More

    ತಹಸಿಲ್ ಕಚೇರಿ ನಿರ್ಮಾಣಕ್ಕೆ ನೀಲಿನಕ್ಷೆ

    ಕುಕನೂರು: ತಾಲೂಕು ಕೇಂದ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದಿಂದ ಹೊಸ ಹೊಸ ಯೋಜನೆ ರೂಪಿಸಲಾಗಿದೆ. ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಕುಕನೂರು ಅಭಿವೃದ್ಧಿ ಕುರಿತು ನಡೆದ ಸಾರ್ವಜನಿಕ ಸಭೆಯಲ್ಲಿ ಶನಿವಾರ ಮಾತನಾಡಿದರು. ಈ ಹಿಂದೆ ಸಮುದಾಯ ಭವನ ನಿರ್ಮಾಣ ಮಾಡಿದ ಕಟ್ಟಡದಲ್ಲಿ ತಹಸಿಲ್ ಕಚೇರಿ ಪ್ರಾರಂಭಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ಪಟ್ಟಣದಲ್ಲಿ ತಹಸಿಲ್ ಕಚೇರಿ, ಕ್ರೀಡಾಂಗಣ, ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ.

    ಈಗಾಗಲೇ ತಹಸಿಲ್ ಕಚೇರಿ ನಿರ್ಮಾಣಕ್ಕೆ 40 ಕೋಟಿ ರೂ. ಅಂದಾಜು ನೀಲಿನಕ್ಷೆ ತಯಾರಿಸಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕಾಮಗಾರಿಗೆ ಬೇಕಾಗುವ ಹಣವನ್ನು 2023-24ನೇ ಸಾಲಿನಲ್ಲಿ ಭರಿಸುವಂತೆ ತಿಳಿಸಲಾಗಿದೆ. ಅಲ್ಲದೆ, ಭೂಸ್ವಾಧಿನ ಪ್ರಕ್ರಿಯೆ ಕೂಡ ಮಾಡಿಲ್ಲ.

    ಹಣ ಕೂಡ ಇಲ್ಲ. ಭೂಮಿ ಬೇಕು. ಒಂಬತ್ತು ಎಕರೆ ಭೂಮಿ ಗುರುತಿಸಿದ್ದ ರೈತರು ಕೂಡ ನ್ಯಾಯಾಲಯ ಮೊರೆ ಹೋಗಿದ್ದಾರೆ. ಅಲ್ಲದೆ, ಶಾಸಕರು ಹೇಳಿದಲ್ಲಿಯೇ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಸರ್ಕಾರದ ಸಚಿವರು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ಯಾವುದೇ ಸುಳ್ಳು ಹೇಳಬಾರದು ಎಂದರು.

    ಕುಕನೂರು, ಯಲಬುರ್ಗಾ ಪಟ್ಟಣಕ್ಕೆ ರೈಲು ನಿಲ್ದಾಣವಾಗಿದ್ದು, ಐದು ವರ್ಷದಲ್ಲಿ ರೈಲುಗಳು ಹೆಚ್ಚು ಸಂಚಾರಗೊಳ್ಳಲಿವೆ. ಯಲಬುರ್ಗಾ ಪಟ್ಟಣಕ್ಕೆ 96 ಕೋಟಿ ರೂ. ವೆಚ್ಚದಲ್ಲಿ ಒಳ ಚರಂಡಿ ಯೋಜನೆ ಮಂಜೂರಾಗಿದ್ದು, ಮುಂದಿನ ವರ್ಷದಲ್ಲಿ ಕುಕನೂರು ಪಟ್ಟಣಕ್ಕೂ ಯೋಜನೆ ರೂಪಿಸಲಾಗುವುದು. ಕುಕನೂರಿಗೆ 100 ಹಾಸಿಗೆ ಆಸ್ಪತ್ರೆಗೆ ಮಂಜೂರಾತಿ ದೊರೆಯಲಿದೆ. ವ್ಯಾಪಾರಸ್ಥರಿಗೆ ಎಪಿಎಂಸಿಯಲ್ಲಿ ಏಳು ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗುವುದು. ಇನ್ನು ಪ್ರೌಢಶಾಲೆ, ಪಿಯುಸಿ ಕಾಲೇಜು, ಕ್ಷೇತ್ರದ 10 ಗ್ರಾಮಗಳಿಗೆ ಹೊಸ ಬಸ್ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. 38 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೂಡ ಮಾಡಲಾಗುವುದು ಎಂದರು.

    ಎಸಿ ಮಹೇಶ ಮಾಲಗತ್ತಿ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಪ್ರಮುಖವಾಗಿ ತಹಸಿಲ್ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಬೇಕು. ಅಂದಾಗ ಜನರಿಗೆ ಅನುಕೂಲವಾಗುತ್ತದೆ. ಕೆಲಸಗಳು ಕೂಡ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ. ಸರ್ಕಾರದ ಭೂಮಿಯಿದ್ದು, ಜನರ ಸಹಕಾರ ಅಗತ್ಯವಿದೆ ಎಂದರು.

    ತಹಸೀಲ್ದಾರ್ ಎಚ್.ಪ್ರಾಣೇಶ ಮಾತನಾಡಿದರು. ತಾಪಂ ಇಒ ಸಂತೋಷ ಬಿರಾದಾರ, ಸಿಪಿಐ ಮೌನೇಶ ಮಾಲಿಪಾಟೀಲ್, ಪಪಂ ಮುಖ್ಯಾಧಿಕಾರಿ ಸುಬ್ರಮಣ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಹೇಮಂತ್‌ರಾಜ್, ಮಾಜಿ ಜಿಪಂ ಸದಸ್ಯ ಹನುಮಂತಗೌಡ ಚಂಡೂರು, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಚಂದ್ರಶೇಖರ್ ಹಿರೇಮಠ, ಮಂಜುನಾಥ ಕಡೆಮನಿ, ಕಾಸಿಂಸಾಬ್ ತಳಕಲ್ ಇತರರಿದ್ದರು.

    ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತುಂಗಭದ್ರಾ ನದಿಯಿಂದ ಕುಕನೂರು, ಯಲಬುರ್ಗಾ, ಭಾನಾಪುರ, ತಳಕಲ್, ಇಂಜಿನಿಯರ್ ಕಾಲೇಜು, ತಳಕಲ್ ರೈಲ್ವೆ ಜಂಕ್ಷನ್‌ಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡುವ ಉದ್ದೇಶದಿಂದ 277 ಕೋಟಿ ರೂ. ಅನುದಾನದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ವಾರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಮುಂದಿನ 2051ರ ಜನಸಂಖ್ಯೆ ಆಧಾರದಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
    ಬಸವರಾಜ ರಾಯರಡ್ಡಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts