More

    ಹಾನಗಲ್ಲ ಪುರಸಭೆಗೆ ಶಾಸಕ ಮಾನೆ ದಿಢೀರ್ ಭೇಟಿ

    ಹಾನಗಲ್ಲ: ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಚೇರಿಗೂ ಹಾಜರಾಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆಗೆ ಶನಿವಾರ ದಿಢೀರ್ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು ಮುಖ್ಯಾಧಿಕಾರಿ ಸೇರಿ ಕೆಲ ಅಧಿಕಾರಿ, ಸಿಬ್ಬಂದಿ ಅನುಪಸ್ಥಿತಿ ಕಂಡು ಗರಂ ಆದ ಘಟನೆ ನಡೆಯಿತು.

    ತಮ್ಮ ಪುರಸಭೆಯ ಭೇಟಿ ಕುರಿತು ಗೌಪ್ಯತೆ ಕಾಯ್ದುಕೊಂಡಿದ್ದ ಶಾಸಕ ಮಾನೆ, ನೇರವಾಗಿ ಆಗಮಿಸಿ ಸಿಬ್ಬಂದಿ ಹಾಜರಿ ಪುಸ್ತಕ ಪರಿಶೀಲಿಸಿದರು. ಕಚೇರಿ ಸಮಯ ಆರಂಭವಾದರೂ ಕರ್ತವ್ಯಕ್ಕೆ ಬಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಹಿತಿ ಪಡೆದು ತಕ್ಷಣವೇ ನೋಟಿಸ್ ನೀಡುವಂತೆ ಕಚೇರಿ ವ್ಯವಸ್ಥಾಪಕಿ ಎನ್.ಎಸ್. ನಾಗನೂರ ಅವರಿಗೆ ಸೂಚಿಸಿದರು.

    ಸರ್ಕಾರದ ನಿಯಮಾವಳಿ ಪ್ರಕಾರ ಮುಖ್ಯಾಧಿಕಾರಿ ಪಟ್ಟಣದಲ್ಲೇ ವಾಸವಿದ್ದು, ನಿವಾಸಿಗಳ ಆಗುಹೋಗುಗಳಿಗೆ ಸ್ಪಂದಿಸುವುದು ಕಡ್ಡಾಯ. ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಅಧಿಕಾರಿಗಳು, ಸಿಬ್ಬಂದಿ ರಜಾದಿನ ಹೊರತುಪಡಿಸಿ ನಿರ್ದಿಷ್ಟ ಸಮಯ ನಿಗದಿಪಡಿಸಿ, ಆ ವೇಳೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಾಗಬೇಕು. ದೂರು ಹೊತ್ತು ಬರುವ ನಿವಾಸಿಗಳನ್ನು ಅನವಶ್ಯಕವಾಗಿ ಅಲೆದಾಡಿಸಿದರೆ ಸುಮ್ಮನಿರುವುದಿಲ್ಲ ಎಂದು ತಾಕೀತು ಮಾಡಿದರು.

    ಬೆಳಗ್ಗೆ ಸರಿಯಾದ ಸಮಯಕ್ಕೆ ಕಚೇರಿಯಲ್ಲಿದ್ದು, ಸಾರ್ವಜನಿಕ ಸಂಪರ್ಕಕ್ಕೆ ಲಭ್ಯವಿರಬೇಕು. ಕಚೇರಿ ಹೊರಗಿನ ಕೆಲಸ-ಕಾರ್ಯಗಳಿಗೆ ಮಧ್ಯಾಹ್ನ ಸಮಯ ನಿಗದಿಪಡಿಸಿಕೊಳ್ಳಬೇಕು. ಈಗಾಗಲೇ ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ನೀಡಲಾಗಿದೆ. ಬೇಜವಾಬ್ದಾರಿ ತೋರುವವರ ವಿರುದ್ಧ ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಪುರಸಭೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts