More

    ಇಂದು ಅಂಬೇಡ್ಕರ್ ಜಯಂತಿ; ಒಳಮೀಸಲಾತಿ ಸಾಮಾಜಿಕ ನ್ಯಾಯ…

    ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ನಾಡಿನಾದ್ಯಂತ ಇಂದು ಗೌರವಪೂರ್ವಕವಾಗಿ ಆಚರಿಸಲಾಗುತ್ತಿದೆ. ಅವರ ವಿಚಾರಧಾರೆ, ರಾಷ್ಟ್ರಕ್ಕೆ- ಜನತೆಗೆ ನೀಡಿದ ಕೊಡುಗೆಗಳ ಕುರಿತು ಕೊಳ್ಳೇಗಾಲ ಶಾಸಕ ಕೆ.ಮಹೇಶ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಇಂದು ಅಂಬೇಡ್ಕರ್ ಜಯಂತಿ; ಒಳಮೀಸಲಾತಿ ಸಾಮಾಜಿಕ ನ್ಯಾಯ…ಕೆ.ಮಹೇಶ್

    ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ, ಮೀಸಲಾತಿ ನೀತಿಯನ್ನು ಪರಿಷ್ಕರಿಸುವ ಮೂಲಕ ಸಾಹಸ ಮಾಡಿದೆ. ಹಾಗೆಯೇ, ಇನ್ನೂ ಒಂದು ಹೆಜ್ಜೆ ಮುಂದಿಟ್ಟು ದಲಿತ ಸಮುದಾಯಗಳಿಗೆ ಒಳಮೀಸಲಾತಿ ಜಾರಿಗೊಳಿಸಿ, ಇತಿಹಾಸ ಸೃಷ್ಟಿಸಿದೆ. ಇದನ್ನು ನಿರೀಕ್ಷಿಸದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್, ಇದರಿಂದ ವಿಚಲಿತಗೊಂಡಿವೆ. ಅವು ದಲಿತರ ಹೆಸರು ಹೇಳಿಕೊಂಡು, ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದವು.

    ಮೀಸಲಾತಿಯ ಉದ್ದೇಶವೇನು? ದುರ್ಬಲ ಮತ್ತು ಅವಕಾಶವಂಚಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣವು ಒಂದು ಸುಸಂಸ್ಕೃತ ಮಾದರಿಯಲ್ಲಿ ನಡೆಯಬೇಕೆನ್ನುವುದು ಇದರ ಹಿಂದಿನ ತತ್ತ್ವ. ಇದು ಈ ದೇಶಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ. ಇದರಿಂದ ದುರ್ಬಲ ಸಮುದಾಯಗಳಿಗೆ ಲಾಭವೂ ಆಗಿದೆ. ಆದರೆ, ಅಂಬೇಡ್ಕರ್ ಆಶಿಸಿದ್ದಂತೆ ಇದರ ಲಾಭ ಈ ಸಮಾಜದ ಕಟ್ಟಕಡೆಯ ಸಮುದಾಯದ ಸದಸ್ಯರಿಗೆ ತಲುಪಿತೇ ಎಂದರೆ, ಇಲ್ಲ ಎನ್ನುವುದೇ ಉತ್ತರವಾಗಿದೆ. ಇದಕ್ಕೆ ನಾವು ನಮ್ಮ ಸಾಮಾಜಿಕ ವ್ಯವಸ್ಥೆಯ ಸ್ತರ ವಿನ್ಯಾಸಗಳನ್ನು ನೋಡಬೇಕು. ಉದಾಹರಣೆಗೆ ಹೇಳುವುದಾದರೆ, ನಮ್ಮಲ್ಲಿ ನಿಜವಾದ ಅಸ್ಪೃ್ಯರು ಎಂದರೆ ಯಾರು ಎಂಬ ಬಗ್ಗೆ ನಮಗೆ ಸರಿಯಾದ ತಿಳಿವಳಿಕೆ ಇರಬೇಕು. ಸಾಮಾಜಿಕವಾಗಿ ಎಡಗೈ (ಆದಿದ್ರಾವಿಡ) ಮತ್ತು ಮತ್ತು ಬಲಗೈ (ಆದಿಕರ್ನಾಟಕ) ಸಮುದಾಯಗಳು ಮಾತ್ರ ಅಸ್ಪೃ್ಯರಾಗಿದ್ದು ತೀರಾ ಹಿಂದುಳಿದ ಸಮುದಾಯಗಳಾಗಿವೆ. ಬೇರೆ ಬೇರೆ ಮಾನದಂಡಗಳ ಅನುಸಾರ, ಸರ್ಕಾರಿ ವ್ಯವಸ್ಥೆಯಲ್ಲಿರುವ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಹಲವು ಸ್ಪ ೃ್ಯ ಸಮುದಾಯಗಳನ್ನೂ ಸೇರಿಸಲಾಗಿದೆ.

    ಬಿಜೆಪಿ ಅಂತ್ಯೋದಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಜನಪರ ಪಕ್ಷವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ತ್ವದಲ್ಲಿ ಅಡಕಗೊಂಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿ ಸರ್ಕಾರವು ಮೀಸಲಾತಿ ನೀತಿಯ ಮೂಲತತ್ತ್ವಗಳಲ್ಲೇ ಹೇಳಿರುವಂತೆ ಹತ್ತು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು ಎನ್ನುವ ಆಶಯ ಕೈಗೆತ್ತಿಕೊಂಡು, ಸಾಕಾರಗೊಳಿಸಿದೆ. ಇದರಿಂದಾಗಿ, ಪರಿಶಿಷ್ಟ ಜಾತಿಗಳಿಗೆ ನೀಡಲಾಗುವ ಮೀಸಲಿನಲ್ಲಿ ಒಳಮೀಸಲಾತಿ ತರಬೇಕೆನ್ನುವ ದಲಿತ ಬಂಧುಗಳ ಎರಡು ದಶಕಗಳ ಕೂಗಿಗೆ ನ್ಯಾಯ ಕೊಟ್ಟಂತಾಗಿದೆ.

    ಎಸ್ಸಿ ವರ್ಗಗಳಿಗೆ ಇದುವರೆಗೂ ಇದ್ದ ಶೇಕಡ 15ರಷ್ಟು ಮೀಸಲನ್ನು 17ಕ್ಕೆ ಏರಿಸಲಾಗಿದ್ದು, ಇದರಲ್ಲಿ ಎಡಗೈ ಪಂಗಡದವರಿಗೆ ಶೇಕಡ 6ರಷ್ಟು ಮತ್ತು ಬಲಗೈ ಪಂಗಡದವರಿಗೆ ಶೇಕಡ 5.5ರಷ್ಟು ಒಳಮೀಸಲಾತಿ ಕಲ್ಪಿಸಲಾಗಿದೆ. ಇದು ನಿಜಕ್ಕೂ ವೈಜ್ಞಾನಿಕವಾಗಿದೆ. ಹಾಗೆಂದು ಸ್ಪೃ್ಯ ದಲಿತ ಸಮುದಾಯಗಳಾದ ಭೋವಿ, ಬಂಜಾರ, ಕೊರಮ ಮತ್ತು ಕೊರಚ ಸಮುದಾಯಗಳಿಗೆ ಅನ್ಯಾಯವನ್ನೇನೂ ಮಾಡಿಲ್ಲ ಅಥವಾ ಅವರನ್ನೆಲ್ಲ ಈ ಪಟ್ಟಿಯಿಂದೇನೂ ಹೊರಹಾಕಿಲ್ಲ. ಬದಲಿಗೆ, ಅವರಿಗೂ ಜನಸಂಖ್ಯೆಗೆ ತಕ್ಕಂತೆ ಶೇಕಡಾ 4.5ರಷ್ಟು ಒಳಮೀಸಲಾತಿ ನೀಡಲಾಗಿದೆ. ಮಿಕ್ಕಂತೆ, ಕೃಷಿಯನ್ನೇ ಹೆಚ್ಚಾಗಿ ನಂಬಿಕೊಂಡಿರುವ ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯಗಳಿಗೆ ತಲಾ ಶೇಕಡ 2ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಇದರಿಂದ ಲಿಂಗಾಯತರಿಗೆ ಈಗ ಶೇಕಡ 7ರಷ್ಟು (ಮೊದಲಿದ್ದುದು ಶೇ.5) ಮತ್ತು ಒಕ್ಕಲಿಗರಿಗೆ ಶೇಕಡ 6ರಷ್ಟು (ಮೊದಲಿದ್ದುದು ಶೇಕಡಾ 4) ಮೀಸಲಾತಿ ಸಿಗುತ್ತಿದೆ. ಈ ನಿರ್ಧಾರಗಳನ್ನೆಲ್ಲ ಶೆಡ್ಯೂಲ್-9ರಲ್ಲಿ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹೀಗಾಗಿ, ಈ ಪರಿಷ್ಕೃತ ಮೀಸಲಾತಿ ಮತ್ತು ಒಳಮೀಸಲಾತಿ ಎರಡಕ್ಕೂ ನ್ಯಾಯಾಂಗದ ಅಡಚಣೆಯೇನೂ ಇಲ್ಲ.

    ಇನ್ನು ಮುಸ್ಲಿಮರಿಗೆ ನೀಡಿದ್ದ ಶೇಕಡ 4ರಷ್ಟು ಧರ್ವಧಾರಿತ ಮೀಸಲಾತಿ ರದ್ದುಪಡಿಸಿರುವ ವಿಚಾರಕ್ಕೆ ಬರೋಣ. ಇಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್​ಗಳು ವಂಚನೆ ಮಾಡಿಕೊಂಡು ಬಂದಿದ್ದವು. ಏಕೆಂದರೆ, ಧರ್ವಧಾರಿತ ಮೀಸಲಾತಿಗೆ ಸಂವಿಧಾನದಡಿಯಲ್ಲಿ ಅವಕಾಶವೇ ಇಲ್ಲ. ಆದರೂ ಇದು ಸರಿಸುಮಾರು ಮೂರು ದಶಕಗಳಿಂದ ಉಳಿದುಕೊಂಡು ಬಂದಿತ್ತು. ಇದರಲ್ಲಿ, ಮುಸ್ಲಿಮರು ಮಾತ್ರ ಅಲ್ಪಸಂಖ್ಯಾತರು ಎಂದು ಪರಿಗಣಿಸುವ ವೋಟ್ ಬ್ಯಾಂಕ್ ಧೋರಣೆ ಇದೆಯಷ್ಟೆ. ಹಾಗಾದರೆ ಕ್ರೖೆಸ್ತ, ಬೌದ್ಧ, ಜೈನ, ಸಿಖ್ ಮುಂತಾದ ಮೈನಾರಿಟೀಸ್​ಗಳ ಹಕ್ಕಿನ ಪ್ರಶ್ನೆ ಏನು? ಇದರಿಂದ ಮುಸ್ಲಿಮರು ಮತ್ತಷ್ಟು ಹಿಂದಕ್ಕೆ ಹೋದರೇ ವಿನಾ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಖ್ಯವಾಹಿನಿಗೇ ಬರಲಿಲ್ಲ. ಈಗ ಅವರನ್ನು ಶೇಕಡ 10ರಷ್ಟಿರುವ ಇಡಬ್ಲು್ಯಎಸ್ ಮೀಸಲಾತಿ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಅವರಿಗೆ ಅವಕಾಶಗಳು ಮೊದಲಿಗಿಂತ ಹೆಚ್ಚಾಗಿ ಸಿಗುವುದರಲ್ಲಿ ಅನುಮಾನವಿಲ್ಲ.

    ಮೀಸಲಾತಿ ಪರಿಷ್ಕರಣೆ ಮತ್ತು ಒಳಮೀಸಲಾತಿ ಜಾರಿ ಮೂಲಕ ಬಿಜೆಪಿ ಸರ್ಕಾರವು ಬಸವಣ್ಣ, ಜ್ಯೋತಿಬಾ ಫುಲೆ, ವೀರ ಸಾವರ್ಕರ್, ಅಂಬೇಡ್ಕರ್, ದೀನ್​ದಯಾಳ್ ಉಪಾಧ್ಯಾಯ ಅವರ ಆಸೆಯ ಸಮಸಮಾಜವನ್ನು ಕಟ್ಟುವತ್ತ ದಾಪುಗಾಲಿಟ್ಟಿದೆ. ನುಡಿ ಮತ್ತು ನಡೆ ಎರಡೂ ಒಂದಾಗಿರುವ ಈ ಕಳಕಳಿಯು ಮೀಸಲಾತಿಯ ಮೂಲಗುರಿಗಳನ್ನು ನನಸು ಮಾಡಲಿದೆ. ಮುಂಬರುವ ವರ್ಷಗಳಲ್ಲಿ ಈ ವಿಚಾರದಲ್ಲಿ ಉಳಿದ ರಾಜ್ಯಗಳು ನಿಸ್ಸಂಶಯವಾಗಿಯೂ ಕರ್ನಾಟಕದ ಜಾಡಿನಲ್ಲೇ ಅಡಿ ಇಡಲಿವೆ.

    (ಲೇಖಕರು ಕೊಳ್ಳೇಗಾಲ ಶಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts