More

    ಮಂಡ್ಯ ನಗರದಲ್ಲಿ ಆಪೆ ಆಟೋ ಹಾವಳಿ: ಶಾಸಕರೆದುರು ಅಳಲು ತೋಡಿಕೊಂಡ ಚಾಲಕರು

    ಮಂಡ್ಯ: ಆಪೆ ಆಟೋ ಚಾಲಕರು ನಿಯಮ ಉಲ್ಲಂಘಿಸಿ ಬಾಡಿಗೆ ಹೊಡೆಯುತ್ತಿದ್ದಾರೆ. ಮಾತ್ರವಲ್ಲದೆ ಗ್ರಾಮೀಣ ಭಾಗದಿಂದ ನಗರಕ್ಕೂ ಜನರನ್ನು ಕರೆದುಕೊಂಡು ಬಂದರೆ ಪ್ಯಾಸೆಂಜರ್ ಆಟೋ ಓಡಿಸುವವರು ಏನು ಮಾಡಬೇಕು. ಆಟೋ ನಿಲ್ದಾಣಗಳಿಗೆ ಸೌಲಭ್ಯ ಕಲ್ಪಿಸಿಕೊಡಬೇಕು.
    ಇದು ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್(ಉಪ ವಿಭಾಗ) ಸಹಯೋಗದಲ್ಲಿ ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಚಾಲಕರು ಬೇಸರ ತೋಡಿಕೊಂಡ ಪರಿ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಗೂಡ್ಸ್ ಆಟೋದವರಿಗೂ ಕರೆದು ಸಭೆ ನಡೆಸುತ್ತೇವೆ. ಅವರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸುವ ಮಾರ್ಗ ಕಂಡುಕೊಳ್ಳಲಾಗುವುದು. ಇನ್ನು ಆಟೋ ಚಾಲಕರು ಅವರ ಸೀನಿಯರಿಟಿ ಮೇಲೆ ಚಾಲನೆ ಮಾಡಬೇಕು. ಬಸ್‌ಗಳು ಸಹ ಎಲ್ಲೆಂದರಲ್ಲಿ ನಿಲ್ಲಿಸುವುದಕ್ಕೆ ಕಡಿವಾಣ ಹಾಕಲಾಗಿದೆ. ಬಸ್‌ಗಳನ್ನು ನಿಲ್ದಾಣ ಮತ್ತು ಬಸ್ ಬೇಗಳಲ್ಲಿಯೇ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಂತೆಯೇ ಆಟೋ ಚಾಲಕರ ಸಂಘಕ್ಕೆ ಶಾಸಕರ ಅನುದಾನದಲ್ಲಿ ಒಂದು ಲಕ್ಷ ರೂ ನೀಡುತ್ತೇನೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
    ಅನ್ಯ ರಾಜ್ಯಗಳಿಂದ ಬಂದ ಆಟೋಗಳು ನಗರದಲ್ಲಿ ಬಾಡಿಗೆ ಹೊಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಅವುಗಳನ್ನು ತೆರವುಗೊಳಿಸಿ ಇಲ್ಲಿನ ಆಟೋ ಮಾಲೀಕರು ಮತ್ತು ಚಾಲಕರಿಗೆ ಅನುಕೂಲ ಮಾಡಿಕೊಡಲಾಗುವುದು. ಪೊಲೀಸರ ನಡುವೆ ವಾಗ್ವಾದ ಮಾಡದೇ ಸೌಹಾರ್ದತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಗರದ ರಸ್ತೆಗಳನ್ನು ಡಾಂಬರೀಕರಣ ಮಾಡಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
    ಪೊಲೀಸರು ಆಟೋ ಚಾಲಕರಿಗೆ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಅವರ ಪರವಾಗಿ ಪೊಲೀಸರು ಇರಬೇಕು. ಪೊಲೀಸ್ ಮತ್ತು ಆಟೋ ಚಾಲಕರು ಸೌಹಾದರ್ತಯುತವಾಗಿ ನಡೆದುಕೊಳ್ಳಬೇಕು. ಆಟೋ ರಿಜಿಸ್ಟ್ರೇಷನ್‌ಗಳು ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಬೇರೆ ರಾಜ್ಯದಿಂದ ಆಟೋ ತಂದರೂ ಜಿಲ್ಲೆಯಲ್ಲಿ ರಿಜಿಸ್ಟ್ರರ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಆಟೋ ಚಾಲನೆಗೆ ಅವಕಾಶ ನೀಡುವುದಿಲ್ಲ. ನೆಲದ ಕಾನೂನು ಗೌರವಿಸಲು ಸಹಕರಿಸಬೇಕು. ಪಕ್ಕದ ಕೇರಳ ಮತ್ತು ಹೊರ ರಾಜ್ಯಗಳಿಂದ ಆಟೋಗಳನ್ನು ತಂದು ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರಿಗೆ ಅವಕಾಶ ನೀಡದೇ ಇಲ್ಲಿನ ಸ್ಥಳೀಯರಿಗೆ ನೆರವಾಗುವಂತೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
    ಸಭೆಯಲ್ಲಿ ಡಿವೈಎಸ್‌ಪಿ ಶಿವಮೂರ್ತಿ, ಸಿಪಿಐಗಳಾದ ಜಾಯ್ ಆಂಥೋನಿ, ನವೀನ್ ಸುಬೇದಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts