More

    ಸಂಪರ್ಕ ಸೇತುವೆ, ಅಣೆಕಟ್ಟು ಪೂರ್ಣ

    ಕೊಕ್ಕರ್ಣೆ: ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಯಾರು ದೋಣಿಕಳು ಎಂಬಲ್ಲಿ ಸಣ್ಣ ನೀರಾವರಿ ಮೂಲಕ ಉಡುಪಿ ಶಾಸಕ ಕೆ.ರಘುಪತಿ ಭಟ್ ಮುತುವರ್ಜಿಯಲ್ಲಿ 4.75 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಭರದಿಂದ ಸಾಗಿದ್ದು, ಶೀಘ್ರದಲ್ಲಿ ಸವಾರರಿಗೆ ಸಂಚಾರಕ್ಕೆ ಮುಕ್ತವಾಗಲಿದೆ. ನಾಲ್ಕೂರು ಗ್ರಾಮದ ಮಿಯಾರು, ದೋಣಿಕಳು, ಸೆಟ್ಟೋಳ್ಳಿ ಈ ಭಾಗದ ನೂರಾರು ಎಕರೆ ಜಮೀನಿಗೆ ನೀರುಣಿಸಲು ಪೂರಕವಾದ ಸೇತುವೆ ಸಹಿತ ಅಣೆಕಟ್ಟು ಕೃಷಿಕರ ಕನಸು ನನಸು ಮಾಡಿದೆ. ಕಳೆದ ಜನವರಿಯಲ್ಲಿ ಪ್ರಾರಂಭವಾದ ಕಿಂಡಿ ಅಣೆಕಟ್ಟಿನ ಕೆಲಸ ಸೀತಾನದಿಯಲ್ಲಿ ಬಂಡೆಕಲ್ಲಿನ ತೆರವುಗೊಳಿಸುವ ಕಾಮಗಾರಿಯಿಂದ ವಿಳಂಬಗೊಂಡಿತ್ತು. ಈಗ ಕಾಮಗಾರಿ ಚುರುಕು ಪಡೆದು ಶೇ.95ರಷ್ಟು ಕೆಲಸ ಪೂರ್ಣಗೊಂಡಿದೆ. ಈ ಅಣೆಕಟ್ಟು ಜತೆ ನಿರ್ಮಾಣವಾಗುತ್ತಿರುವ ಸೇತುವೆಯಿಂದ ನಾಲ್ಕೂರು ಗ್ರಾಮ ಮತ್ತು ಬೆಳ್ವೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಹತ್ತಿರವಾಗಲಿದೆ. ಬೆಳ್ವೆ, ಮಡಾಮಕ್ಕಿ, ಗೋಳಿಯಂಗಡಿ, ಶೇಡಿಮನೆ, ಮಿಯಾರು, ನಾಲ್ಕೂರು, ಮುದ್ದೂರು ಪರಿಸರ ಸಂಪರ್ಕಿಸಲು ಈ ರಸ್ತೆ ಸಮೀಪವಾಗಿರುವುದರಿಂದ ನಿತ್ಯ ಓಡಾಟಕ್ಕೆ ಸೀತಾನದಿಯಲ್ಲಿ ನೀರಿನ ಹರಿವು ಕಡಿಮೆಯಾದ ತಕ್ಷಣ ಇದನ್ನೆ ಹೆಚ್ಚಾಗಿ ಬಳಸುತ್ತಾರೆ. ಸುತ್ತಮುತ್ತಲಿನ ರೈತರಿಗೂ ಇದು ಅನುಕೂಲವಾಗಲಿದೆ. ಎರಡೂ ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಹಸಿರಾಗಲಿದೆ. ಪ್ರತಿ ಮಳೆಗಾಲ ಬಳಿಕ ಕೃಷಿಕರು ನೀರಿಗಾಗಿ ಸೀತಾನದಿಯ ದೊಡ್ಡ ದೊಡ್ಡ ಗುಂಡಿಗಳನ್ನೇ ಅವಲಂಬಿಸುತ್ತಿದ್ದರು. ಈ ಬಾರಿ ನೂತನ ಅಣೆಕಟ್ಟು ನಿರ್ಮಾಣವಾಗುವುದರಿಂದ ತೊಂದರೆ ತಪ್ಪಲಿದೆ.

    5 ಕಿ.ಮೀ ಅಂತರದಲ್ಲಿ ಸಂಪರ್ಕ: ನಾಲ್ಕೂರು ಮುದ್ದೂರು ಜನರಿಗೆ ಬೆಳ್ವೆ, ಗೋಳಿಯಂಗಡಿ ಮೊದಲಾದ ಊರು ತಲುಪಲು 20 ಕಿ.ಮೀ. ದೂರ ಕ್ರಮಿಸಬೇಕಿತ್ತು. ನೂತನ ಸೇತುವೆಯಿಂದ ಕೇವಲ 5 ಕಿ.ಮೀ. ಅಂತರದಲ್ಲಿ ಸಂಪರ್ಕಿಸಬಹುದು. ಕಿಂಡಿ ಅಣೆಕಟ್ಟು 16 ಪಿಲ್ಲರ್ ಹೊಂದಿದ್ದು, 185 ಮೀಟರ್ ಉದ್ದ, ಅಣೆಕಟ್ಟಿನಿಂದ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗಲಿದೆ. ಸೇತುವೆಯ ಎರಡೂ ಕಡೆ ಕಾಂಕ್ರೀಟ್ ಗೋಡೆ ನಿರ್ಮಿಸಲಾಗಿದೆ.

    ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿಗೆ 4 ಮೀಟರ್ ಇದ್ದ ಎತ್ತರವನ್ನು 6.15 ಮೀಟರ್‌ಗೆ ಏರಿಕೆ ಮಾಡಿದ್ದು ಪುನಃ ಇಲಾಖೆ 88 ಲಕ್ಷ ರೂ. ಬಿಡುಗಡೆಗೊಳಿಸಿದೆ. ಅಣೆಕಟ್ಟಿನ ಜವಾಬ್ದಾರಿ ಒಂದು ವರ್ಷದ ತನಕ ಇದ್ದು, ಅನಂತರ ಇಲಾಖೆಗೆ ಹಸ್ತಾಂತರಿಸಲಾಗುವುದು. ಕಿಂಡಿ ಅಣೆಕಟ್ಟಿನಲ್ಲಿ ಯಾಂತ್ರೀಕೃತ ಮತ್ತು ಮಾನವ ಸಹಿತ ಗೇಟುಗಳು ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗದು.
    -ರತ್ನಾಕರ ಶೆಟ್ಟಿ, ಮ್ಯಾನೇಜರ್

    ದೂರದ ಗೋಳಿಯಂಗಡಿ ಬೆಳ್ವೆ ಸಂಪರ್ಕಿಸಲು ನಂಚಾರು ಮಾರ್ಗವಾಗಿ ಕ್ರಮಿಸಲು 20 ಕಿ.ಮೀ ದೂರ ಹೋಗಬೇಕಿತ್ತು. ನೂತನ ಸೇತುವೆಯಿಂದ ತಾರಿಕಟ್ಟೆ ಮಾರ್ಗವಾಗಿ ಸಂಪರ್ಕಿಸಬಹುದು. ಇದರಿಂದ ಸಾರ್ವಜನಿಕರಿಗೆ ತುಂಬ ಸಹಕಾರಿ.
    ಗಣೇಶ್ ನಾಯ್ಕ, ಮಿಯಾರು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts