ಪಾಠ ಇಲ್ಲಿದೆ.

    ಬಹುತ್ವ ಭಾರತದಂತಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಈ ಹಿಂದೆ ಇದ್ದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕ್ಷೇತ್ರಕ್ಕೆ ಮಂಜೂರು ಮಾಡಿದ್ದ ಸುಮಾರು 800 ಕೋಟಿ ರೂ. ಅನುದಾನ ಹೊಸ ಸರ್ಕಾರ ಹಾಗೂ ಬದಲಾದ ಸ್ಥಿತಿಯಿಂದ ಬಾರದಂತಾಗಿದ್ದರೂ ಧೃತಿಗೆಡದ ಶಾಸಕರು, ಕ್ಷೇತ್ರದ ಅಭಿವೃದ್ಧಿಯ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ಹೊರ ರಾಜ್ಯಗಳ ಜನರು ಸೇರಿದಂತೆ ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳ 9 ಲಕ್ಷಕ್ಕೂ ಹೆಚ್ಚು ಮಂದಿ ಈ ಕ್ಷೇತ್ರದಲ್ಲಿ ವಾಸವಾಗಿದ್ದಾರೆ. ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ವಸಾಹತು ಎನಿಸಿರುವ ಪೀಣ್ಯ ಕೈಗಾರಿಕಾ ಪ್ರದೇಶ ಈ ಭಾಗದಲ್ಲಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕು ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಸರ್ಕಾರದ ಮೊರೆ ಹೋಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮಂಜೂರಾದ 800 ಕೋಟಿ ರೂ. ಅನುದಾನ ಬದಲಾದ ರಾಜಕೀಯ ಹಿನ್ನೆಲೆ ಹಾಗೂ ಆರ್ಥಿಕ ಹಿಂಜರಿತದ ಕಾರಣ ಕಡಿತಗೊಂಡಿದೆ. ಇದು ಮಂಜುನಾಥ್​ಗೆ ನೋವುಂಟು ಮಾಡಿದೆ. ಮೈತ್ರಿ ಸರ್ಕಾರದಲ್ಲಿದ್ದಾಗ ಮಂಜುನಾಥ್ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಬಿಎಂಪಿಯಿಂದ 600 ಕೋಟಿ ರೂ., 2 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ 100 ರೂ. ಕೋಟಿ, ರಾಜಕಾಲುವೆ ಅಭಿವೃದ್ಧಿಗೆ 132 ಕೋಟಿ ರೂ. ಸೇರಿ ಸುಮಾರು 800 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ದೊರೆತಿತ್ತು. ಈ ಅನುದಾನ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಿ ಜನರ ವಿಶ್ವಾಸ ಗಳಿಸುವ ಖುಷಿಯಲ್ಲಿದ್ದರು. ಆದರೆ, ತರುವಾಯ ಬಂದ ಬಿಜೆಪಿ ಸರ್ಕಾರ ದಾಸರಹಳ್ಳಿ ಕ್ಷೇತ್ರಕ್ಕೆ ಮಂಜೂರಾದ ಅನುದಾನವನ್ನು ಏಕಾಏಕಿ 26 ಕೋಟಿ ರೂ.ಗೆ ಇಳಿಸಿದೆ. ಬಿಬಿಎಂಪಿ 2020-2021ನೇ ಸಾಲಿನ ಬಜೆಟ್​ನಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ್, ದಾಸರಹಳ್ಳಿ ಕ್ಷೇತ್ರ ಎಂದರೆ ಬಹುಭಾಷೆ, ಬಹುಸಂಸ್ಕೃತಿ, ಬಹುವೈವಿಧ್ಯದ ಜನರು ಬದುಕುವ ಮತ್ತು ಬಡ- ಮಧ್ಯಮ ವರ್ಗದ ಜನರು ನೆಲೆಸಿರುವ ಕ್ಷೇತ್ರ. ಇಲ್ಲಿ ಸ್ಥಾಪನೆಯಾಗಿರುವ ಗಾರ್ವೆಂಟ್ ಉದ್ಯಮದಲ್ಲಿ ದುಡಿಯುತ್ತಿರುವ ಸುಮಾರು 9 ಲಕ್ಷ ಜನರು ಇಲ್ಲಿದ್ದಾರೆ. ಹಾಗಾಗಿ ಮೈತ್ರಿ ಸರ್ಕಾರ ಮಂಜೂರು ಮಾಡಿದ ಎಲ್ಲ ಅನುದಾನವನ್ನೂ ಮರಳಿ ನೀಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಬಹಳಷ್ಟು ಕೆಲಸಗಳಾಗಬೇಕು

    ದಾಸರಹಳ್ಳಿ ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಯುಜಿಡಿ, ಅಂಡರ್​ಪಾಸ್, ಮೇಲ್ಸೇತುವೆ, ಕುಡಿಯುವ ನೀರು, ರಾಜಕಾಲುವೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಈ ಕುರಿತು ಪ್ರತಿಭಟನೆ ಮಾಡಿದ್ದೇನೆ. ಸಿಎಂಗೆ ಮನವಿ ಸಲ್ಲಿಸಿದ್ದೇನೆ. ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಮಂಜುನಾಥ್ ಹೇಳಿದರು.

    ಹಲೋ, ನಾನೇ ಮಂಜುನಾಥ್.. ಮಾತನಾಡ್ತಿದ್ದೇನೆ..

    ಹಲೋ, ನಾನೇ ಮಂಜುನಾಥ್.. ಮಾತನಾಡುತ್ತಿದ್ದೇನೆ.. ನಿಮ್ಮ ಸಮಸ್ಯೆ ಏನು ಹೇಳಿ? ಎಂದು ಕರೆ ಮಾಡಿದವರ ಜತೆ ನೇರವಾಗಿ ಸಂವಾದಕ್ಕೆ ಇಳಿದುಬಿಡುತ್ತಿದ್ದ ಆರ್.ಮಂಜುನಾಥ್, ಕೂಡಲೆ ಅವರ ಪೋನ್ ನಂಬರ್ ನೋಟ್ ಮಾಡಿಕೊಂಡು ನಾನೇ ನಿಮಗೆ ಕರೆ ಮಾಡುವೆ ಎಂದು ಹೇಳಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಬಿಡುತ್ತಿದ್ದರು. ಹೌದು.. ಇದು ದಾಸರಹಳ್ಳಿ ಶಾಸಕ ಮಂಜುನಾಥ್ ಅವರ ಕಾರ್ಯಶೈಲಿ. ಯಾವದೇ ವಿವಾದಕ್ಕೆ ಗುರಿಯಾಗದೇ ತಮ್ಮ ಕ್ಷೇತ್ರದಲ್ಲಿ ಕಾಯಕ ನಿಷ್ಠೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಮಂಜುನಾಥ್​ಗೆ ತಾವು ಶಾಸಕರೆಂಬ ಅಹಂ ಇಲ್ಲ. ನನಗೆ ಸೇವೆ ಸಲ್ಲಿಸಲು ದೇವರು, ಜನರು ಕಲ್ಪಿಸಿರುವ ಅವಕಾಶವೆಂದೇ ಭಾವಿಸಿರುವ ಅವರು, ಬೆಳಗ್ಗೆ ಮನೆಯಿಂದ ಹೊರಟರೆ, ಮತ್ತೆ ಮನೆ ಸೇರುವುದು ರಾತ್ರಿಯೇ. ದಾರಿ ಮಧ್ಯದಲ್ಲಿ ಕಾರಿನಲ್ಲಿಯೇ ಊಟ. ಜನರ ಕಷ್ಟ ಸುಖ ಆಲಿಸುವುದಷ್ಟೇ ಅಲ್ಲ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಗುಣ.

    ವಿಭಿನ್ನವಾದ ದಾಸರಹಳ್ಳಿ ಕ್ಷೇತ್ರ

    ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಫ್ತಿ ಬಹಳ ದೊಡ್ಡದಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಗಾರ್ವೆಂಟ್ಸ್ ಫ್ಯಾಕ್ಟರಿಗಳಿವೆ. ಪೀಣ್ಯ ಕೈಗಾರಿಕಾ ಅಭಿವೃದ್ಧಿ ಪ್ರದೇಶವಿದೆ. ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುತ್ತಿರುವ ಈ ಕ್ಷೇತ್ರದಲ್ಲಿ ಕಾರ್ವಿುಕರು, ಮಧ್ಯಮ ವರ್ಗದ ಜನರು ಹೆಚ್ಚಾಗಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಯ ಜನರು ಇಲ್ಲಿ ನೆಲೆಯಾಗಿರುವುದು ವಿಶೇಷ. ಅಚ್ಚರಿ ಅಂದರೆ, ಉತ್ತರ ಭಾರತದವರು ಈ ಕ್ಷೇತ್ರದಲ್ಲಿ ಕಡಿಮೆ.

    ನಾಯಿಗಳ ಕಾಟಕ್ಕೆ ಶೀಘ್ರ ಕಡಿವಾಣ

    ಹಲವು ಬಡಾವಣೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಇದು ಸ್ವತಃ ನನಗೂ ಅನುಭವಕ್ಕೆ ಬಂದಿದೆ ಎಂದಿರುವ ಶಾಸಕರು, ನಾಯಿಗಳ ದಂಡು ಮನುಷ್ಯರ ಮೇಲೆ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಕೂಡಲೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಏಕಾಂಗಿ ಶಾಸಕ, ಆದರೂ ಜನಪ್ರಿಯ

    ಮಂಜುನಾಥ್​ರ ಸೇವಾ ನಿಷ್ಠೆಯೇ ಅವರನ್ನು ವಿಧಾನಸಭೆವರೆಗೆ ತಂದು ನಿಲ್ಲಿಸಿದೆ. ನಿಜ ಹೇಳಬೇಕೆಂದರೆ, ಕ್ಷೇತ್ರದಲ್ಲಿ ಜೆಡಿಎಸ್​ನ ಒಬ್ಬ ಬಿಬಿಎಂಪಿ ಸದಸ್ಯನೂ ಇಲ್ಲ. 8 ಕಾರ್ಪೆರೇಟರ್​ಗಳು ಬೇರೆ ಪಕ್ಷಕ್ಕೆ ಸೇರಿದವರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬರುವ 2 ಗ್ರಾಪಂಗಳು ಬಿಜೆಪಿ ತೆಕ್ಕೆಯಲ್ಲಿವೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಒಲಿದಿದ್ದ ಈ ಕ್ಷೇತ್ರ ಈ ಬಾರಿ ಜೆಡಿಎಸ್​ಗೆ ದಕ್ಕುವುದರಲ್ಲಿ ಮಂಜುನಾಥ್ ಅವರ ಸೇವೆ ಕಾರ್ಯತತ್ಪರತೆಯೇ ಮುಖ್ಯ ಪಾತ್ರ ವಹಿಸಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವುದರಿಂದ ಹಿಡಿದು, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ತನಕ ಅವಿರತ ಶ್ರಮ ಅವರನ್ನು ಜನಪ್ರಿಯರನ್ನಾಗಿ ಮಾಡಿದೆ. ಸಮಸ್ಯೆಗಳ ಬಗ್ಗೆ ಅವರಿಗೆ ಪೋನ್ ಮಾಡಿದರೂ ಸಾಕು. ಅಲ್ಲಿಗೆ ಶಾಸಕರು ಹಾಜರು. ಸಂಬಂದಿಸಿದ ಅಧಿಕಾರಿಗಳಿಗೆ ಪೋನ್ ಮಾಡಿ ಸ್ಪಂದಿಸುವುದಲ್ಲದೆ, ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆಹರಿಸುವ ಮೂಲಕ ಕ್ಷೇತ್ರದ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ‘ನನ್ನ ಬಳಿ ಬಂದವರು ಯಾವುದೇ ಪಕ್ಷದವರಿರಲಿ. ಭೇದಭಾವ ಮಾಡುವುದಿಲ್ಲ. ಅವರ ಸಮಸ್ಯೆ ಕೇಳುತ್ತೇನೆ. ನನ್ನ ಶಕ್ತಿಗನುಗುಣವಾಗಿ ಅವರಿಗೆ ಸ್ಪಂದಿಸಿ ಕೆಲಸ ಮಾಡಿಕೊಡುತ್ತೇನೆ. ಭಗವಂತ ಕೊಟ್ಟ ಶಕ್ತಿ ಜನರ ಸೇವೆಗೆ ಸಮರ್ಪಣೆ ಮಾಡುತ್ತೇನೆ’ ಎನ್ನುತ್ತಾರೆ ಮಂಜುನಾಥ್.

    ಪ್ರೇರಕಶಕ್ತಿ ಎಸ್.ಎಂ.ಕೃಷ್ಣ

    ರಾಜ್ಯದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಎಸ್.ಎಂ. ಕೃಷ್ಣ ಅವರೇ ಆರ್. ಮಂಜುನಾಥ್​ರ ಪ್ರೇರಕ ಶಕ್ತಿ! ಪೊಲೀಸ್ ಇಲಾಖೆಯಲ್ಲಿದ್ದ ಮಂಜುನಾಥ್ ಎಸ್​ಎಂಕೆ ಭದ್ರತಾ ಪಡೆಯಲ್ಲಿದ್ದರು. ಎಸ್​ಎಂಕೆ ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಸಮಸ್ಯೆ ಇದ್ದ ನೂರಾರು ಮಂದಿಗೆ ಪರಿಹಾರ ಕೊಡಿಸುವಲ್ಲಿ ಸಫಲರಾಗಿದ್ದರು. ಜನಸೇವೆ ಮಾಡುವ ಗೀಳು ಹತ್ತಿದಾಗ, ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದರು. ಮೊದಲ ಪಾಲಿಕೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋತರು. ಬಳಿಕ,

    2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಖಾತ್ರಿಯಾಗಿತ್ತು. ಕೊನೇ ಹಂತದಲ್ಲಿ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್​ನಿಂದ ಕಣಕ್ಕಿಳಿಯುವಂತೆ ಒಪ್ಪಿಸಿದರು. ಕ್ಷೇತ್ರದಲ್ಲಿದ್ದ ಅಭಿಮಾನಿ ವೃಂದವೂ ಬೆಂಬಲಕ್ಕೆ ನಿಂತಿತು. ‘ಎಸ್.ಎಂ. ಕೃಷ್ಣ ಹಾಗೂ ಪ್ರೇಮಾ ಕೃಷ್ಣ ಅವರೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಅವರೇ ನನಗೆ ಮಾರ್ಗದರ್ಶಕರು’ಎಂದು ಹೇಳುವ ಮಂಜುನಾಥ್, ಸೇವೆಯಲ್ಲಿದ್ದಾಗ ಪ್ರೇಮಾ ಕೃಷ್ಣ ಅವರು ಊಟ ಬಡಿಸಿದ್ದನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.

    ಕರೆಗಳ ಮಹಾಪೂರ

    ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಜನರು ಸಮಸ್ಯೆಗಳನ್ನು ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಜತೆ ಹಂಚಿಕೊಳ್ಳಲು ‘ವಿಜಯವಾಣಿ’ ಏರ್ಪಡಿಸಿದ್ದ ಫೋನ್ ಕಾರ್ಯಕ್ರಮಕ್ಕೆ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಈ ವೇಳೆ ಕೆಲವರಿಗೆ ತಕ್ಷಣವೇ ಪರಿಹಾರ ಲಭಿಸಿದ್ದರಿಂದ ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಜನರ ಫೋನ್ ಕರೆಗಳು ಹಾಗೂ ಸಮಸ್ಯೆಗಳಿಗೆ ಅಷ್ಟೇ ಚಾಕಚಕ್ಯತೆಯಿಂದ ಉತ್ತರಿಸಿದ ಶಾಸಕರು ಕೆಲವರಿಗೆ ತಕ್ಷಣವೇ ಪರಿಹಾರ ಒದಗಿಸಿದರು. ಬಹುತೇಕರ ಫೋನ್ ನಂಬರ್ ಪಡೆದು ಮತ್ತೆ ಕರೆ ಮಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

    ದೇವರಾಜ ಅರಸು ಲೋನ್ ಬಂದಿಲ್ಲ, ಒಂದೂವರೆ ವರ್ಷದಿಂದ ಅರ್ಜಿ ಸಲ್ಲಿಸಿದ್ದೇನೆ. ನಮಗೆ ಲೋನ್ ಕೊಡಿಸಲು ಕ್ರಮವಹಿಸಬೇಕು.

    | ನಾಗರಾಜಶೆಟ್ಟಿ ಶೆಟ್ಟಿಹಳ್ಳಿ

    ಕಳೆದ 2019-20ನೇ ಸಾಲಿನಲ್ಲಿ ದೇವರಾಜ ಅರಸು ನಿಗಮದ ಸಾಲಕ್ಕೆ ಒಟ್ಟು 2,500 ಅರ್ಜಿಗಳು ಬಂದಿದ್ದವು. ಅದರಲ್ಲಿ ಕೇವಲ 102 ಜನರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಬಾರಿ ಆಯ್ಕೆಗೆ ಪರಿಗಣಿಸಲಾಗುವುದು.

    ಮಳೆ ಬಂದರೆ ಚರಂಡಿ ತುಂಬಿಕೊಂಡು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ.

    | ನಾರಾಯಣ ಹೆಗ್ಗನಹಳ್ಳಿ

    ಈ ರಸ್ತೆಯಲ್ಲಿ ಒಳಚರಂಡಿ ಪೈಪ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಕೂಡಲೇ ಸಮಸ್ಯೆ ಪರಿಹಾರವಾಗಲಿದೆ.

    ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕಾರ್ಖಾನೆಗಳು ರಾಸಾಯನಿಕ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿಸುತ್ತಿದ್ದು, ಅದರಿಂದ ಕಲುಷಿತ ನೀರು ಕೆರೆ ಸೇರುತ್ತಿದೆ. ಇದರಿಂದ ಸುತ್ತಲಿನ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ.

    | ಕೆಂಪಣ್ಣ ಪೀಣ್ಯ ಕೈಗಾರಿಕಾ ಪ್ರದೇಶ

    ಕೂಡಲೇ ಈ ಬಗ್ಗೆ ಕೈಗಾರಿಕೆಗಳ ಮಾಹಿತಿ ಸಂಗ್ರಹಿಸಿ ಅಲ್ಲಿ ನೇರವಾಗಿ ಕಲುಷಿತ ನೀರು ಅಥವಾ ರಾಸಾಯನಿಕ ನೀರನ್ನು ಹರಿಸದಂತೆ ಕ್ರಮ ಕೈಗೊಳ್ಳಲಾಗುವುದು. ನಿಮಗೆ ಸಮಸ್ಯೆ ಯಾಗದಂತೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ ಎಂದರು.

    ಪುಂಡ ಪೋಕರಿಗಳ ಮೇಲೆ ನಿಗಾ

    ಕ್ಷೇತ್ರದಲ್ಲಿ ಅಲ್ಲಲ್ಲಿ ಪುಂಡ ಹುಡುಗರ ಕಾಟ ಹೆಚ್ಚಾಗಿದೆ ಎಂದು ಕೆಲ ಮಹಿಳೆಯರು ಶಾಸಕರ ಗಮನಕ್ಕೆ ತಂದರು. ಯಾವ್ಯಾವ ಭಾಗದಲ್ಲಿ ಈ ಸಮಸ್ಯೆ ಇದೆ ಎನ್ನುವುದನ್ನು ತಿಳಿದುಕೊಂಡ ಮಂಜುನಾಥ್, ಅಲ್ಲಿ ಪೊಲೀಸರು ಗಸ್ತು ಹೆಚ್ಚಿಸುವ ಭರವಸೆ ನೀಡಿದರು. ಈ ಕ್ಷೇತ್ರದಲ್ಲಿ ನಾನು ಶಾಸಕನಾಗುವ ಮುನ್ನ ಸರಗಳ್ಳತನ ಅತಿ ಹೆಚ್ಚು ವರದಿಯಾಗು ತ್ತಿದ್ದವು. ಶಾಸಕನಾಗಿ ಆಯ್ಕೆಯಾದ ಮೇಲೆ ಇಡೀ ಕ್ಷೇತ್ರದಲ್ಲಿ ಸರಗಳ್ಳತನ ಮಟ್ಟ ಹಾಕಲಾಗಿದೆ. ಎರಡು ವರ್ಷದಲ್ಲಿ ಯಾವುದೊ ಒಂದು ಪ್ರಕರಣ ವರದಿಯಾಗಿತ್ತು. ಅದನ್ನು ಕೂಡ ಪತ್ತೆಹಚ್ಚಿ ಸರ ಕೊಡಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕರು ಹೇಳುತ್ತಾರೆ.

    ಹೆಗ್ಗನಹಳ್ಳಿ ವಾರ್ಡ್​ನ ಹೊಯ್ಸಳನಗರದಲ್ಲಿ ರಸ್ತೆಗಳಲ್ಲಿ ಪೈಪ್​ಲೈನ್ ಹಾಕಿದ್ದಾರೆ. ಆದಕ್ಕೆ ಮೇಲೆ ಡಾಂಬರೀಕರಣ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ನೀರು ಹರಿಸುವ ಅವಧಿಯನ್ನು ತಿಳಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು.

    | ವೆಂಕಟರಾಜು ಹೆಗ್ಗನಹಳ್ಳಿ

    ಕರೊನಾ ಲಾಕ್​ಡೌನ್ ಮುಗಿದ ತಕ್ಷಣ ಕೂಡಲೇ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಪೂರ್ಣಗೊಳಿಸಲಾಗುವುದು. ಜತೆಗೆ ಉದ್ಯಾನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನೀರು ಒದಗಿಸಲಾಗುವುದು.

    ‘ವಿಜಯವಾಣಿ’ಯಲ್ಲಿ ನಿಮ್ಮ ಫೋನ್​ಇನ್ ನೋಡಿಕೊಂಡು ಕರೆ ಮಾಡಿದ್ದೇನೆ. ನನಗೆ ಅಪಘಾತವಾಗಿದ್ದು, ಪೆನ್ಷನ್ ಕೂಡ ನಿಂತಿದ್ದು, ನೆರವು ನೀಡಬೇಕು.

    | ಡಿ. ವಿಜಯಕುಮಾರ್ ಹೊರಮಾವು

    ಹೊರಮಾವು ಭೈರತಿ ಬಸವರಾಜು ಅವರ ಕ್ಷೇತ್ರಕ್ಕೆ ಬರುತ್ತದೆ. ಅವರಿಗೆ ಕರೆ ಮಾಡಿ, ನಿಮಗೆ ಸಹಾಯ ಮಾಡುವಂತೆ ತಿಳಿಸುತ್ತೇನೆ.

    ಆರ್ಥಿಕ ಹೊರೆಯಿಂದ ಪಾರಾಗಲು ಜನರ ಜೇಬಿಗೆ ಕತ್ತರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts